ಬೆಂಗಳೂರು: ವಾಣಿಜ್ಯ ಉದ್ದೇಶಕ್ಕೆ ಮಾತ್ರವಲ್ಲದೆ ಕೃಷಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ (ಐಐಎಚ್ಆರ್) ಚಿತ್ರಕಲಾ ಪರಿಷತ್‌ನಲ್ಲಿ ಇಂದಿನಿಂದ ಮಾವು, ಹಲಸು ಮೇಳ ಏರ್ಪಡಿಸಿದ್ದು, ಯಶಸ್ವಿಯಾಗಿ ನಡೆಯುತ್ತಿದೆ.
ಚಿತ್ರಕಲಾ ಪರಿಷತ್ ಅಧ್ಯಕ್ಷರಾದ ಡಾ.ಬಿ.ಎಲ್ ಶಂಕರ್ ಹಾಗೂ ಐಐಎಚ್ಆರ್ ಅಧ್ಯಕ್ಷರಾದ ಡಾ.ದಿನೇಶ್ ಕಾರ್ಯಕ್ರಮ ಉದ್ಘಾಟನೆ ಮಾಡಿದರು. ಐಐಎಚ್ಆರ್ನಲ್ಲಿ ಬೆಳೆಸಿದ ಮಾರುಕಟ್ಟೆಯಲ್ಲಿ ತಲಾ 200 ರೂ. ಇರುವ ವಿವಿಧ ಸಸಿಗಳನ್ನು 30 ರೂಪಾಯಿಗೆ ಮಾರಾಟ ಮಾಡಲಾಯಿತು. ತಾರಸಿ ಹಾಗೂ ಗಾರ್ಡನ್ಗಳಲ್ಲಿ ಬೆಳೆಯುವ ಲಕ್ಷ್ಮಣ ಫಲ, ಚೆರ್ರಿ, ಫ್ಯಾಷನ್ ಫ್ರೂಟ್, ಡ್ರಾಗನ್ ಫ್ರೂಟ್ಗಳನ್ನು ತಲಾ 30 ರೂಪಾಯಿಗೆ ಹಾಗೂ 150 ರೂಪಾಯಿ ಇರುವ ಹಲಸನ್ನು ಐವತ್ತು ರುಪಾಯಿಗೆ ಮಾರಾಟ ಮಾಡಲಾಯಿತು.
ಹಿರಿಯ ಪೊಲೀಸ್ ಅಧಿಕಾರಿ ಎಡಿಜಿಪಿ ಚರಣ್ ರೆಡ್ಡಿಯವರು ತಮ್ಮ ತಾಯಿ ವಿಜಯ ಲಕ್ಮೀ ಅವರ ತೋಟದಲ್ಲಿ ಬೆಳೆದ ಮಾವಿನ ಹಣ್ಣನ್ನು ಇದೇ ಮೊದಲ ಬಾರಿಗೆ ಮಾರಾಟಕ್ಕೆಂದು ಮೇಳದಲ್ಲಿ ಇಟ್ಟಿದ್ದರು. ಆಂಧ್ರದ ಚಿತ್ತೂರಿನಿಂದ ಬಂದ ಅವರು ತಮ್ಮ ತೋಟದಲ್ಲಿ ಬೆಳೆದಿರುವ ಇಮಾಮ್ ಪಸಂದ್, ಬನೆಶನ್, ಮಲ್ಲಿಕಾ, ಅಲ್ಫೆನ್ಸೋ ಮಾವಿನ ಗಿಡಗಳನ್ನು ಮಾರಾಟ ಮಾಡಿದರು. ಈ ಮೇಳದಲ್ಲಿ 18 ವರ್ಷದಿಂದ ಹಲಸಿನ ಗಿಡದ ಕಸಿ ಮಾಡಿ ಮಾರಾಟ ಮಾಡುತ್ತಿರುವ ಪುತ್ತೂರಿನ ಅನಿಲ್ ಎಂಬ ರೈತನ ಹಲಸಿನ ಗಿಡಗಳಿಗೆ ಭಾರೀ ಬೇಡಿಕೆ ಇತ್ತು.
ಮಾರಾಟ ಅಷ್ಟೇ ಅಲ್ಲದೆ ಸಾರ್ವಜನಿಕರ ಅರಿವಿಗಾಗಿ ಐಐಎಚ್ಆರ್ ಸಂಶೋಧನೆ ನಡೆಸಿರುವ 300 ತಳಿಯ ಮಾವು ಹಾಗೂ 80 ತಳಿಯ ಹಲಸನ್ನು ಪ್ರದರ್ಶನದಲ್ಲಿಡಲಾಗಿತ್ತು. ಮಾವು ಹಲಸಿನ ಮಾರಾಟ ಅಷ್ಟೇ ಅಲ್ಲದೆ ಹಲಸಿನ ಚಿಪ್ಸ್, ಹಪ್ಪಳ, ಹಲ್ವ ಚಟ್ನಿಪುಡಿ, ಉಪ್ಪಿನಕಾಯಿ ಸೇರಿದಂತೆ 60 ಬಗೆಯ ಉತ್ಪನ್ನಗಳನ್ನು ಮಾರಾಟ ಮಾಡಲಾಯಿತು. ಮಾವು ಹಲಸು ಮೇಳ ನಾಳೆಯೂ ನಡೆಯಲಿದ್ದು, ಸಿಲಿಕಾನ್ ಸಿಟಿ ಜನರಿಗೆ ವೀಕ್ ಎಂಡ್ ಕಳೆಯಲು ಉತ್ತಮ ಇವೆಂಟ್ ಇದಾಗಲಿದೆ.