ಬೆಂಗಳೂರು : ಅಕ್ರಮ ಗಣಿಗಾರಿಕೆ ವಿಚಾರವಾಗಿ ಗಣಿ ಸಚಿವರ ಭೇಟಿಗೆ ಸಮಯ ಕೇಳಿದ್ದೇನೆ. ಅವರನ್ನ ಭೇಟಿ ಮಾಡಿ ಎಲ್ಲ ವಿಚಾರ ತಿಳಿಸುತ್ತೇನೆ ಎಂದು ಸಂಸದೆ ಸುಮಲತಾ ಅಂಬರೀಶ್ ತಿಳಿಸಿದ್ದಾರೆ. ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಬಿ ಎಸ್ ಯಡಿಯೂರಪ್ಪ ಅವರ ಗಮನಕ್ಕೆ ತರುತ್ತೇನೆ. ಸತ್ಯದ ಪರ ನಿಂತ್ರೆ ಶತ್ರುಗಳು ಹುಟ್ಟಿಕೊಳ್ಳೋದು ಸಹಜ. ನಾನು ಮಾಡುತ್ತಿರುವ ಹೋರಾಟ ಸರಿ ಇದೆ ಎಂದರು.
ಈ ವಿಚಾರವನ್ನ ಅವರೇ ಇಷ್ಟೆಲ್ಲಾ ಮಾಡಿದ್ದು.. ನಾನು ದಿಶಾ ಸಭೆಯಲ್ಲಿ ಕೆಲವು ವಿಚಾರ ಪ್ರಸ್ತಾಪ ಮಾಡಿದ್ದೆ. ಅದನ್ನ ತೆಗೆದುಕೊಂಡು ಅವರು ಏನೇನೋ ಮಾತನಾಡುತ್ತಿದ್ದಾರೆ. ನಿಮ್ಮ ಅಸಲಿ ರೂಪವನ್ನು ನೀವೇ ಜನರ ಮುಂದಿಡ್ತಿದೀರಿ. ನೀವು ಮಾತಾಡ್ತಾನೇ ಇರಬೇಕು. ಆಗಲೇ ಜನ ನಿಮ್ಮನ್ನು ಅರ್ಥ ಮಾಡಿಕೊಳ್ಳುವುದು ಎಂದು ಜೆಡಿಎಸ್ ನಾಯಕರನ್ನು ತಿವಿದರು.
ಸಂಸತ್ನಲ್ಲಿ ಚರ್ಚೆ : ನನಗೆ ಲಕ್ಷಾಂತರ ಜನರ ಬೆಂಬಲವಿದೆ. ಪ್ರಕರಣದಲ್ಲಿ ನನ್ನ ತಪ್ಪು ಇಲ್ಲ. ವೈಯಕ್ತಿಕವಾಗಿ ಅವರೇ ಮಾತನಾಡುತ್ತಿದ್ದಾರೆ. ಕೆಲವರಿಗೆ ಟ್ರೈನಿಂಗ್ ಕೊಡಿಸಿ ಮಾತಾಡಲು ಬಿಡ್ತಿದ್ದಾರೆ. ಅಧಿಕಾರಿಗಳು ಕೊಡೋದು ವರದಿಯಷ್ಟೇ.. ಸರ್ಟಿಫಿಕೇಟ್ ಕೊಡೋದು ಅವರಲ್ಲ. ನಮಗೆ ಸರ್ಟಿಫಿಕೇಟ್ ಬೇಕು. ಅಧಿಕಾರಿಗಳು ಡ್ಯಾಮೇಜ್, ದುರಸ್ತಿ ಕೆಲಸದ ಬಗ್ಗೆ ಮಾತ್ರ ಹೇಳ್ತಾರೆ. ಪರಿಸರ ಸಂಬಂಧಿ ಸಂಸ್ಥೆಗಳು ಬಿರುಕು ಬಗ್ಗೆ ವರದಿ ಕೊಡಬೇಕು. ಇದಕ್ಕಾಗಿ ಕಾಯೋಣ ಎಂದರು.
ಸಂಸತ್ನಲ್ಲಿಯೂ ಈ ವಿಚಾರದ ಬಗ್ಗೆ ಚರ್ಚೆ ಮಾತನಾಡುತ್ತೇನೆ. ಇನ್ನಷ್ಟು ಸ್ಟ್ರಾಂಗ್ ಆಗಿ ಮಾತನಾಡುತ್ತೇನೆ. ಈ ಮೊದಲೂ ಧ್ವನಿ ಎತ್ತಿದ್ದೆ. ನಾನು ಯಾವತ್ತೂ ವಿಷಯ ಡೈವರ್ಟ್ ಮಾಡಲು ಪ್ರಯತ್ನಿಸಿಲ್ಲ. ನಾನು ವೈಯಕ್ತಿಕ ಟೀಕೆ ಮಾಡ್ಲಿಲ್ಲ. ಕೆಆರ್ಎಸ್ನಲ್ಲಿ ಅಕ್ರಮ ಗಣಿಗಾರಿಕೆಯಿಂದ ಭೂಕಂಪನಗಳಾಗಿವೆ. ಆಳದಲ್ಲಿ ಸ್ಫೋಟಕಗಳನ್ನಿಟ್ಟು ಸ್ಫೋಟ ಮಾಡುತ್ತಿರುವುದರಿಂದ ಕಂಪನ ಆಗಿದೆ.
