ಬೆಂಗಳೂರು : ನೈಸ್ ರಸ್ತೆ ಮಾಡುವ ಸಂದರ್ಭದಲ್ಲಿ ರೈತರ ಜಮೀನನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಇದೊಂದು ದೊಡ್ಡ ಹಗರಣವಾಗಿದ್ದು, ಈ ಬಗ್ಗೆ ದಾಖಲೆಗಳನ್ನು ಸಂಗ್ರಹಿಸಿದ್ದೇನೆ. ನೈಸ್ ಹಗರಣದ ದಾಖಲೆಗಳನ್ನು ದೆಹಲಿಯಲ್ಲಿ ಬಿಡುಗಡೆ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ರೈತರ ಹೆಸರಿನಲ್ಲಿ ಕೋಟಿ, ಕೋಟಿ ಹಣ ಲೂಟಿಯಾಗಿದೆ. ನೈಸ್ ಸಂಸ್ಥೆ ವಿರುದ್ಧ ದೂರು ನೀಡಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸಮಯ ಕೇಳುತ್ತಿದ್ದೇನೆ. ಅವರಿಗೂ ಈ ದಾಖಲೆಗಳನ್ನು ನೀಡುತ್ತೇನೆ. ನೈಸ್ ಹೆಸರಿನಲ್ಲಿ ನಡೆದಿರುವ ಅಕ್ರಮವನ್ನು ಬಯಲಿಗೆ ಎಳೆಯುವವರೆಗೂ ನನ್ನ ಹೋರಾಟ ನಿಲ್ಲುವುದಿಲ್ಲ ಎಂದು ಹೇಳಿದರು.
ಬಿಜೆಪಿಯವರು ಭ್ರಷ್ಟಾಚಾರವನ್ನು ಮಟ್ಟ ಹಾಕಬೇಕು ಎಂದಿದ್ದರೆ ನೈಸ್ ವಿಚಾರದಲ್ಲಿ ಯಾವ ರೀತಿ ತನಿಖೆ ಮಾಡುತ್ತಾರೆಂದು ಕಾದು ನೋಡುತ್ತೇನೆ. ಕಳೆದ ಮೂವತ್ತು ವರ್ಷಗಳಿಂದ ಯೋಜನೆಯೂ ಪೂರ್ಣಗೊಂಡಿಲ್ಲ. ಜಮೀನುಗಳ ದುರುಪಯೋಗಗಳೂ ಕಡಿಮೆಯಾಗಿಲ್ಲ. ಈ ಹಿಂದೆ ನಾನು ಮುಖ್ಯಮಂತ್ರಿಯಾಗಿದ್ದ ವೇಳೆ ಸಿಂಗಾಪುರ ಪ್ರವಾಸದಲ್ಲಿದ್ದೆ. ಆಗ ನೈಸ್ ಸಂಸ್ಥೆಯ ಮುಖ್ಯಸ್ಥ ಅಶೋಕ್ ಖೇಣಿ ನನ್ನನ್ನು ಅಲ್ಲಿಗೇ ಹುಡುಕಿಕೊಂಡು ಬಂದಿದ್ದರು. ಆದರೆ ನಾನು ಯಾವುದೇ ವಿಚಾರಗಳಿದ್ದರೂ ವಿಧಾನಸೌಧಕ್ಕೆ ಬಂದು ಚರ್ಚೆ ಮಾಡಿ, ಇಲ್ಲಿ ಬೇಡ ಎಂದು ನಾನು ಬೈದು ಕಳುಹಿಸಿದ್ದೆ ಎಂದು ಹೇಳಿದರು.
