ಬೆಂಗಳೂರು: ಬೆಂಗಳೂರಿನ ವಿವಿಧ ಪ್ರದೇಶಗಳ ಮಳೆ ಹಾನಿ ವೀಕ್ಷಣೆಗೆ ತೆರಳಿದ್ದ ಸಂದರ್ಭದಲ್ಲಿ ಮಹಿಳೆಗೆ ಶಾಸಕ ಅರವಿಂದ್ ಲಿಂಬಾವಳಿ ಮಹಿಳೆಗೆ ಆವಾಜ್ ಹಾಕಿರುವುದು ಚರ್ಚೆಗೆ ಗುರಿಯಾಗಿದೆ. ಈ ಬಗ್ಗೆ ಮಹಿಳೆಯ ಕ್ಷಮೆ ಕೇಳುವಂತೆ ಕಾಂಗ್ರೆಸ್ ಆಗ್ರಹಿಸಿದೆ.
ಕಾಂಗ್ರೆಸ್ ಟ್ವೀಟ್ ಬೆನ್ನಲ್ಲೇ ಅರವಿಂದ್ ಲಿಂಬಾವಳಿ ಟ್ವೀಟ್ ಮಾಡಿ, ಈ ಬಗ್ಗೆ ಕ್ಷಮೆ ಕೇಳಲು ಸಿದ್ಧನಿದ್ದೇನೆ. ಆದರೆ, ನಿಮ್ಮ ಪಕ್ಷದ ಇದೇ ಕಾರ್ಯಕರ್ತೆ ರೂತ್ ಸಗಾಯ್ ಮೇರಿ ಎಷ್ಟೋ ವರ್ಷಗಳಿಂದ ರಾಜಕಾಲುವೆ ಒತ್ತುವರಿ ಮಾಡಿ, ಜನರಿಗೆ ಸಮಸ್ಯೆಯುಂಟು ಮಾಡಿದ್ದಾರಲ್ಲ, ಅದನ್ನು ಖಾಲಿ ಮಾಡಲು ಹೇಳಿ. ನಿಮ್ಮ ಕಾರ್ಯಕರ್ತೆಯ ಮೊಂಡುತನವನ್ನು ಇಲ್ಲಿಗೇ ನಿಲ್ಲಿಸಲು ಹೇಳಿ ಎಂದು ತಿರುಗೇಟು ನೀಡಿದ್ದಾರೆ.
ಸ್ತ್ರೀ ಉದ್ಧಾರಕರಂತೆ ಕೇವಲ ಬೂಟಾಟಿಕೆಯ ಮಾತಾಡುವ ಬಿಜೆಪಿಗರೇ, ನಿಮ್ಮ ಪಕ್ಷದ ಅರವಿಂದ ಲಿಂಬಾವಳಿಯವರು ಒಬ್ಬ ಜನಪ್ರತಿನಿಧಿಯಾಗಿ ಮಹಿಳೆಯೊಂದಿಗೆ ಅನುಚಿತವಾಗಿ ನಡೆದುಕೊಂಡ ರೀತಿ ಅಕ್ಷಮ್ಯ. ಇಂಥ ಮಹಿಳಾ ವಿರೋಧಿ ನಡೆಯ ವಿರುದ್ಧ ಮಾತಾಡುವ ಧೈರ್ಯ ತೋರುತ್ತೀರಾ? ಅರವಿಂದ ಲಿಂಬಾವಳಿಯವರು ಕ್ಷಮೆ ಕೇಳುತ್ತಾರಾ? ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಅರವಿಂದ್ ಲಿಂಬಾವಳಿ ಅವರು ರೀಟ್ವೀಟ್ ಮಾಡಿದ್ದಾರೆ.
ಘಟನೆ ಹಿನ್ನೆಲೆ: ವರ್ತೂರಿನಲ್ಲಿ ಮಹಿಳೆ ಮತ್ತು ಅರವಿಂದ್ ಲಿಂಬಾವಳಿ ಮಧ್ಯೆ ವಾಗ್ವಾದ ನಡೆದಿದೆ. ಭಾರಿ ಮಳೆಯಿಂದಾಗಿ ಮಹದೇವಪುರ ಕ್ಷೇತ್ರದ ಹಲವೆಡೆ ಪ್ರವಾಹ ಉಂಟಾಗಿತ್ತು. ಪ್ರವಾಹ ಪೀಡಿತ ಪ್ರದೇಶ ಪರಿವೀಕ್ಷಣೆಗೆ ಸ್ಥಳೀಯ ಶಾಸಕ ಅರವಿಂದ ಲಿಂಬಾವಳಿ ಭೇಟಿ ನೀಡಿದ್ದರು. ಮಳೆ ಅನಾಹುತ ಪ್ರದೇಶವಾದ ವರ್ತೂರು ಕೆರೆ ಕೋಡಿ ವೀಕ್ಷಣೆ ಮಾಡುತ್ತಿದ್ದ ವೇಳೆ ಮಹಿಳೆಯೊಬ್ಬರು ಮನವಿ ಸಲ್ಲಿಸಲು ಆಗಮಿಸಿದ್ದರು. ಈ ವೇಳೆ ಮಹಿಳೆಯೊಂದಿಗೆ ಶಾಸಕ ಲಿಂಬಾವಳಿ ವಾಗ್ವಾದ ನಡೆಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
(ಇದನ್ನೂ ಓದಿ: ಮಳೆ ಹಾನಿ ಪ್ರದೇಶದ ವೀಕ್ಷಣೆ ವೇಳೆ ಮಹಿಳೆಗೆ ಗದರಿದ ಶಾಸಕ ಲಿಂಬಾವಳಿ.. ವಿಡಿಯೋ ವೈರಲ್)