ಬೆಂಗಳೂರು: ಬಿಜೆಪಿಯನ್ನ ಹಳೆ ಕೇಸ್ಗಳ ತನಿಖೆ ಮಾಡಿಸುತ್ತೇವೆ ಅಂತಾ ಹೆದರಿಸಬಹುದು. ಆದರೆ, ಕುಮಾರಸ್ವಾಮಿ ಮತ್ತು ಜೆಡಿಎಸ್ ಹೆದರಿಸಲು ಸಾಧ್ಯವಿಲ್ಲ. ನಾನಂತೂ ಕಾಂಗ್ರೆಸ್ ನ ಗ್ಯಾರಂಟಿ ವಿಷಯದಲ್ಲಿ ಹೋರಾಟ ನಡೆಸಿ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇನೆ. ನಾಡಿನ ಜನತೆ ಇನ್ಮುಂದೆ ವಿದ್ಯುತ್ ಬಿಲ್ ಕಟ್ಟಬೇಡಿ. ಮಹಿಳೆಯರು ಬಸ್ ಟಿಕೆಟ್ ತಗೊಬೇಡಿ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್ ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.
ಶೇಷಾದ್ರಿಪುರಂನಲ್ಲಿರುವ ಪಕ್ಷದ ಕಚೇರಿ ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್‌ನ ಗ್ಯಾರಂಟಿ ಕಾರ್ಡ್ಗಳನ್ನು ಪ್ರದರ್ಶನ ಮಾಡಿದರು. ಹೇಗೆ ಲೆಕ್ಕಾಚಾರ ಹಾಕಿದರೂ ಪ್ರತಿ ಮನೆಗೆ 200 ಯೂನಿಟ್ ಕರೆಂಟ್ ಕೊಡಲು 24 ಸಾವಿರ ಕೋಟಿ ಬೇಕು. ನಾನಂತೂ ಈ ವಿಷಯದಲ್ಲಿ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇನೆ. ಮೊದಲನೇ ಸಂಪುಟ ಸಭೆಯಲ್ಲೇ ಜಾರಿಗೆ ತರದಿದ್ದರೆ ಒಂದು ಕ್ಷಣ ಕೂರಲ್ಲ ಅಂತ ಹೇಳಿದ್ರು. ಅಂದು ಏನು ಇಟ್ಕೊಂಡು ಮಾತನಾಡಿದ್ದಿರಿ, ಬಿಜೆಪಿಯನ್ನ ತನಿಖೆ ಮಾಡಿಸುವುದಾಗಿ ಹೆದರಿಸಬಹುದು. ಆದರೆ ನಮ್ಮನ್ನು ಹೆದರಿಸಲು ಸಾಧ್ಯವಿಲ್ಲ ಎಂದರು.
ಹೋರಾಟ ನಡೆಸುತ್ತೇವೆ : ಐದು ಗ್ಯಾರಂಟಿ ಕೊಟ್ಟು ಈಗ ಷರತ್ತುಗಳು ಎನ್ನುತ್ತಿದ್ದೀರಿ. ಇದನ್ನು ಒಪ್ಪಲು ಸಾಧ್ಯವಿಲ್ಲ. ಮನೆ ಮನೆಗೆ ಹೋಗಿ ಗ್ಯಾರಂಟಿ ಕಾರ್ಡ್ ಹಂಚಿದ್ದೀರಿ. 200 ಯೂನಿಟ್ ಉಚಿತ ವಿದ್ಯುತ್, ಮಹಿಳೆಯರಿಗೆ ಕೆಎಸ್ಆರ್‌ಟಿಸಿ ಬಸ್ನಲ್ಲಿ ಉಚಿತ ಪ್ರಯಾಣ, ಮನೆಯೊಡತಿಗೆ 2 ಸಾವಿರ, ಪದವೀಧರ ನಿರುದ್ಯೋಗಿಗಳಿಗೆ 3 ಸಾವಿರ, 10 ಕೆಜಿ ಅಕ್ಕಿ ಕೊಡುವ ಗ್ಯಾರಂಟಿ ಕಾರ್ಡ್ ಹಂಚಿದಂತೆ ನಡೆದುಕೊಳ್ಳಬೇಕು. ಇದನ್ನು ನಾವು ಸುಮ್ಮನೆ ಬಿಡಲ್ಲ, ಹೋರಾಟ ನಡೆಸುತ್ತೇವೆ, ತಾರ್ತಿಕ ಅಂತ್ಯಕ್ಕೆ ಬರುವವರೆಗೂ ಬಿಡಲ್ಲ ಎಂದು ಹೇಳಿದರು.