ಅನಾಹುತ ಆಗಲು ನಾನು ಬಿಡಲ್ಲ : ಕೆಆರ್ಎಸ್ನಲ್ಲಿ ಯಾವುದೇ ಅನಾಹುತ ಆಗಲು ನಾನು ಬಿಡಲ್ಲ. ನನ್ನ ಹೋರಾಟ ನಿಲ್ಲೋದಿಲ್ಲ. ದಿಶಾ ಸಭೆಯಲ್ಲಿ ಮಾತಾಡಿದ್ದೇ, ಇಲ್ಲಿವರೆಗೂ ಎಳೆದು ತಂದಿದ್ದಾರೆ. ಅವರು ಯಾವುದ್ಯಾವುದೋ ಪ್ರಸ್ತಾಪ ತಂದ್ರು. ಸಾಕಷ್ಟು ಆರೋಪ ಮಾಡಿದ್ರು. ಅದಕ್ಕೂ ನನಗೂ ಸಂಬಂಧ ಇಲ್ಲ. ಆದ್ರೆ, ನನ್ನ ಹೋರಾಟ ನಿಲ್ಲೋದಿಲ್ಲ ಎಂದರು.
ಅಕ್ರಮ ಗಣಿಗಾರಿಕೆ ವಿಷಯ ಪ್ರಸ್ತಾಪಿಸಿದಾಗ ಯಾರ ಹೆಸರನ್ನೂ ನಾನು ಹೇಳಿರಲಿಲ್ಲ. ನನ್ನ ಹೋರಾಟ ಮುಂದುವರೆಸುತ್ತೇನೆ. ಗಣಿ ಸಚಿವರ ಬಳಿ ಸಮಯ ಕೇಳಿದ್ದೇನೆ, ವಿವರಣೆ ಕೊಡುತ್ತೇನೆ. ಸಿಎಂ ಭೇಟಿ ಸಹ ಮಾಡುತ್ತೇನೆ. ಮೊನ್ನೆ ಕೂಡ ಈ ವಿಚಾರದ ಬಗ್ಗೆ ಸಿಎಂ ಗಮನಕ್ಕೆ ತಂದಿದ್ದೇನೆ ಎಂದರು.
ತಾವು ಕ್ಷಮೆ ಕೇಳಬೇಕೆಂಬ ಶಾಸಕ ರವೀಂದ್ರ ಶ್ರೀಕಂಠಯ್ಯ ಹೇಳಿಕೆ ವಿಚಾರ ಪ್ರಸ್ತಾಪಿಸಿ, ರವೀಂದ್ರ ಶ್ರೀಕಂಠಯ್ಯ ತಾವೇ ಡಿಕ್ಟೇಟರ್ ಅನ್ನೋ ಭಾವನೆಯಲ್ಲಿದ್ದಾರೆ. ಅವರು ಹೇಳಿದಂತೆ ನಾನು ನಡೆಯೋದಿಕ್ಕಾಗಲ್ಲ. ನಾನು ಜಿಲ್ಲಾ ಸಂಸದೆ. ನಾನು ಏನು ಮಾಡಬೇಕೋ ಮಾಡ್ಕೊಂಡು ಹೋಗುತ್ತೇನೆ ಎಂದು ತಿರುಗೇಟು ನೀಡಿದರು.
ಶರವಣ ಯಾರೆಂದು ನನಗೆ ಗೊತ್ತಿಲ್ಲ. ಇವರಿಗೆಲ್ಲ ಪ್ರತಿಕ್ರಿಯೆ ನೀಡುವ ಅಗತ್ಯವಿದೆಯಾ? ಬಿಡಿ ಅವರ ಮಾತು. ಜೆಡಿಎಸ್ ಡ್ಯಾಮೇಜ್ ಆಗಿರುವುದು ರಾಜ್ಯಕ್ಕೇ ಗೊತ್ತಾಗಿದೆ. ಜೆಡಿಎಸ್ ಮುಖಂಡರೆ ಮೊದಲು ಕ್ಷಮೆ ಕೇಳಬೇಕೆಂದು ಅವರು ಹೇಳುತ್ತಿರಬೇಕು. ಹಂತ ಹಂತವಾಗಿ ಜೆಡಿಎಸ್ ಅಸಲಿ ರೂಪ ಆಚೆ ಬರ್ತಿದೆ. ಅವರೇ ಅವರ ರೂಪ ಬಿಚ್ಚಿಡ್ತಿದಾರೆ. ಅವರು ಮಾತಾಡಬೇಕು. ಮಾತಾಡಿದ್ರೇನೇ ಜನಕ್ಕೆ ಅರ್ಥ ಆಗೋದು. ಒಂದು ಸಮಯ ಬರುತ್ತೆ. ಆಗ ಜನ ಮಾತಾಡ್ತಾರೆ. ಆಗ ಅವರು(ಜೆಡಿಎಸ್)ಕೇಳಿಸಿಕೊಳ್ಳಬೇಕು ಎಂದರು.
ಇದನ್ನೂ ಓದಿ: ನಾನು ಸಿನಿಮಾದವನಾಗಿ ಮಾತನಾಡಿದ್ದೇನೆ, ಹೆಚ್ಡಿಕೆ ರಾಜಕೀಯ ಬಗ್ಗೆ ಮಾತನಾಡಿಲ್ಲ : ರಾಕ್ಲೈನ್ ವೆಂಕಟೇಶ್