ಬೆಂಗಳೂರು: ನಾನು ರಾಜಕೀಯದಿಂದ ನಿವೃತ್ತಿ ಆಗಿಲ್ಲ, ಪಕ್ಷ ಯಾವುದೇ ಜವಾಬ್ದಾರಿ ಕೊಟ್ಟರೂ ನಿರ್ವಹಿಸಲು ಸಿದ್ಧನಿದ್ದೇನೆ ಎಂದು ಪರೋಕ್ಷವಾಗಿ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಆಕಾಂಕ್ಷಿ ಎನ್ನುವ ಸಂದೇಶವನ್ನು ಪಕ್ಷದ ನಾಯಕರಿಗೆ ಮಾಜಿ ರಾಜ್ಯಸಭಾ ಸದಸ್ಯ ಪ್ರಭಾಕರ್ ಕೋರೆ ರವಾನಿಸಿದ್ದಾರೆ.
ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ನಿವಾಸಕ್ಕೆ ಬಿಜೆಪಿ ಹಿರಿಯ ನಾಯಕ ಹಾಗೂ ರಾಜ್ಯಸಭೆ ಮಾಜಿ ಸದಸ್ಯ ಪ್ರಭಾಕರ್ ಕೋರೆ ಭೇಟಿ ನೀಡಿದರು. ಕೆಲಕಾಲ ಜಿಲ್ಲಾ ರಾಜಕಾರಣದ ಬಗ್ಗೆ, ನೀರಾವರಿ ಯೋಜನೆಗಳ ಬಗ್ಗೆ ಸಮಾಲೋಚನೆ ನಡೆಸಿದರು.
ನಂತರ ಸುದ್ದಿಗಾರೊಂದಿಗೆ ಮಾತನಾಡಿದ ಪ್ರಭಾಕರ್ ಕೋರೆ, ನಮ್ಮ ಜಿಲ್ಲೆಯಲ್ಲಿ ಬಾಕಿ ಇದ್ದ ನೀರಾವರಿ ಯೋಜನೆಗಳನ್ನು ಕ್ಲೀಯರ್ ಮಾಡಲು ರಮೇಶ್ ಜಾರಕಿಹೊಳಿ ಅವರನ್ನು ಭೇಟಿ ಮಾಡಿದ್ದೆ. ರಾಜಕೀಯ ವಿಚಾರ ಯಾವುದೂ ಚರ್ಚೆ ಮಾಡಿಲ್ಲ ಎಂದರು.
ಬೆಳಗಾವಿ ಲೋಕಸಭಾ ಉಪಚುನಾವಣೆ ಟಿಕೆಟ್ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಕೋರೆ, ರಾಜ್ಯಸಭೆಗೆ ನಾನು ಮರು ಸ್ಪರ್ಧೆ ಮಾಡದೇ ಇರಬಹುದು. ಹಾಗಂತ ನಾನು ರಾಜಕೀಯದಿಂದ ನಿವೃತ್ತಿ ಆಗಿಲ್ಲ, ಪಕ್ಷ ಯಾವುದೇ ಜವಾಬ್ದಾರಿ ಕೊಟ್ಟರೂ ನಾನು ನಿರ್ವಹಣೆ ಮಾಡುತ್ತೇನೆ ಎಂದು ಸುರೇಶ್ ಅಂಗಡಿ ನಿಧನದಿಂದ ತೆರವಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಸ್ಪರ್ಧೆ ಮಾಡುವ ಕುರಿತು ಪರೋಕ್ಷವಾಗಿ ಇಂಗಿತ ವ್ಯಕ್ತಪಡಿಸಿದ್ದಾರೆ.
ಮರಾಠ ಅಭಿವೃದ್ಧಿ ನಿಗಮ ವಿಚಾರದಲ್ಲಿ ಸ್ವಲ್ಪ ಸಮಸ್ಯೆ ಮಿಕ್ಸ್ ಮಾಡುತ್ತಿದ್ದಾರೆ. ಮರಾಠಿ ಭಾಷೆ ಬೇರೆ, ಮರಾಠ ಅಭಿವೃದ್ಧಿ ನಿಗಮ ಬೇರೆ. ಬೆಂಗಳೂರು, ಮೈಸೂರಿನಲ್ಲಿ ಇರುವ ಮರಾಠಿಗರು ಕನ್ನಡ ಮಾತಾಡುತ್ತಾರೆ. ಭಾಷೆ ಬೇರೆ, ಜಾತಿ ಬೇರೆ ಎಂದರು.
ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ 500 ಕೋಟಿ ರೂ. ಮೀಸಲಿಟ್ಟ ವಿಚಾರಕ್ಕೆ ಪ್ರತಿಕ್ರಿಯಿಸಿ, ಜಾತಿಗೊಂದು ನಿಗಮ ಮಾಡೋದು ಸರ್ಕಾರಕ್ಕೆ ಬಿಟ್ಟ ವಿಚಾರ. ಆದರೆ ವೀರಶೈವ-ಲಿಂಗಾಯತರನ್ನು ಹಿಂದುಳಿದ ವರ್ಗದೊಳಗೆ ಸೇರಿಸಲು ಕೇಳಿದ್ದೆವು, ಅದನ್ನು ಇವತ್ತೂ ಕೇಳುತ್ತಿದ್ದೇವೆ ಎಂದರು.
ರಮೇಶ್ ಜಾರಕಿಹೊಳಿ ಪುತ್ರ ಬೆಳಗಾವಿಯಿಂದ ಸ್ಪರ್ಧೆ ಮಾಡುವ ವಿಷಯ ನನಗೆ ಗೊತ್ತಿಲ್ಲ ಎಂದ ಪ್ರಭಾಕರ್ ಕೋರೆ, ಕಾಂಗ್ರೆಸ್ನ ಪ್ರಕಾಶ್ ಹುಕ್ಕೇರಿ ಬಿಜೆಪಿಗೆ ಬರ್ತಾರಾ ಎನ್ನುವ ಪ್ರಶ್ನೆಗೆ ಸೋನಿಯಾ ಗಾಂಧಿ ಬೇಕಿದ್ದರೆ ಬಿಜೆಪಿಗೆ ಬರ್ತಾರೆ. ಆದರೆ ಪ್ರಕಾಶ್ ಹುಕ್ಕೇರಿ ಮಾತ್ರ ಬಿಜೆಪಿಗೆ ಬರೋದಿಲ್ಲ ಎಂದು ನಗೆ ಚಟಾಕಿ ಹಾರಿಸಿದರು.