ನೈಸ್ ಹಗರಣದ ಕುರಿತು ವರದಿ ನೀಡಿರುವ ಕಾಂಗ್ರೆಸ್ನ ಹಿರಿಯ ಶಾಸಕ ಟಿ.ಬಿ.ಜಯಚಂದ್ರ ಅವರಿಗೆ ರೈತರ ಹೆಸರಿನಲ್ಲಿ ಬೆದರಿಕೆ ಹಾಕಿದವರು ಯಾರು?. ಜಯಚಂದ್ರ ಅವರೇ ಯಾವುದೋ ಸ್ಥಾನಕ್ಕಾಗಿ ಮೌನವಾಗಿರಬೇಡಿ, ಯಾರು ಬೆದರಿಕೆ ಹಾಕಿದ್ದಾರೆ ಎಂಬುದನ್ನು ರಾಜ್ಯದ ಜನತೆ ಮುಂದೆ ಹೇಳಿ. ಬಡ ರೈತರ ಭೂಮಿ ಉಳಿಸುವುದಕ್ಕೆ ಪ್ರಾಮಾಣಿಕ ಕೆಲಸ ಮಾಡಿದ್ದೀರಿ. ಪಕ್ಷ ರಾಜಕೀಯ ಸ್ಥಾನಮಾನಕ್ಕಿಂತ ನಾಡಿನ ಜನತೆಯ ಬದುಕಿನ ಪ್ರಶ್ನೆ ಮುಖ್ಯ ಎಂದು ಹೆಚ್ಡಿಕೆ ಹೇಳಿದರು.
ಕಾಂಗ್ರೆಸ್ ನಾಯಕರಿಗೆ ಸವಾಲು ಹಾಕಿದ ಹೆಚ್ಡಿಕೆ : ಎಸ್‍ಪಿ ರೋಡ್ನಿಂದ ಪೆನ್ ಡ್ರೈವ್ ತರುವ ಅಗತ್ಯವಿಲ್ಲ. ನಾನು ಯಾವುದೇ ನಕಲಿ ದಾಖಲೆ ಸೃಷ್ಟಿಸಿಲ್ಲ. ವರ್ಗಾವಣೆ ಅಕ್ರಮಕ್ಕೆ ಸಂಬಂಧಿಸಿದಂತೆ ಪೆನ್ ಡ್ರೈವ್ ಬಿಡುಗಡೆ ಮಾಡುತ್ತೇನೆ. ಕ್ರಮ ತೆಗೆದುಕೊಳ್ಳುವ ಧಮ್ಮು ತಾಕತ್ತು ಸರ್ಕಾರಕ್ಕೆ ಇದೆಯೇ? ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಗೆ ತಿರುಗೇಟು ನೀಡಿದರು.
ನಾನು ದಾಖಲೆ ಬಹಿರಂಗಪಡಿಸಿದರೆ ಅದರಲ್ಲಿರುವ ದನಿ ಮಿಮಿಕ್ರಿ ಎಂದು ಉತ್ತರ ನೀಡುತ್ತಾರೆ. ಈ ವ್ಯವಸ್ಥೆಯಲ್ಲಿ ಯಾವುದೇ ಹಗರಣಗಳು ತಾರ್ಕಿಕ ಅಂತ್ಯ ಕಾಣುವುದಿಲ್ಲ. ಇಂತಹ ವಿಚಾರಗಳು ತಮಗೆ ಅನುಭವಕ್ಕೆ ಬಂದಿದೆ. ನಾನು ಮುಖ್ಯಮಂತ್ರಿಯಾಗಿದ್ದಾಗಲೇ ವರದಿ ಬಿಡುಗಡೆ ಮಾಡಬಹುದಿತ್ತು ಎಂದು ಕಾಂಗ್ರೆಸಿಗರು ಹೇಳುತ್ತಾರೆ. ಆದರೆ ನಾನು ಆಗ ಕೆಲವರ ಮರ್ಜಿಯಲ್ಲಿದ್ದೆ. ಅದಕ್ಕಾಗಿ ಬಿಡುಗಡೆ ಮಾಡಲಿಲ್ಲ ಎಂದು ಹೇಳಿದರು.
