ಬೆಂಗಳೂರು : ಪೊಲೀಸರು ಲಾಕ್ಡೌನ್ ವೇಳೆ ಸಾರ್ವಜನಿಕರಿಗೆ ಕಿರುಕುಳ ನೀಡುತ್ತಿರುವುದಾಗಿ ಫೇಸ್ಬುಕ್ ಲೈವ್ನಲ್ಲಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ಗೆ ದೂರು ನೀಡಿದ್ದು, ಈ ಕುರಿತು ಕ್ರಮ ಜರುಗಿಸಲಾಗುವುದು ಎಂದು ಆಯುಕ್ತರು ತಿಳಿಸಿದ್ದಾರೆ.
ಫೇಸ್ಬುಕ್ ಲೈವ್ ಬಳಿಕ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಮಾಧ್ಯಮಗಳ ಜೊತೆ ಮಾತನಾಡಿ, ನಗರದ ಜನತೆ ಲಾಕ್ಡೌನ್ ವೇಳೆ ಪೊಲೀಸರು ಕಿರುಕುಳ ನೀಡುತ್ತಿದ್ದಾರೆ ಎನ್ನುವ ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು.
ಯಾವುದೇ ಪೊಲೀಸ್ ಅಧಿಕಾರಿ ಕಿರುಕುಳ ನೀಡಿದಲ್ಲಿ ನೇರವಾಗಿ ಡಿಸಿಪಿ, ಎಸಿಪಿ ಅವರಿಗೆ ದೂರು ನೀಡಿ. ವಾಹನ ತಾಪಸಣೆ ವೇಳೆ ಹಣ ಪಡೆದು ವಾಹನ ಬಿಟ್ಟ ವಿಚಾರವಾಗಿ ಪೇದೆಯನ್ನು ಸಹ ಅಮಾನತು ಮಾಡಲಾಗಿದೆ ಎಂದು ಇದೇ ವೇಳೆ ತಿಳಿಸಿದರು.
ಠಾಣೆಯಲ್ಲಿ ಪೊಲೀಸರು ಇಲ್ಲ ಎಂದು ದೂರುಗಳು ಸ್ವೀಕರಿಸುತ್ತಿಲ್ಲ ಎಂಬುದರ ಕುರಿತು ಸಾರ್ವಜನಿಕ ದೂರುಗಳು ಬಂದಿವೆ. ಇನ್ಸ್‌ಪೆಕ್ಟರ್ ಇಲ್ಲದೇ ಹೊದಾಗ ಸಬ್ ಇನ್ಸ್‌ಪೆಕ್ಟರ್ ಮೇಲಿನ ಅಧಿಕಾರಿಗಳಿಂದ ದೂರು ದಾಖಲಿಸಿಕೊಳ್ಳುವ ವ್ಯವಸ್ಥೆ ಮಾಡಲು ಚಿಂತನೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಕೆಲಸ ಇಲ್ಲದ ದುಷ್ಕರ್ಮಿಗಳು ಸರಗಳ್ಳತನಕ್ಕೆ ಮುಂದಾಗಿದ್ದಾರೆ : ಫೇಸ್ಬುಕ್ ಲೈವ್ನಲ್ಲಿ ಕಮಲ್ ಪಂತ್ ಮಾತನಾಡಿ, ಕೆಲಸ ಇಲ್ಲದ ಕೆಲ ದುಷ್ಕರ್ಮಿಗಳು ಸರಗಳ್ಳತನಕ್ಕೆ ಕೈ ಹಾಕಿದ್ದಾರೆ. ಈಗಾಗಲೇ ಕೆಲ ಆರೋಪಿಗಳನ್ನು ಬಂಧಿಸಲಾಗಿದೆ. ಪತ್ರಿದಿನ ಸರಗಳ್ಳತನ ನಡೆಯುತ್ತಿಲ್ಲ, ನಗರ ಸುರಕ್ಷತೆಗೆ ಮತ್ತು ಅಪರಾಧ ತಡೆಯಲು ನಮ್ಮ ಪೊಲೀಸರು ಸದಾ ಸಿದ್ಧರಿರುವುದಾಗಿ ತಿಳಿಸಿದರು.
ಲಾಕ್ಡೌನ್ ವೇಳೆ ಪೊಲೀಸ್ ಠಾಣೆಗಳು ಕೆಲಸ ಮಾಡುತ್ತಿಲ್ಲ, ಪೊಲೀಸರು ಇಲ್ಲ ಅಂತ ದೂರು ನೀಡಲು ಬಂದವರಿಗೆ ಸಿಬ್ಬಂದಿ ವಾಪಸ್ ಕಳಿಸುತ್ತಿರುವ ವಿಚಾರವಾಗಿ ಮಾತನಾಡಿ, ಪೊಲೀಸ್ ಇಲಾಖೆ ಒಂದೇ ಈ ಸಮಯದಲ್ಲಿ ಕೆಲಸ ಮಾಡುತ್ತಿದೆ. 24/7 ನಮ್ಮ ಪೊಲೀಸರು ಕೆಲಸ ಮಾಡುತ್ತಿದ್ದಾರೆ. ಕೋವಿಡ್ ಸಮಯದಲ್ಲಿ ನಮ್ಮ ಸಿಬ್ಬಂದಿಯನ್ನೂ ಸಹ ಕಳೆದುಕೊಂಡಿದ್ದೇವೆ ಎಂದು ಹೇಳಿದರು.
ಪ್ರಕರಣ ದಾಖಲು ಮಾಡಲು ಠಾಣೆಯಲ್ಲಿ ಇನ್ಸ್‌ಪೆಕ್ಟರ್, ಸಬ್ ಇನ್ಸ್‌ಪೆಕ್ಟರ್ ಕಡ್ಡಾಯವಾಗಿ ಇರಬೇಕಾಗಿಲ್ಲ. ಹೆಡ್ ಕಾನ್ಸ್ಟೇಬಲ್ ಮೇಲ್ಪಟ್ಟ ಅಧಿಕಾರಿಗಳು ಯಾರೇ ಇದ್ರೂ ಎಫ್ಐಆರ್ ದಾಖಲಿಸಬಹುದು. ಇನ್ಸ್‌ಪೆಕ್ಟರ್ ಠಾಣೆಯಲ್ಲಿ ಇಲ್ಲವೆಂದು ದೂರುದಾರರಿಗೆ ಸಿಬ್ಬಂದಿ ವಾಪಸ್ ಕಳಿಸುವಂತಿಲ್ಲ. ಈ ಬಗ್ಗೆ ಸೂಚನೆಗಳನ್ನು ನೀಡಿದ್ದೇವೆ ಎಂದು ಲೈವ್ನಲ್ಲಿ ಸಾರ್ವಜನಿಕರ ಹಲವು ಪ್ರೆಶ್ನೆಗಳಿಗೆ ಕಮಿಷನರ್ ಕಮಲ್ ಪಂತ್ ಉತ್ತರ ನೀಡಿದರು.