ಬೆಂಗಳೂರು: ಕೊರೊನಾ ಸೋಂಕು ನಿಯಂತ್ರಿಸಲು ನಿಗದಿತ ಪ್ರದೇಶಗಳಲ್ಲಿ ಜಾಹೀರಾತು ಫಲಕಗಳನ್ನು ಪ್ರದರ್ಶಿಸಲು ಹೈಕೋರ್ಟ್ ರಾಜ್ಯ ಸರ್ಕಾರ ಮತ್ತು ಬಿಬಿಎಂಪಿಗೆ ಷರತ್ತುಬದ್ಧ ಅನುಮತಿ ನೀಡಿದೆ.
ಕೊರೊನಾ ಸೋಂಕಿನ ಕುರಿತು ಸಾರ್ವಜನಿಕರಲ್ಲಿ ಜಾಹೀರಾತುಗಳ ಮೂಲಕ ಅರಿವು ಮೂಡಿಸಲು ಅನುಮತಿ ನೀಡುವಂತೆ ಕೋರಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮಧ್ಯಂತರ ಮನವಿಯನ್ನು ಕೋರ್ಟ್ ಪುರಸ್ಕರಿಸಿದೆ. ಜಾಹೀರಾತು ಫಲಕಗಳಲ್ಲಿ ಹತ್ತಿ ಬಟ್ಟೆಯನ್ನೇ ಬಳಸಬೇಕು. ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ಬಳಸಬಾರದು. ಕೊರೊನಾ ಸೋಂಕು ನಿಯಂತ್ರಣ ಕ್ರಮಗಳ ಕುರಿತು ಮಾತ್ರ ಜಾಹೀರಾತು ನೀಡಬೇಕು. ಜಾಗೃತಿ ಜತೆಗೆ ಚಿಕಿತ್ಸೆಗೆ ಸಂಬಂಧಿಸಿದ ಆಸ್ಪತ್ರೆ ಮತ್ತು ಅವುಗಳಲ್ಲಿ ಲಭ್ಯವಿರುವ ಬೆಡ್ ಮತ್ತಿತರ ವಿಷಯಗಳ ಕುರಿತು ಜಾಹೀರಾತು ನೀಡಬಹುದು.
ಕೊರೊನಾ ನಿಯಂತ್ರಣ ಮತ್ತು ನಿರ್ಮೂಲನೆಗೆ ಸಂಬಂಧಿಸಿದ ಜಾಹೀರಾತುಗಳನ್ನು ಪ್ರದರ್ಶಿಸುವ ವೇಳೆ ಪ್ರಾಯೋಜಕರು, ಖಾಸಗಿ ಉತ್ಪನ್ನ-ಸೇವೆಗಳ ಕುರಿತ ವಿವರಗಳು ಇರಬಾರದು ಎಂದು ಷರತ್ತುಗಳನ್ನು ವಿಧಿಸಿರುವ ಪೀಠ ಅನುಮತಿ ನೀಡಿದೆ. ಹಿಂದಿನ ವಿಚಾರಣೆ ಸಂದರ್ಭಗಳಲ್ಲಿ ಹೈಕೋರ್ಟ್, ಜಾಹೀರಾತು ಪ್ರದರ್ಶನಕ್ಕೆ ಬಳಸುವ ಸಾಮಗ್ರಿಗಳ ಕುರಿತು ಮಾಹಿತಿ ನೀಡುವಂತೆ ಸರ್ಕಾರಕ್ಕೆ ಸೂಚಿಸಿತ್ತು. ಇದಕ್ಕೆ ಸ್ಪಷ್ಟನೆ ನೀಡಿದ್ದ ಸರ್ಕಾರ ಹೋರ್ಡಿಂಗ್ಸ್‌ನಲ್ಲಿ ಹತ್ತಿ ಬಟ್ಟೆಯನ್ನಷ್ಟೇ ಬಳಸುತ್ತೇವೆ. ಕೊರೊನಾ ನಿಯಂತ್ರಣವಾದ ಬಳಿಕ ಫಲಕಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುತ್ತೇವೆ ಎಂದು ಸರ್ಕಾರ ಹೈಕೋರ್ಟ್‌ಗೆ ವಿವರಣೆ ನೀಡಿತ್ತು.