ಬೆಂಗಳೂರು: ನಗರದ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡಿದ ಐಎಎಸ್ ಅಧಿಕಾರಿ ಬಿಎಂ ವಿಜಯ್ ಶಂಕರ್ ಅವರ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಯ ಶವಾಗಾರದಲ್ಲಿಟ್ಟಿದ್ದು, ಕೊರೊನಾ ಸ್ವ್ಯಾಬ್ ಟೆಸ್ಟ್ ಮತ್ತು ಮರಣೊತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಿಲಕ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿಜಯ್ ಶಂಕರ್ ಮನೆ ಹೊಂದಿದ್ದು, ನಿನ್ನೆ ಮನೆಯ ಕೊಠಡಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಸದ್ಯ ಸಾವಿನ ಸುತ್ತ ಪೊಲೀಸರಿಗೆ ಅನುಮಾನಗಳು ಇದ್ದು, ಆಗ್ನೇಯ ವಿಭಾಗ ಡಿಸಿಪಿ ಜೋಷಿ ಶ್ರೀನಿವಾಸ್ ಮಹದೇವನ್ ನೇತೃತ್ವದಲ್ಲಿ ತನಿಖೆ ಮುಂದುವರೆಸಿದ್ದಾರೆ.
ಮತ್ತೊಂದೆಡೆ ಐ ಮಾನಿಟರಿ ಅಡ್ವೇಟೈಸರಿ ಸಮೂಹ ಕಂಪನಿಗೆ ಕ್ಲೀನ್ ಚಿಟ್ ನೀಡಲು ಲಂಚ ಪಡೆದಿದ್ದಾರೆ ಎಂಬ ಆರೋಪದ ಮೇರೆಗೆ ಸದ್ಯ ಸಿಬಿಐ ತನಿಖೆ ನಡೆಸುತ್ತಿದೆ. ಇದಕ್ಕೆ ಹೆದರಿ ಆತ್ಮಹತ್ಯೆಗೆ ಶರಣಾದರು ಅನ್ನೋ ನಿಟ್ಟಿನಲ್ಲಿ ತನಿಖೆ ಮುಂದುವರೆದಿದೆ.
ಹಿನ್ನೆಲೆ: ಬಹುಕೋಟಿ ಐಎಂಎ ವಂಚನೆ ಪ್ರಕರಣದ ಆರೋಪಿ ಮನ್ಸೂರ್ ಜೊತೆ ವಿಜಯ್ ಶಂಕರ್ ಜಿಲ್ಲಾಧಿಕಾರಿಯಾಗಿದ್ದ ವೇಳೆ ಐಎಂಎ ಪರ ಸರ್ಕಾರಕ್ಕೆ ವರದಿ ಕಳುಹಿಸಲು ಲಂಚದ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಮನ್ಸೂರ್ ಖಾನ್ಗೆ ಮೊದಲು 2 ಕೋಟಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರಂತೆ. ಬಳಿಕ 1.5 ಕೋಟಿಗೆ ವ್ಯವಹಾರ ಕುದುರಿತ್ತಂತೆ. ಈ ವಿಚಾರವನ್ನ ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್ ಖಾನ್ ಹಾಗೂ ಬೆಂಗಳೂರು ಉತ್ತರ ವಿಭಾಗಾಧಿಕಾರಿ ಎಲ್.ಸಿ ನಾಗರಾಜ್ ತನಿಖೆ ವೇಳೆ ತಿಳಿಸಿದ್ದರು. ಹೀಗಾಗಿ ಸಿಬಿಐ ವಿಜಯ್ ಶಂಕರ್ಗೆ ತನಿಖೆಗೆ ಬುಲಾವ್ ನೀಡಿತ್ತು. ಹೀಗಾಗಿ ತನಿಖೆಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡರಾ ಎಂಬ ಅನುಮಾನಗಳು ಮೂಡಿವೆ.