ಬೆಂಗಳೂರು: ಪ್ರತಿಪಕ್ಷದವರು ಹೇಳಿದ್ದನ್ನು ಕೇಳಿದ್ದಕ್ಕೆ ಮುಖ್ಯಮಂತ್ರಿಗಳಿಗೆ ಸ್ವಲ್ಪಮಟ್ಟಿಗೆ ಅಭಿನಂದನೆ ಸಲ್ಲಿಸಲು ಇಷ್ಟಪಡುತ್ತೇನೆ. ಸಿಎಂ ನಡೆಯಿಂದ ಸಂತೋಷವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಸದಾಶಿವನಗರದ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಅವರ ಸಚಿವ ಸಂಪುಟದಲ್ಲಿರುವ ಸಚಿವರೇ ಪ್ರತಿಪಕ್ಷಗಳ ಟೀಕೆಯನ್ನು ಒಪ್ಪುವುದಿಲ್ಲ. ಈಗ ಸಿಎಂ ಒಪ್ಪಿಕೊಂಡಿದ್ದಾರೆ. ಅದಕ್ಕೆ ನನಗೆ ಸಂತೋಷವಾಗಿದೆ. ಕಾರ್ಮಿಕರಿಗೆ ಪರಿಹಾರ ನೀಡಲು ಸಿಎಂ ಒಪ್ಪಿಕೊಂಡಿದ್ದಾರೆ. ಹೂ ಮಾರುವವರಿಗೆ ಇನ್ನೂ ಹೆಚ್ಚು ಪರಿಹಾರ ಕೊಡಬೇಕಿತ್ತು. ಅವರು ಕೊಟ್ಟಿದ್ದು ಏನಕ್ಕೂ ಸಾಲುವುದಿಲ್ಲ. ತರಕಾರಿ ಬೆಳೆದ ರೈತರಿಗೆ ಬಹಳ ದೊಡ್ಡ ನಷ್ಟ ಆಗಿದೆ ಎಂದರು.
ಬೀದಿ ವ್ಯಾಪಾರಿಗಳು, ಮೆಕಾನಿಕ್ ಕೆಲಸ ಮಾಡುವವರು ಸೇರಿದಂತೆ ಇನ್ನೂ ಹಲವು ವರ್ಗದವರಿಗೆ ಪರಿಹಾರ ಕೊಡಬೇಕು. ಕನಿಷ್ಠ ಮೂರು ದಿನ ಇದರ ಬಗ್ಗೆ ಚರ್ಚೆ ಮಾಡಲು ವಿಶೇಷ ಅಧಿವೇಶನ ಕರೆಯಬೇಕು. ಬರೀ 1,700 ಕೋಟಿಯಿಂದ ಏನು ಆಗಲ್ಲ. ಹತ್ತು ಸಾವಿರ ಕೋಟಿ ಕೊಟ್ರು ನಾವು ನಿಮ್ಮ ಜತೆ ಇರ್ತೇವೆ. ನಾವು ಅನೇಕ ಸಲಹೆ ಕೊಡಬೇಕಿದೆ. ಒಂದು ವರ್ಷ ಅಭಿವೃದ್ಧಿ ನಿಲ್ಲಿಸಿದ್ರೆ ಏನು ಆಗಲ್ಲ. ಜೀವ ಉಳಿಸಿದ್ರೆ ಜೀವನ. ಚರ್ಚೆ ಮಾಡಲು ಅಧಿವೇಶನ ಕರೆಯುವಂತೆ ಮನವಿ ಮಾಡುತ್ತಿದ್ದೇನೆ ಎಂದರು.
ಸಣ್ಣ ಕೆಲಸ ಮಾಡುವವರೇ ದೇಶ ಕಟ್ಟಿರುವವರು. ಇವರನ್ನ ಗೌರವಯುತವಾಗಿ ನಾವು ನಡೆಸಿಕೊಳ್ಳಬೇಕು. ಹೋಗಿರುವ ಕಾರ್ಮಿಕರನ್ನ ವಾಪಸ್ ಕರೆಸಿಕೊಳ್ಳಲು ವಿಶೇಷ ಪ್ಯಾಕೇಜ್ ಕೊಡಬೇಕು. ಒಂದು ವಿಶೇಷ ಅಧಿವೇಶನ ಕರೆಯಲು ಒತ್ತಾಯ. ಬಜೆಟ್ ಮಾರ್ಪಾಡು ಮಾಡಲು ಅಧಿವೇಶನ ಕರೆಯಿರಿ. ನಾನು ಕೇಳಿದಾಗ ಭೇಟಿಗೆ ಸಿಎಂ ಸಮಯ ಕೊಟ್ಟಿದ್ದಾರೆ. ಈ ವಿಚಾರದಲ್ಲಿ ಯಡಿಯೂರಪ್ಪ ಅವರನ್ನ ಅಭಿನಂದಿಸುತ್ತೇನೆ. ಅಧಿವೇಶನ ಕರೆದ್ರೆ ರಾಜಕಾರಣ ವಿಚಾರ ಮಾಡಲ್ಲ. ಕಾಂಗ್ರೆಸ್ ಪಕ್ಷದ ಶಾಸಕರು ಮತ್ತು ಪರಿಷತ್ ಸದಸ್ಯರು ಟಿಎ, ಡಿಎ ಕ್ಲೈಮ್ ಮಾಡಲ್ಲ. ನಮ್ಮ ಸಲಹೆ ಮಾತ್ರ ಕೊಡ್ತೀವಿ ಎಂದರು.
ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ದರ ಏರಿಕೆ ವಿಚಾರ ಮಾತನಾಡಿ, ರಾಜ್ಯಗಳಿಗೆ ಕೇಂದ್ರದಿಂದ ಯಾವುದೇ ಸಹಾಯ ಬಂದಿಲ್ಲ. ದರ ಮಾತ್ರ ಏರಿಕೆ ಆಗಿದೆ. ಎಲ್ಲಿ ಹೋಗ್ತಿದೆ ಏನ್ ಆಗ್ತಿದೆ ಅನ್ನೋದನ್ನ ಮುಂದೆ ಹೇಳ್ತೀನಿ ಎಂದರು. ಮದ್ಯದ ದರ ಏರಿಕೆ ವಿಚಾರ ಪ್ರಸ್ತಾಪಿಸಿ, ಇದು ಸರ್ಕಾರ ತೆಗೆದುಕೊಂಡ ಕ್ರಮ. ಸರ್ಕಾರದ ಮಟ್ಟದಲ್ಲಿ ಚರ್ಚೆ ಮಾಡಿ ನಿರ್ಧಾರ ಮಾಡಿರುತ್ತಾರೆ. ಸರ್ಕಾರಕ್ಕೆ ಆದಾಯ ಬರುವ ಮೂಲ ಆಗಿರುವುದರಿಂದ ಸರ್ಕಾರ ನಿರ್ಧಾರ ಮಾಡಿದೆ. ಇದಕ್ಕೆ ನಾನು ವಿರೋಧ ಮಾಡಲ್ಲ ಎಂದರು.