ಇಂತಹ ಕೆಟ್ಟ ಸರ್ಕಾರವನ್ನು ನನ್ನ ರಾಜಕೀಯ ಜೀವನದಲ್ಲಿ ನೋಡಿರಲಿಲ್ಲ. ಪೆನ್ ಡ್ರೈವ್ ಸೇರಿದಂತೆ ಟನ್ ಗಟ್ಟಲೆ ಸಾಕ್ಷ್ಯಗಳು ನನ್ನ ಬಳಿ ಇವೆ. ಹಿಟ್ ಅಂಡ್ ರನ್ ಮಾಡುವುದರ ಬದಲು ದಾಖಲೆ ಬಿಡುಗಡೆ ಮಾಡಿ ಎಂದು ಕಾಂಗ್ರೆಸಿಗರು ಸವಾಲು ಹಾಕುತ್ತಿದ್ದಾರೆ. ಅವರು ನನ್ನನ್ನು ಕೆಣಕಲಿ ಎಂದೇ ಕಾಯುತ್ತಿದ್ದೇನೆ. ನಾನು ದಾಖಲೆ ಬಿಡುಗಡೆ ಮಾಡಿದರೆ ಅವರಿಗೆ ತಡೆದುಕೊಳ್ಳುವ ಶಕ್ತಿ ಇದೆಯೇ ಎಂದು ಪ್ರಶ್ನೆ ಮಾಡಿದರು.
ನಾನು ಹಿಟ್ ಅಂಡ್ ರನ್ ಮಾಡುವ ವ್ಯಕ್ತಿಯಲ್ಲ : ನಾನು ಹಿಟ್ ಅಂಡ್ ರನ್ ಮಾಡುವ ಜಾಯಮಾನದ ವ್ಯಕ್ತಿಯಲ್ಲ, ಕೆಲವೊಂದು ವಿಚಾರವನ್ನು ಪ್ರಸ್ತಾಪ ಮಾಡುವುದು ಹುಡುಗಾಟಿಕೆಗೆ ಅಲ್ಲ. ಸಿಎಂ ಸಿದ್ದರಾಮಯ್ಯ ಅವರು ನನ್ನದು ಹಿಟ್ ಅಂಡ್ ರನ್ ಎಂದಿದ್ದಾರೆ. ಹಿಟ್ ಅಂಡ್ ರನ್ ಕಾಂಗ್ರೆಸ್ ನಾಯಕರು ಹಿಂದೆ 40 ಪರ್ಸೆಂಟ್, ಪೇ ಸಿಎಂ ಆರೋಪ ಮಾಡಿದ್ದರು. ಒಂದಕ್ಕಾದರೂ ದಾಖಲೆ ಬಿಡುಗಡೆ ಮಾಡಿದ್ದಾರಾ?, ಈಗ ನಿಮ್ಮದೇ ಸರ್ಕಾರವಿದೆ ದಾಖಲೆ ಏಕೆ ಬಿಡುಗಡೆ ಮಾಡಿಲ್ಲ ಎಂದು ತೀವ್ರ ವಾಗ್ದಾಳಿ ನಡೆಸಿದರು.