ನಿಖಿಲ್ ಕುಮಾರಸ್ವಾಮಿಯನ್ನ ನ್ಯಾಯಯುತವಾಗಿ ಸೋಲಿಸಿಲ್ಲ. ಗ್ಯಾರಂಟಿ ಕಾರ್ಡ್ಗಳು ಮತ್ತು ಐದು ಸಾವಿರ ರೂ ಮೊತ್ತದ ಗಿಫ್ಟ್ ಕೂಪನ್‌ಗಳಿಂದ ಸೋತಿದ್ದಾರೆ. 45 ಕ್ಷೇತ್ರಗಳಲ್ಲಿ ಈ ರೀತಿ ಗಿಫ್ಟ್ ಕೂಪನ್‌ಗಳನ್ನ ಹಂಚಿದ್ದಾರೆ. ಈ ಬಗ್ಗೆ ಏನು ಮಾಡಬೇಕು ಅಂತ ಮುಂದೆ ತೀರ್ಮಾನ ಮಾಡುತ್ತೇವೆ. 30 ಕೋಟಿ ರೂ.ಗಳ ಗಿಫ್ಟ್‌ಗಳನ್ನ ಹಂಚಿದ್ದಾರೆ. ಇದರಲ್ಲಿ ಎಷ್ಟು ಪರ್ಸೆಂಟೇಜ್ ಬರುತ್ತದೆ ಸಿದ್ದರಾಮಯ್ಯನವರೆ? ಕುಣಿಗಲ್ ಡಾ. ರಂಗನಾಥ್, ರಾಮನಗರ ಇಕ್ಬಾಲ್ ಹುಸೇನ್, ಆರ್‌ಆರ್ ನಗರ ಕುಸುಮಾ ಹಂಚಿದ ಕೂಪನ್‌ಗಳು ಸಿಕ್ಕಿವೆ ಎಂದು ವಾಗ್ದಾಳಿ ನಡೆಸಿದರು.
ಒಪ್ಪತ್ತಿನಿ ಕೂಳಿಗಾಗಿ ನಿಮ್ಮ ಮುಂದಿನ ಪೀಳಿಗೆ ಜೀವನ ಹಾಳು ಮಾಡಬೇಡಿ. ಮೂರು ಪಕ್ಷಗಳು ಹಣ ಹಂಚಿವೆ. ಇವತ್ತಿನ ವ್ಯವಸ್ಥೆಯಲ್ಲಿ ನಾವೂ ಪಾಲುದಾರರಾಗಿದ್ದೇವೆ. ಹೀಗಾಗಿಯೇ ಇನ್ನ ಐದು ವರ್ಷಗಳಲ್ಲಿ ವಿಷಯಾಧಾರಿತ ಹೋರಾಟ ಮಾಡಿ ಹಣ ಹಂಚಬೇಡಿ ಎಂದು ಹೇಳಿದ್ದೇನೆ. ಈ ಚುನಾವಣೆ ಸಾಕಷ್ಟು ಅನುಭವ ಪಾಠ ಕಲಿಸಿದೆ ಎಂದರು.
ಇಬ್ರಾಹಿಂರವರೇ ರಾಜ್ಯಾಧ್ಯಕ್ಷರಾಗಿ ಮುಂದುವರೆಯುತ್ತಾರೆ: ಪಕ್ಷದ ನೈತಿಕ ಹೊಣೆ ಹೊತ್ತು ಇಬ್ರಾಹಿಂ ರಾಜೀನಾಮೆ ನೀಡಿದ್ದರು. ಆದರೆ, ನಿನ್ನೆಯ ವಿಮರ್ಶಾತ್ಮಕ ಸಭೆ, ಕಾರ್ಯಕಾರಿಣಿ ಸಭೆಯಲ್ಲಿ ಚರ್ಚಿಸಿ ಇವರನ್ನೇ ಮುಂದುವರೆಸಲು ತೀರ್ಮಾನಿಸಲಾಗಿದೆ. ಇಬ್ರಾಹಿಂರವರೇ ರಾಜ್ಯಾಧ್ಯಕ್ಷರಾಗಿ ಮುಂದುವರೆಯುತ್ತಾರೆ ಎಂದರು.
