ಬೆಂಗಳೂರು : ಹಣ ಇದ್ದವರಿಗಷ್ಟೇ ಲಸಿಕೆ ಸಿಗುತ್ತಿರುವ ಕುರಿತು ಬೇಸರ ವ್ಯಕ್ತಪಡಿಸಿರುವ ಹೈಕೋರ್ಟ್ ಖಾಸಗಿ ಆಸ್ಪತ್ರೆಗಳಿಗೆ ನಿಗದಿಪಡಿಸಿರುವ ಶೇ.25ಕ್ಕಿಂತ ಹೆಚ್ಚಿನ ಪ್ರಮಾಣದ ಲಸಿಕೆ ಲಭ್ಯವಾಗದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕ್ರಮ ಕೈಗೊಳ್ಳಬೇಕು ಎಂದು ಹೈಕೋರ್ಟ್ ಸಲಹೆ ನೀಡಿದೆ.
ಕೋವಿಡ್ ನಿರ್ವಹಣೆ ಹಾಗೂ ಚಿಕಿತ್ಸೆಗೆ ಸಂಬಂಧಿಸಿದಂತೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ಈ ಸಲಹೆ ನೀಡಿದೆ.
ವಿಚಾರಣೆ ವೇಳೆ ಕೇಂದ್ರ ಸರ್ಕಾರದ ಪರ ವಾದಿಸಿದ ಎಎಸ್ ಜಿ ಐಶ್ವರ್ಯ ಭಾಟಿ, ಕೇಂದ್ರ ತನ್ನ ಶೇ.50ರ ಕೋಟಾದಿಂದ ಕರ್ನಾಟಕಕ್ಕೆ 24 ಲಕ್ಷ ಡೋಸ್ ಲಸಿಕೆ ನೀಡಿದೆ, ಅಂತೆಯೇ ರಾಜ್ಯ ಸರ್ಕಾರ ತನ್ನ ಶೇ.25ರ ಕೋಟಾದಲ್ಲಿ 15,98,220 ಡೋಸ್ ಖರೀದಿ ಮಾಡಿದೆ. ಖಾಸಗಿ ಆಸ್ಪತ್ರೆಗಳು ತಮ್ಮ ಶೇ.25ರ ಕೋಟಾದಲ್ಲಿ 16,16,660 ಲಸಿಕೆ ಖರೀದಿಸಿವೆ ಎಂದರು.
ಈ ಅಂಶಗಳನ್ನು ಪರಿಗಣಿಸಿದ ಪೀಠ ಖಾಸಗಿಯವರಿಗೆ ಹೇಗೆ ಸರ್ಕಾರಕ್ಕಿಂತ ಹೆಚ್ಚು ಡೋಸ್ ಖರೀದಿಸಲು ಸಾಧ್ಯವಾಯಿತು ಎಂದು ಆಶ್ಚರ್ಯ ವ್ಯಕ್ತಪಡಿಸಿತು. ಅಲ್ಲದೇ, ಇದು ಸಮಾನತೆ ಹಕ್ಕಿಗೆ ವಿರುದ್ಧವಲ್ಲವೇ ಎಂದು ಪ್ರಶ್ನಿಸಿದ ಪೀಠ, ಖಾಸಗಿ ಆಸ್ಪತ್ರೆಗಳಿಗೆ ಆದೇಶ ನೀಡಲು ಸಾಧ್ಯವೇ ಎಂಬ ಕುರಿತು ನಾಳೆ ನಿಲುವು ತಿಳಿಸುವಂತೆ ಅಡ್ವೊಕೇಟ್ ಜನರಲ್ ಗೆ ಸೂಚಿಸಿತು. ಖಾಸಗಿಯವರಿಗೆ ಶೇ.25ಕ್ಕಿಂತ ಹೆಚ್ಚು ಡೋಸ್ ಲಸಿಕೆ ಲಭ್ಯವಾಗದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಹಣವಿದ್ದವರು ಖಾಸಗಿ ಆಸ್ಪತ್ರೆಗಳಲ್ಲಿ ಒಂದು ಡೋಸ್ ಲಸಿಕೆ ಪಡೆದು ನಂತರ ಸರ್ಕಾರದಿಂದ ಎರಡನೇ ಡೋಸ್ ಪಡೆಯುತ್ತಾರೆ. ಹಣವಿಲ್ಲದವರು ಮೊದಲ ಡೋಸ್ ಪಡೆಯಲಾಗದ ಸ್ಥಿತಿ ನಿರ್ಮಾಣವಾಗುತ್ತದೆ ಎಂದು ಪೀಠ ಅಭಿಪ್ರಾಯಪಟ್ಟಿತು.
ಕರ್ನಾಟಕ ರಾಜ್ಯ ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ ಒಕ್ಕೂಟದ ಅಧ್ಯಕ್ಷ ಡಾ. ಎಚ್.ಎಂ ಪ್ರಸನ್ನ ಮಾಹಿತಿ ನೀಡಿ, 18 ರಿಂದ 44 ವರ್ಷದೊಳಗಿನವರೂ ಸೇರಿ ಮೊದಲೇ ನೋಂದಣಿ ಮಾಡಿಸಿಕೊಂಡ ಎಲ್ಲ ವಯೋಮಾನದವರಿಗೂ ಲಸಿಕೆಯನ್ನು ನೀಡಲಾಗುತ್ತಿದೆ. ವಯೋಮಾನದ ಆಧಾರದಲ್ಲಿ ಲಸಿಕೆ ನೀಡುವುದನ್ನು ತಡೆಯಲಾಗದು. ಈಗಾಗಲೇ ಲಸಿಕೆಗಾಗಿ ಜನ ಮುಗಿ ಬೀಳುತ್ತಿರುವುದರಿಂದ ಆಸ್ಪತ್ರೆಗಳಲ್ಲಿ ಘರ್ಷಣೆಗಳು ಉಂಟಾಗುತ್ತಿವೆ ಎಂದರು.