ಸರ್ಕಾರದದಲ್ಲಿ ಗ್ಯಾರಂಟಿ ಯೋಜನೆ ಬಿಟ್ಟರೆ ಯಾವುದೇ ಅಭಿವೃದ್ಧಿಯಾಗಿಲ್ಲ. ಟೋಪಿ ಹಾಕುವುದಕ್ಕೆ ಒಂದು ಇತಿಮಿತಿ ಇದೆ. ಕಾಂಗ್ರೆಸ್ ನವರು ಕಿವಿಗೆ ಚೆಂಡು ಹೂವು ಇಟ್ಟುಕೊಂಡು ಈಗ ಜನರ ಮೇಲೆ ಹೂವಿನ ಕುಂಡವನ್ನೇ ಇಟ್ಟಿದ್ದಾರೆ. ವರ್ಗಾವಣೆ ವಿಚಾರ ಮಾತನಾಡುವುದಕ್ಕೆ ನನಗೆ ಅಸಹ್ಯವಾಗುತ್ತದೆ. ಅಷ್ಟರ ಮಟ್ಟಿಗೆ ವರ್ಗಾವಣೆ ದಂಧೆ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು, ನಾನು ಮುಖ್ಯಮಂತ್ರಿಯಾಗಿದ್ದಾಗ ವರ್ಗಾವಣೆಯಲ್ಲಿ ಹಸ್ತಕ್ಷೇಪ ಮಾಡಿದ್ದೇನೆ ಎಂದು ಹೇಳಿದ್ದಾರೆ. ಅದು ಸುಳ್ಳು, ಪೊಲೀಸ್ ಮತ್ತು ಬಿಡಿಎ ಅಧಿಕಾರಿಗಳ ವರ್ಗಾವಣೆಯಲ್ಲಿ ಏನೆಲ್ಲ ಆಯಿತು ಎಂದು ನನಗೆ ಗೊತ್ತಿದೆ. ವರ್ಗಾವಣೆಯಲ್ಲಿ ಒಂದು ಸಾವಿರ ಕೋಟಿಗಿಂತ ಹೆಚ್ಚು ಹಣ ಸಂಗ್ರಹಿಸಿದ್ದಾರೆ ಎಂದು ಆರೋಪಿಸಿದರು.
ಬಿಲ್ ಪಾವತಿಗೆ ಕಮಿಷನ್ : ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆದಿರುವ ಹಿಂದಿನ ಕಾಮಗಾರಿಗಳಲ್ಲಿ ಬಿಲ್ ಪಾವತಿ ಮಾಡಲು ಶೇ.10 ರಿಂದ 15 ರಷ್ಟು ಕಮಿಷನ್‍ಗೆ ಒತ್ತಾಯಿಸಲಾಗುತ್ತಿದೆ ಎಂದು ಹೆಚ್ಡಿಕೆ ಗಂಭೀರ ಆರೋಪ ಮಾಡಿದರು. ಪ್ರತಿಯೊಂದು ಇಲಾಖೆಯಲ್ಲೂ ಕಾಮಗಾರಿಗಳ ಬಿಲ್ ಪಾವತಿಗೂ ಮುನ್ನ ಸಚಿವರ ಗಮನಕ್ಕೆ ತರಬೇಕು ಎಂದು ಸೂಚಿಸಲಾಗಿದೆ. ಸಚಿವರು ಇರುವುದು ಯೋಜನೆಗಳನ್ನು ರೂಪಿಸಲು, ಅದಕ್ಕೆ ಅನುಮೋದನೆ ನೀಡಲು. ಬಿಲ್ ಪಾವತಿಸಲು ಅಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಯಾವ ದಿಕ್ಕಿನಲ್ಲಿ ನಡೆಯುತ್ತಿದೆ ಎಂದು ಕಿಡಿಕಾರಿದರು.
ಡಿಕೆಶಿಗೆ ತಿರುಗೇಟು : ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡುವಾಗ, ಕುಮಾರಸ್ವಾಮಿಯವರು ಖುಷಿಯಿಂದ ಮಾತನಾಡುತ್ತಾರೆ. ಅಣ್ಣ ಮಾತನಾಡಲಿ, ತಮ್ಮ ಕೇಳುತ್ತೇನೆ ಎಂದಿದ್ದಾರೆ. ಸದ್ಯಕ್ಕೆ ಅಂತಹ ತಮ್ಮ ನನಗಿಲ್ಲ. ಈ ಜನ್ಮದಲ್ಲಂತೂ ಅವರಿಗೆ ನಾನು ಅಣ್ಣನಾಗಲೂ ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದರು.
ಡಿಸಿಪಿ ಡಿ.ಕೆ ಶಿವಕುಮಾರ್‌ರವರ ವಿರುದ್ಧವೂ ಹೆಸರು ಹೇಳದೆ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, ಬೆಂಗಳೂರು ಮಂತ್ರಿ 710 ಕೋಟಿ ರೂ. ಬಿಡುಗಡೆ ಮಾಡಿಲ್ಲ. 2019-20ರ ನಡುವೆ ನಡೆದಿರುವ ಕಾಮಗಾರಿಗಳಿಗೆ ಬಾಕಿ ಬಿಲ್ಗಳನ್ನು ಪಾತಿಸಲು ಶೇ.5, 2020-21 ರ ಬಾಕಿ ಬಿಲ್ ಪಾವತಿಗೆ ಶೇ.15 ರಷ್ಟು ಕಮಿಷನ್ ಕೊಡಬೇಕು. ಅದು ಬ್ರಾಂಡ್ ಬೆಂಗಳೂರು ಸಲಹೆಗಾರರ ಮೂಲಕ ಹಣ ತಲುಪಿಸಬೇಕು. ಹಣ ತಲುಪಿದರೆ ಕಾಮಗಾರಿ ಹಣ ಬಿಡುಗಡೆ ಮಾಡುತ್ತಾರೆ. ಇದಕ್ಕೆ ನಾನು ಕ್ಯಾಮರಾ ಹಿಡಿದುಕೊಂಡು ಹೋಗಿ ಸಾಕ್ಷ್ಯ ಕೊಡುವುದಕ್ಕೆ ಆಗುವುದಿಲ್ಲ. ಹಿಂದೆ ಖಾಸಗಿ ಚಾನೆಲ್‍ನವರು ಕ್ಯಾಮರಾ ಹಿಡಿದುಕೊಂಡು ಹೋಗಿ ಪೆಟ್ಟು ತಿಂದಿರುವುದು ನಮ್ಮ ಕಣ್ಣ ಮುಂದಿದೆ ಎಂದರು.
ಡಿ.ಕೆ.ಶಿವಕುಮಾರ್ ಅವರು ಒಕ್ಕಲಿಗರ ಸಮಾವೇಶದಲ್ಲಿ ಮಾತನಾಡುವಾಗ, ಕುಮಾರಸ್ವಾಮಿ ಅವರಿಗೆ ಎರಡು ಬಾರಿ ಪೆನ್ ಕೊಟ್ಟಿದ್ದೀರ. ನನಗೂ ಒಮ್ಮೆ ಕೊಡಿ ಎಂದು ಕೇಳಿದರು. ಇಂತಹ ಹಗರಣಗಳನ್ನು ಮಾಡಲು ಪೆನ್ ಬೇಕಿತ್ತೇ. ಪೆರಿಫೆರೆಲ್ ರಸ್ತೆಯಲ್ಲಿ ನೈಸ್ ಸಂಸ್ಥೆ ಜೊತೆ ಸೇರಿ ಏನೆಲ್ಲಾ ಮಾಡುತ್ತಿದ್ದಾರೆ ಎಂದು ತಮ್ಮ ಗಮನಕ್ಕಿದೆ ಎಂದು ವಾಗ್ದಾಳಿ ನಡೆಸಿದರು.
ಪ್ರತೀ ದಿನ ಇವರಲ್ಲಿ ನಡೆಯುವ ವ್ಯವಹಾರಗಳನ್ನು ಕ್ಯಾಮರಾ ಇಟ್ಟುಕೊಂಡು ಹೋಗಿ ಸಾಕ್ಷ್ಯ ನೀಡಲು ಸಾಧ್ಯವಿಲ್ಲ. ಈ ಹಿಂದಿನ ಸರ್ಕಾರದ ವಿರುದ್ಧ ಕಾಂಗ್ರೆಸಿಗರು ತರಾವರಿಯ ಆರೋಪಗಳನ್ನು ಮಾಡಿದರು. ಒಂದಕ್ಕಾದರೂ ದಾಖಲೆ ಕೊಟ್ಟಿದ್ದಾರೆಯೇ ಎಂದು ಪ್ರಶ್ನಿಸಿದ ಹೆಚ್ ಡಿಕೆ, ಹಿಂದಿನ ಹಗರಣಗಳ ಬಗ್ಗೆ 26 ಅಂಶಗಳ ಮೇಲೆ ತನಿಖೆ ನಡೆಸುವುದಾಗಿ ಸರ್ಕಾರ ಹೇಳುತ್ತಿದೆ. ಆದರೆ ತನಿಖೆಗೆ ಯಾರನ್ನು ನೇಮಿಸಿದೆ, ಹಿಂದೆ ಅಕಾರ ಮಾಡಿದವರೇ ಇದರಲ್ಲಿ ಇದ್ದಾರೆ.
ಕಳೆದ ಮೂರು ತಿಂಗಳಿನಲ್ಲಿ 709 ಕೋಟಿ ರೂ. ಹಣ ಬಿಡುಗಡೆಯಾಗಿತ್ತು. ಆಗಿನ ಕಾಂಗ್ರೆಸ್ ಸಂಸದರೊಬ್ಬರು ಹಣ ಬಿಡುಗಡೆ ಮಾಡಬಾರದು. ನಮ್ಮ ಸರ್ಕಾರ ಬಂದ ಮೇಲೆ ತನಿಖೆ ಮಾಡಿಸುತ್ತೇವೆ ಎಂದು ಎಚ್ಚರಿಸಿದ್ದರು. ಆ ಹಣವನ್ನು ಬ್ಯಾಂಕಿನಲ್ಲಿಡಲಾಗಿದೆ. ಈಗ ಅದರ ಮೇಲೆ ಶೇ.10 ರಷ್ಟು ಕಮಿಷನ್ ಕೇಳಲಾಗುತ್ತಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಸುರ್ಜೆವಾಲ ಬಿಬಿಎಂಪಿ ಅಕಾರಿಗಳ ಜೊತೆ ಸಭೆ ಮಾಡುತ್ತಿದ್ದಾರೆಂದರೆ ಏನು ಅರ್ಥ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಹೆಚ್ಡಿಕೆ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತೀ ಬಾರಿ ತಾವು ಪ್ರಾಮಾಣಿಕ ಎಂದು ಹೇಳಿಕೊಳ್ಳುತ್ತಾರೆ. ಒಂದೇ ಒಂದು ಹಗರಣವನ್ನು ಸಾಬೀತುಪಡಿಸಿದರೂ ರಾಜಕೀಯದಿಂದ ನಿವೃತ್ತಿಯಾಗುತ್ತೇನೆಂದು ಸವಾಲು ಹಾಕುತ್ತಾರೆ. ಹಾಗಿದ್ದರೆ ಅರ್ಕಾವತಿ ಬಡಾವಣೆಯ ರೀ ಡು ಪ್ರಕರಣವನ್ನು ಪಾರದರ್ಶಕವಾಗಿಯೇ ಮಾಡಿದ್ದಾರೆಯೇ, ಅದರ ತನಿಖೆಗಾಗಿ ರಚಿಸಿದ್ದ ನ್ಯಾಯಮೂರ್ತಿ ಕೆಂಪಣ್ಣ ಅವರ ಆಯೋಗದ ವರದಿ ಏನಾಯಿತು?, ಅದನ್ನು ಏಕೆ ಬಹಿರಂಗಪಡಿಸುತ್ತಿಲ್ಲ ಎಂದು ಪ್ರಶ್ನೆ ಮಾಡಿದರು.
