ಬೆಂಗಳೂರು: ಆಸ್ತಿ ತೆರಿಗೆ ಸಂಗ್ರಹ ವಿಚಾರದಲ್ಲಿ ಬಿಬಿಎಂಪಿ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಜನವರಿ ತಿಂಗಳಾಂತ್ಯದೊಳಗೆ ಆರ್.ಆರ್.ನಗರ ಕ್ಷೇತ್ರದಿಂದ 90 ಕೋಟಿ ರೂಪಾಯಿ ಬಾಕಿ ಆಸ್ತಿ ತೆರಿಗೆ ವಸೂಲಿ ಮಾಡುವ ಗುರಿ ಇಟ್ಟುಕೊಂಡಿದೆ. ಹೀಗಾಗಿ 10 ಸಾವಿರಕ್ಕಿಂತ ಹೆಚ್ಚು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಮನೆಗಳಿಗೆ ಈಗಾಗಲೇ ನೋಟಿಸ್ ಜಾರಿಯಾಗಿದೆ.
ಈ ನೋಟಿಸ್ ಪ್ರಕಾರ ಒಂದು ಲಕ್ಷ ರೂಪಾಯಿಯ ಮೇಲ್ಪಟ್ಟು ಆಸ್ತಿ ತೆರಿಗೆ ಬಾಕಿ ಉಳಿಸಿದವರಿಗೆ ಜಪ್ತಿ ವಾರೆಂಟ್ ಕಳಿಸಲಾಗುತ್ತಿದೆ. ಐದು ಲಕ್ಷಕ್ಕೂ ಮೀರಿ ಬಾಕಿ ಇರುವ ಕಟ್ಟಡಗಳಿಗೆ ಬೀಗ ಮುದ್ರೆ ಜಡಿಯಲಾಗುತ್ತಿದೆ. ಅಲ್ಲದೆ, ಅತಿಹೆಚ್ಚು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಕಟ್ಟಡಗಳ ವಿದ್ಯುತ್ ಕಡಿತ ಮಾಡಿಸಲಾಗುತ್ತಿದೆ. ಪ್ರತೀ ವರ್ಷ ಆಸ್ತಿ ತೆರಿಗೆ ಪಾವತಿಸುವಲ್ಲಿ ವಿಫಲವಾದ ಆಸ್ತಿ ಮಾಲೀಕರ ಕಟ್ಟಡಗಳಲ್ಲಿ ನೋಟಿಸು ಅಂಟಿಸಲಾಗುತ್ತಿದ್ದು, ಶೇ 24ರಷ್ಟು ಬಡ್ಡಿ ಹಾಗೂ ಮರಿಬಡ್ಡಿ ವಸೂಲಿ ಮಾಡಲಾಗುತ್ತಿದೆ ಎಂದು ರಾಜರಾಜೇಶ್ವರಿ ನಗರ ಉಪಾಯುಕ್ತರಾದ ಕೆ. ಶಿವೇಗೌಡ ಆದೇಶ ಪತ್ರ ಹೊರಡಿಸಿದ್ದಾರೆ.
ಪಾಲಿಕೆ ವ್ಯಾಪ್ತಿಯ ಆರ್.ಆರ್.ನಗರ ವಲಯದಲ್ಲಿ, ಆರ್.ಆರ್.ನಗರ ಹಾಗೂ ಯಶವಂತಪುರ ವಿಧಾನಸಭಾ ಕ್ಷೇತ್ರಗಳೂ ಸೇರಿದಂತೆ 14 ವಾರ್ಡ್ಗಳಿವೆ. ಆರ್.ಆರ್.ನಗರ ವಲಯ ಒಂದರಲ್ಲೇ 2,52,644 ಆಸ್ತಿಗಳಿವೆ. ಆಸ್ತಿ ತೆರಿಗೆಯ ಗುರಿ 274.72 ಕೋಟಿ ರೂಪಾಯಿ ಆಗಿದ್ದು, 117 ಕೋಟಿ ರೂಪಾಯಿ ವಸೂಲಿ ಮಾಡಬೇಕಿದೆ. ಆದ್ರೆ ಸದ್ಯ ಜನವರಿ 2020 ರ ಒಳಗೆ 40,722 ಆಸ್ತಿ ಮಾಲೀಕರಿಂದ 90 ಕೋಟ ರೂಪಾಯಿ ಮೌಲ್ಯದ ಆಸ್ತಿ ತೆರಿಗೆ ಸಂಗ್ರಹಕ್ಕೆ ಪಣ ತೊಟ್ಟಿದ್ದಾರೆ.