ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಸ್ಥಾನಕ್ಕೆ ಡಾ.ಗೋವಿಂದರಾಜು ಹಾಗೂ ಪ್ರೇಮ್ ಸೋಹನ್ ಲಾಲ್ ಅವರ ನಾಮನಿರ್ದೇಶನವನ್ನು ಹಿಂಪಡೆದ ರಾಜ್ಯ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಅಲ್ಲದೇ, ಪ್ರತಿವಾದಿಗಳಾದ ರಾಜ್ಯ ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ, ಬೆಂಗಳೂರು ವಿವಿ ಕುಲಸಚಿವ, ಅರ್ಜಿದಾರರ ಸ್ಥಾನಕ್ಕೆ ನಿಯೋಜನೆಯಾಗಿರುವ ಡಾ.ಸಿ.ಆರ್.ಮಹೇಶ್ ಮತ್ತು ಡಾ. ಅನಿಲ್ ಕುಮಾರ್ ಈಶೋ ಅವರಿಗೆ ತುರ್ತು ನೋಟಿಸ್ ಜಾರಿ ಮಾಡಿದೆ.
ನಾಮನಿರ್ದೇಶನ ಹಿಂಪಡೆದ ಸರ್ಕಾರದ ಆದೇಶ ಪ್ರಶ್ನಿಸಿ ಗೋವಿಂದರಾಜು ಮತ್ತು ಪ್ರೇಮ್ ಸೋಹನ್ ಲಾಲ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಎಸ್.ಜಿ ಪಂಡಿತ್ ಅವರಿದ್ದ ಪೀಠ ಈ ಆದೇಶ ಮಾಡಿದೆ. ವಿವಿ ಸಿಂಡಿಕೇಟ್ ಸದಸ್ಯ ಸ್ಥಾನಕ್ಕೆ ನಾಮ ನಿರ್ದೇಶಿತರಾದವರು ನಾಮನಿರ್ದೇಶನ ಮಾಡಿದ ಪ್ರಾಧಿಕಾರ ನಿಗದಿಪಡಿಸಿದ ಸಮಯದವರಗೆ ಅಧಿಕಾರ ಹೊಂದಿರುತ್ತಾರೆ. ಆದರೆ, ಅರ್ಜಿದಾರರ ನಾಮನಿರ್ದೇಶನ ಹಿಪಡೆದಿರುವುದಕ್ಕೆ ಯಾವುದೇ ಕಾರಣ ನೀಡಿಲ್ಲ. ಹೀಗಾಗಿ, ಪ್ರಕರಣವನ್ನು ನ್ಯಾಯಾಲಯ ಪರಿಶೀಲಿಸಬೇಕಿದೆ. 2022ರ ಏ.7ರಂದು ಸರ್ಕಾರ ಹೊರಡಿಸಿರುವ ಆದೇಶಕ್ಕೆ 3 ತಿಂಗಳ ಕಾಲ ತಡೆಯಾಜ್ಞೆ ನೀಡಲಾಗುತ್ತಿದೆ ಎಂದು ಪೀಠ ಹೇಳಿದೆ.
ಅರ್ಜಿದಾರರ ಕೋರಿಕೆ: ಸರ್ಕಾರ 2019ರ ಡಿ.10ರಂದು ತಮ್ಮನ್ನು ಮೂರು ವರ್ಷದ ಅವಧಿಗೆ ಸಿಂಡಿಕೇಟ್ ಸದಸ್ಯ ಸ್ಥಾನಕ್ಕೆ ನಾಮ ನಿರ್ದೇಶನ ಮಾಡಿತ್ತು. ಆದರೆ, ಅಧಿಕಾರಾವಧಿ ಪೂರ್ಣಗೊಳ್ಳುವ ಮುನ್ನವೇ ರಾಜ್ಯ ಉನ್ನತ ಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿ ನಾಮನಿರ್ದೇಶನ ಹಿಂಪಡೆದು 2022ರ ಏ.7ರಂದು ಸರ್ಕಾರ ಆದೇಶಿಸಿದೆ.
ಕರ್ನಾಟಕ ವಿಶ್ವವಿದ್ಯಾಯಗಳ ಕಾಯ್ದೆಯ 39(1)(3)ರ ಪ್ರಕಾರ ಸಿಂಡಿಕೇಟ್ ಸದಸ್ಯರ ನಾಮನಿರ್ದೇಶನ ಹಿಂಪಡೆಯಬೇಕಾದರೆ ಸದಸ್ಯರ ವಿರುದ್ಧ ಗಂಭೀರ ಆರೋಪವಿರಬೇಕು. ಆ ಸಂಬಂಧ ವಿಚಾರಣೆ ನಡೆಸಿ ದೋಷಿ ಎಂದು ಸಾಬೀತಾದರೆ ಮಾತ್ರ ನಾಮನಿರ್ದೇಶನ ಹಿಂಪಡೆಯಬೇಕು. ಆದರೆ, ಪ್ರಕರಣದಲ್ಲಿ ಯಾವುದೇ ನಿಯಮ ಪಾಲಿಸದೆ ಸರ್ಕಾರ ತಮ್ಮನ್ನು ಕಾನೂನು ಬಾಹಿರವಾಗಿ ಮತ್ತು ಏಕಪಕ್ಷೀಯವಾಗಿ ಆದೇಶ ಹೊರಡಿಸಿದೆ. ಆದ್ದರಿಂದ, ಸರ್ಕಾರದ ಆದೇಶವನ್ನು ರದ್ದುಪಡಿಸಬೇಕು ಎಂದು ಇಬ್ಬರು ಸದಸ್ಯರು ಕೋರಿದ್ದರು.
ಇದನ್ನೂ ಓದಿ: ಮಾಜಿ ಶಾಸಕನ ಮಗಳು ನೇಣಿಗೆ ಶರಣು.. ಎಂಬಿಬಿಎಸ್ ವಿದ್ಯಾರ್ಥಿನಿಯ ಸಾವಿನ ಕಾರಣ ನಿಗೂಢ!