ನನ್ನ ರಾಜಕೀಯ ಜೀವನದಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದೇನೆ. ಎಂದಿಗೂ ನನ್ನ ಸಹಿಯನ್ನು ಮಾರಾಟಕ್ಕಿಟ್ಟಿಲ್ಲ. ಹಾಗೆಂದು ನಾನು ಪಾರದರ್ಶಕ ಹಾಗೂ ಪ್ರಾಮಾಣಿಕನಾಗಿದ್ದೇನೆ ಎಂದಲ್ಲ. ಚುನಾವಣೆ ನಡೆಸಲು ಹಣ ಬೇಕು. ನಮ್ಮಿಂದ ಸಹಾಯ ಪಡೆದವರಿಗೆ ಚುನಾವಣೆ ವೇಳೆ ಮನವಿ ಮಾಡುತ್ತೇನೆ. ಅದನ್ನು ಅವರು ಗೌರವಿಸುತ್ತಾರೆ ಎಂದು ಹೇಳಿದರು.
ರಾಜ್ಯದ ಪೊಲೀಸರು ಕೇರಳಕ್ಕೆ ಹೋಗಿ ಹಣ ವಸೂಲಿ ಮಾಡುವಾಗ ಬಂಧನಕ್ಕೆ ಒಳಗಾಗಿದ್ದಾರೆ. ಇಂತಹ ಪ್ರಕರಣಗಳು ರಾಜ್ಯ ಸರ್ಕಾರವನ್ನು ದೇಶಕ್ಕೆ ಯಾವ ರೀತಿ ಮಾದರಿ ಮಾಡುತ್ತಾರೆ. ಪೊಲೀಸ್ ಇಲಾಖೆಯ ವರ್ಗಾವಣೆಯ ಸಮಯದಲ್ಲಿ ಯಾರೆಲ್ಲಾ ಭಾಗವಹಿಸಿದ್ದರು, ಏಕೆ ಗಲಾಟೆ ಆಯಿತು ಎಂದು ಬಹಿರಂಗಪಡಿಸಲಿ. ರಾಜ್ಯ ಸರ್ಕಾರದ ಬಹಳಷ್ಟು ನ್ಯಾಯಾಂಗ ಪ್ರಕರಣಗಳಲ್ಲಿ ವೈಫಲ್ಯಗಳಾಗಿವೆ. ಈಗ ಅಡ್ವೊಕೇಟ್ ಜನರಲ್ ಒಬ್ಬರನ್ನು ನೇಮಿಸಿಕೊಂಡಿದ್ದಾರೆ. ಸರ್ಕಾರವನ್ನು ದೇವರೇ ಕಾಪಾಡಬೇಕು. ಜೊತೆಗೆ 15 ಹೆಚ್ಚುವರಿ ಅಡ್ವೊಕೇಟ್ ಜನರಲ್ ಕೂಡ ನೇಮಕವಾಗಿದ್ದಾರೆ ಎಂದು ಹೇಳಿದರು.
ನಾನು ವಿದೇಶದಲ್ಲಿದ್ದರೂ ರಾಜ್ಯದ ರಾಜಕೀಯದ ಪ್ರತಿದಿನದ ಬೆಳವಣಿಗೆಯ ಬಗ್ಗೆ ಗಮನ ಇಟ್ಟಿದ್ದೆ. ತಾಜ್ ವೆಸ್ಟ್ ನಲ್ಲಿ ಉದಯವಾದ ಇಂಡಿಯಾ ಬಗ್ಗೆ ಮಾತನಾಡಿದ ಹೆಚ್ ಡಿಕೆ, ಮುಂದಿನ ನಾಲ್ಕೈದು ತಿಂಗಳಲ್ಲಿ ಏನೆಲ್ಲಾ ಆಗಲಿದೆ ಎಂಬುದನ್ನು ಕಾದು ನೋಡಿ ಎಂದರು.