ಸಂಸತ್ ಭವನ ಉದ್ಘಾಟನೆಗೆ 21 ಪಕ್ಷಗಳು ಹಿಂದೆ ಸರಿದಿವೆ. ಆದರೆ ಸಂಸತ್ ಭವನ ಕಟ್ಟಿರುವುದು ಕೇಂದ್ರ ಸರ್ಕಾರ, ಯಾವುದೋ ಪಕ್ಷ, ಸಂಘಟನೆ ಕಟ್ಟಿಲ್ಲ. ರಾಷ್ಟ್ರಪತಿಗಳಿಗೆ ಆಹ್ವಾನ ನೀಡಿಲ್ಲ ಎಂಬ ಬಗ್ಗೆ ಚರ್ಚೆ ನಡೆದಿದೆ. ಸಂವಿಧಾನದ ಕೆಲ ಸಂಸ್ಥೆಗಳನ್ನ ಉದ್ಘಾಟಿಸುವಾಗ ಎಲ್ಲೂ ರಾಷ್ಟ್ರಪತಿಗಳನ್ನ ಆಹ್ವಾನಿಸಿಲ್ಲ. ಛತ್ತೀಸ್ಗಢದಲ್ಲಿ ವಿಧಾನಸಭೆ ಕಟ್ಟಡಕ್ಕೆ ಸೋನಿಯಾಗಾಂಧಿ, ರಾಹುಲ್ ಗಾಂಧಿ ಅಡಿಪಾಯ ಹಾಕಿದ್ದರು. ರಾಜ್ಯದಲ್ಲೂ ವಿಕಾಸಸೌಧ ಉದ್ಘಾಟನೆಗೆ ರಾಜ್ಯಪಾಲರನ್ನ ಕರೆದಿದ್ದಿರಾ? ಅಂದಿನ ಮುಖ್ಯಮಂತ್ರಿಗಳೇ ಉದ್ಘಾಟಿಸಿದ್ದರು. ಇದು ಕಾಂಗ್ರೆಸ್‌ನ ದ್ವಿಮುಖ ನೀತಿಯನ್ನ ತೋರಿಸುತ್ತದೆ ಎಂದು ಟೀಕಿಸಿದರು.
ಜೆಡಿಎಸ್ ಮೃದು ಧೋರಣೆ ಎಂಬ ಅರ್ಥ ಕಲ್ಪಿಸೋದು ಬೇಡ: ರಾಷ್ಟ್ರಪತಿ ಆದಿವಾಸಿ ಮಹಿಳೆ ಎಂಬ ಗೌರವ ಇದ್ದಿದ್ದರೆ ರಾಷ್ಟ್ರಪತಿ ಚುನಾವಣೆಗೆ ಯಶ್ವಂತ್ ಸಿನ್ಹಾ ಯಾಕೆ ಕಣಕ್ಕಿಳಿಸಿದ್ರಿ?. ನಿಮ್ಮ ಬೂಟಾಟಿಕೆಯನ್ನ ನೋಡುತ್ತಿದ್ದಾರೆ. ಇದರಿಂದ ಬಿಜೆಪಿ ಬಗ್ಗೆ ಜೆಡಿಎಸ್ ಮೃದು ಧೋರಣೆ ಎಂಬ ಅರ್ಥ ಕಲ್ಪಿಸೋದು ಬೇಡ ಎಂದು ಕಾಂಗ್ರೆಸ್ ವಿರುದ್ದ ಜೆಡಿಎಸ್ ನಾಯಕ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ನಿನ್ನೆಯ ರಾಷ್ಟ್ರೀಯ ಕಾರ್ಯಕಾರಿ ಸಭೆಯಲ್ಲಿ ಹಲವಾರು ಪ್ರಮುಖ ನಿರ್ಣಯಗಳನ್ನ ಅಂಗೀಕರಿಸಲಾಗಿದೆ. ಮುಂಬರುವ ಸಂಸತ್ ಚುನಾವಣೆ ಹಿನ್ನೆಲೆಯಲ್ಲಿ ಸದಸ್ಯತ್ವ ನೋಂದಣಿ ಆರಂಭಿಸುವಂತೆ ಕೇರಳ ಮುಖಂಡರು ಪ್ರಸ್ತಾಪ ಮಾಡಿದ್ದಾರೆ. ಪಕ್ಷದ ಸೋಲಿನ ವಿಮರ್ಶೆ ಮಾಡಿ ಸೋಲನ್ನೇ ಸವಾಲಾಗಿ ಸ್ವೀಕರಿಸುವುದು, ಸೋಲಿನ ಈ ಸಂದರ್ಭದಲ್ಲಿ ನೈತಿಕವಾಗಿ ನಾವು ನಿಮ್ಮ ಜೊತೆ ಇದ್ದೇವೆ ಅಂತ ಹೇಳಿದ್ದಾರೆ. ಸದಸ್ಯತ್ವ ನೋಂದಣಿ, ಆಂತರಿಕ ಚುನಾವಣೆ ಬಗ್ಗೆಯೂ ಚರ್ಚೆ ನಡೆದಿದೆ. ಕೇರಳದಲ್ಲೂ ಒಂದು ಕ್ಷೇತ್ರದಲ್ಲಿ ಲೋಕಸಭೆಗೆ ಸ್ಪರ್ಧೆ ಮಾಡುವ ಚರ್ಚೆಯಾಗಿದೆ. ಜೆಡಿಎಸ್ ರೈತರ ಬಗ್ಗೆ ಕಳಕಳಿ, ಬದ್ದತೆ ಇರುವ ಪಕ್ಷ. ಕೃಷಿಕರ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವುದು ಅನಿವಾರ್ಯ ಎಂದು ಹೇಳಿದ್ದಾರೆ. ರೈತರ ಪರವಾದ ದೇವೇಗೌಡರ ಧ್ವನಿಯನ್ನ ರಾಷ್ಟ್ರ ಮಟ್ಟದಲ್ಲಿ ಎತ್ತಬೇಕು ಎನ್ನುವ ನಿರ್ಧಾರ ಮಾಡಲಾಗಿದೆ ಎಂದರು.
ನನ್ನದೇನಿದ್ದರೂ ನೇರಾನೇರ ರಾಜಕಾರಣ: ಜೆಡಿಎಸ್‌ನ ಅಂತಿಮ ಸಂಸ್ಕಾರ ಯಾವಾಗ ಎಂಬ ಕಾಂಗ್ರೆಸ್ ಟ್ವೀಟ್ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ,ಮುಂದೆ ಅಂತಿಮ ಸಂಸ್ಕಾರ ಯಾರದ್ದಾಗುತ್ತದೆ ಅಂತ ಜನ ತೀರ್ಮಾನ ಮಾಡುತ್ತಾರೆ. ಲೋಕಸಭೆಯಲ್ಲಿ 180 ರಿಂದ 38 ಕ್ಕೆ ಇಳಿದರಲ್ಲ ಯಾಕೆ ಕಾಂಗ್ರೆಸ್ ವಿಸರ್ಜನೆ ಮಾಡಲಿಲ್ಲ. ಈ ದುರಹಂಕಾರ ಬಹಳ ದಿನ ನಡೆಯಲ್ಲ. ಕಾಲಚಕ್ರ ಹೀಗೆ ಇರಲ್ಲ, ಮೇಲಿದ್ದವನು ಕೆಳಗೆ ಇಳಿಯಬೇಕು, ನಿಮ್ಮ ದುರಂಕಾರದ ನಡೆಯನ್ನೇ ಸವಾಲಾಗಿ ಸ್ವೀಕಾರ ಮಾಡುತ್ತೇನೆ. ನಿಮ್ಮ ರೀತಿ ಕುತಂತ್ರದ ರಾಜಕಾರಣ ಮಾಡಲ್ಲ. ನನ್ನದೇನಿದ್ದರೂ ನೇರಾನೇರ ರಾಜಕಾರಣ ಎಂದು ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಕರೆಂಟ್ ಬಿಲ್ ಕಟ್ಬೇಡಿ, ಬಸ್ ಟಿಕೆಟ್ ತಗೋಬೇಡಿ: ಜನರಿಗೆ ಆರ್. ಅಶೋಕ್ ಕರೆ