ಬೆಂಗಳೂರು: ಕೇಂದ್ರದಲ್ಲಿ ಸಚಿವನಾಗುವ ಅರ್ಹತೆ ನನಗಿದೆ. ನಾನಾಗಿಯೇ ಕೇಳಲ್ಲ, ಅವರಾಗಿಯೇ ಸಚಿವಸ್ಥಾನ ನೀಡಿದ್ರೆ ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ಮೊದಲ ಬಾರಿ ಸಂಸದರಾಗಿರುವ ಡಾ. ಉಮೇಶ್ ಜಾಧವ್ ತಮ್ಮ ಮನದ ಇಂಗಿತವನ್ನು ಹೊರಹಾಕಿದ್ದಾರೆ.
ಡಾಲರ್ಸ್ ಕಾಲೋನಿಯಲ್ಲಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪನವರ ನಿವಾಸಕ್ಕೆ ಡಾ.ಉಮೇಶ್ ಜಾಧವ್ ಭೇಟಿ ನೀಡಿದರು. ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವ ಜಾಧವ್ಗೆ ಅವರು ಮಾಲೀಕಯ್ಯ ಗುತ್ತೇದಾರ್ ಸಾಥ್ ನೀಡಿದ್ರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಾಧವ್, ನಾನಾಗಿಯೇ ಕೇಂದ್ರ ಸಚಿವ ಸ್ಥಾನವನ್ನು ಅಪೇಕ್ಷಿಸುವುದಿಲ್ಲ. ಒಂದು ವೇಳೆ ಪ್ರಧಾನಿಯವರು ಅವರಾಗಿಯೇ ಸಚಿವ ಸ್ಥಾನ ಕೊಟ್ಟರೆ ಸಮರ್ಥವಾಗಿ ನಿಭಾಯಿಸುತ್ತೇನೆ. ಉತ್ತಮ ಕೆಲಸ ಮಾಡಿ ತೋರಿಸುತ್ತೇನೆ ಎಂದರು.
ಇನ್ನು ಮಲ್ಲಿಕಾರ್ಜುನ್ ಖರ್ಗೆ ಅವರದ್ದು ಮುಗಿದ ಕಥೆ. ಅದರ ಬಗ್ಗೆ ಮಾತಾಡಬಾರದು. ಸತತ ಗೆಲುವುಗಳಿಂದ ಅವರು ಸೋಲಿಲ್ಲದ ಸರದಾರರಾಗಿ ಮೆರೆದಿದ್ದರು. ಈಗ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ನನ್ನ ಮೇಲೆ ಭರವಸೆ ಇಟ್ಟು ಅವಕಾಶ ಕೊಟ್ಟಿದ್ದರಿಂದ ನಾನು ಗೆದ್ದಿದ್ದೇನೆ. ಕಲಬುರಗಿಯಲ್ಲಿ ಇದೀಗ ಹಬ್ಬದ ವಾತಾವರಣ ನಿರ್ಮಾಣವಾಗಿದೆ ಎಂದು ಜಾಧವ್ ಸಂತಸ ವ್ಯಕ್ತಪಡಿಸಿದರು.
ನಾನು ಮೊದಲಿನಿಂದಲೂ ಮೈತ್ರಿ ಸರ್ಕಾರವನ್ನು ವಿರೋಧಿಸುತ್ತಿದ್ದೆ. ಹಾಗಾಗಿ ನನ್ನ ಕ್ಷೇತ್ರಕ್ಕೆ ಬರಬೇಕಿದ್ದ ಎಲ್ಲ ಅನುದಾನವನ್ನೂ ಸಂಪೂರ್ಣ ನಿಲ್ಲಿಸಲಾಗಿತ್ತು. ಹಾಗಾಗಿ ನಾನು ಕಾಂಗ್ರೆಸ್ ಬಿಟ್ಟು ಬಂದೆ. ಇಲ್ಲಿ ಗೆದ್ದು ಸಂಸದನಾಗಿದ್ದೇನೆ ಎಂದು ಮೈತ್ರಿ ಸರ್ಕಾರದ ವಿರುದ್ಧ ಉಮೇಶ್ ಜಾಧವ್ ಕಿಡಿಕಾರಿದರು.
ನಾವು ಮೈತ್ರಿ ಸರ್ಕಾರವನ್ನು ಬೀಳಿಸುವ ಅಗತ್ಯವಿಲ್ಲ, ಅದೇ ಬೀಳಲಿದೆ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಅವರಾಗಿಯೇ ರಾಜೀನಾಮೆ ಕೊಟ್ಟರೆ ಒಳ್ಳೆ ಸಂದೇಶ ಜನರಿಗೆ ಹೋಗುತ್ತದೆ. ಹಾಗಾಗಿ ಸಿಎಂ ಸಂಜೆ ವೇಳೆ ರಾಜೀನಾಮೆ ನೀಡುವ ಭರವಸೆ ನನಗಿದೆ. ಕಾಂಗ್ರೆಸ್ ರೆಬಲ್ ಶಾಸಕರೆಲ್ಲರೂ ನಮ್ಮ ಸ್ನೇಹಿತರಾಗಿದ್ದು, ಅವರೂ ಬರಲಿದ್ದಾರೆ ಎಂದು ಮೈತ್ರಿ ಸರ್ಕಾರ ಬೀಳಿಸುವ ಸುಳಿವವನ್ನು ಡಾ. ಜಾಧವ್ ನೀಡಿದ್ರು.