ನನಗೆ ಬಿಜೆಪಿಯ ಜೊತೆ ಹೋಗುವ ದಾರಿದ್ರ್ಯ ಇಲ್ಲ : ವಿಧಾನಸಭೆಯಲ್ಲಿ ಬಿಜೆಪಿ ಅಧಿಕೃತ ವಿರೋಧ ಪಕ್ಷವಾಗಿದೆ. ಅಲ್ಲಿ ಹೋರಾಟ ಮಾಡುವಾಗ ಬಿಜೆಪಿ ಜೊತೆ ಕೈ ಜೋಡಿಸಿದ್ದೇನೆ. ಅಂದ ಮಾತ್ರಕ್ಕೆ ಅವರಿಗೆ ಅಡಿಯಾಳಾಗಲು ಹೋಗಿದ್ದೇನೆ ಎಂದರ್ಥವಲ್ಲ. ಯಾರ ಮನೆಬಾಗಿಲಿಗೂ ಹೋಗುವ ಅಗತ್ಯ ನನಗಿಲ್ಲ. 2008ರಿಂದಲೂ ನಡೆಯುತ್ತಿರುವ ನನ್ನ ಹೋರಾಟ ನಿರಂತರವಾಗಿ ಮುಂದುವರೆಯುತ್ತದೆ. ಎರಡು ರಾಷ್ಟ್ರೀಯ ಪಕ್ಷಗಳು ಜೆಡಿಎಸ್ ಅನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ದುರ್ಬಳಕೆ ಮಾಡಿಕೊಂಡಿದೆ. ಆದರೆ ನಾವು ಏಕಾಂಗಿಯಾಗಿ ಹೋರಾಟ ಮಾಡುವ ಶಕ್ತಿಯನ್ನು ಉಳಿಸಿಕೊಂಡಿದ್ದೇವೆ ಎಂದು ಹೇಳಿದರು.
ಕರ್ನಾಟಕದ ಈ ದುಃಸ್ಥಿತಿಗೆ ಬಿಜೆಪಿ ಕಾಂಗ್ರೆಸ್‌ನದ್ದು ಇಬ್ಬರದ್ದು ಸಮಪಾಲು ಇದೆ. ಕಾಂಗ್ರೆಸ್ ಪಕ್ಷ ರಾಜ್ಯವನ್ನು ದರೋಡೆ ಮಾಡುವುದು ನಿಶ್ಚಿತ. ಈಸ್ಟ್ ಇಂಡಿಯಾ ಕಂಪನಿಯವರೇ ದೇಶವನ್ನು ದರೋಡೆ ಮಾಡಿ ಎಂದು ಕಾಂಗ್ರೆಸ್‌ಗೆ ಬಿಟ್ಟುಕೊಟ್ಟಿದ್ದಾರೆ. 50 ವರ್ಷ ಅಧಿಕಾರದಲ್ಲಿದ್ದ ಕಾಂಗ್ರೆಸ್, ದೇಶವನ್ನು ಯಾವ ಸ್ಥಿತಿಗೆ ತಂದಿದ್ದಾರೆಂದು ಗೊತ್ತಿದೆ. ಇವರು ಉತ್ತಮ ಆಡಳಿತ ನೀಡಿದ್ದರೆ ಹಸಿದಿರುವ ಜನಕ್ಕೆ ಅಕ್ಕಿ ವಿತರಿಸುವ ಪರಿಸ್ಥಿತಿ ಬರುತ್ತಿತ್ತಾ?. ಐವತ್ತು ವರ್ಷದ ಕಾಂಗ್ರೆಸ್ ಆಡಳಿತದಲ್ಲಿ ಜನ ಬಡವರಾಗಿಯೇ ಉಳಿದಿದ್ದಾರೆ ಎಂದು ಟೀಕಾ ಪ್ರಹಾರ ನಡೆಸಿದರು.
ಇದನ್ನೂ ಓದಿ : 'ನಾನು ಹಿಟ್ ಅಂಡ್ ರನ್ ವ್ಯಕ್ತಿಯಲ್ಲ', ದೆಹಲಿಯಲ್ಲೇ ದಾಖಲೆ ಬಿಡುಗಡೆ ಮಾಡ್ತೇನಿ: ಮಾಜಿ ಸಿಎಂ ಹೆಚ್ಡಿಕೆ