ಬೆಂಗಳೂರು: ಬಿಡಿಎ ನೌಕರರ ಕಲ್ಯಾಣ ಸಂಘಕ್ಕೆ ಬೆಂಗಳೂರಿನ ದೊಡ್ಡಕಲ್ಲಸಂದ್ರದಲ್ಲಿ 33 ಎಕರೆ ಭೂಮಿಯನ್ನು ಹಂಚಿಕೆ ಮಾಡಿದ್ದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕ್ರಮವನ್ನು ಹೈಕೋರ್ಟ್ ಎತ್ತಿಹಿಡಿದಿದೆ.
ಭೂಮಿ ಹಂಚಿಕೆ ಕಾನೂನು ಬಾಹಿರವಾಗಿದೆ ಮತ್ತು ಕಡಿಮೆ ಮೊತ್ತಕ್ಕೆ ಹಂಚಿಕೆ ಮಾಡಲಾಗಿದೆ ಎಂದು ಆರೋಪಿಸಿ ಬಿ. ವಿ. ಶಿವಸ್ವಾಮಿ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ಅರ್ಜಿದಾರರ ಆರೋಪಗಳನ್ನು ತಳ್ಳಿಹಾಕಿದೆ.
ಪೀಠ ತನ್ನ ತೀರ್ಪಿನಲ್ಲಿ, ಬಿಡಿಎ ವತಿಯಿಂದ ಹಂಚಿಕೆ ಮಾಡಲಾಗಿದ್ದ ಭೂಮಿಯಲ್ಲಿ ಸಂಘದ 759 ಸದಸ್ಯರಿಗೆ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಅರ್ಜಿದಾರರು ಆರೋಪಿಸಿರುವಂತೆ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗಿಲ್ಲ. ಹೀಗಾಗಿ, ಭೂಮಿ ಹಂಚಿಕೆ ನ್ಯಾಯಬದ್ಧವಾಗಿದೆ ಎಂದು ಅಭಿಪ್ರಾಯಪಟ್ಟಿದೆ.
ಪ್ರಕರಣದ ಹಿನ್ನೆಲೆ:
1998ರ ನ.17 ರಂದು ಬಿಡಿಎ, ಜೆ.ಪಿ.ನಗರ 9ನೇ ಹಂತ ಅಭಿವೃದ್ಧಿಗೆ 1,111 ಎಕರೆ ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿತ್ತು. ಅದರಲ್ಲಿ ದೊಡ್ಡಕಲ್ಲಸಂದ್ರದ ಸರ್ವೇ ನಂಬರ್ 15, 16 ಮತ್ತು 17 ರಲ್ಲಿದ್ದ 33.02 ಎಕರೆ ಭೂಮಿಯೂ ಸೇರಿತ್ತು.
2005ರಲ್ಲಿ ಈ ಭೂಮಿಗೆ ಪ್ರತಿ ಎಕರೆಗೆ 63ಲಕ್ಷ ರೂ ಮಾರುಕಟ್ಟೆ ದರ ನಿಗದಿಪಡಿಸಿತ್ತು. ಆದರೆ, ಬಿಡಿಎ 2006ರಲ್ಲಿ 33 ಎಕರೆ ಭೂಮಿಯನ್ನು 88 ಲಕ್ಷ ರೂ. ನಂತೆ ಹಂಚಿಕೆ ಮಾಡಿದೆ. ಕಡಿಮೆ ಮೊತ್ತಕ್ಕೆ ಭೂಮಿ ಹಂಚಿಕೆ ಮಾಡಿದ ಕಾರಣ ಸರ್ಕಾರದ ಬೊಕ್ಕಸಕ್ಕೆ ಸುಮಾರು 20 ಕೋಟಿ ರೂ. ನಷ್ಟವಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದರು.