ಬೆಂಗಳೂರು: ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣವು ಮಧ್ಯಪ್ರದೇಶದ ವ್ಯಾಪಂ ಹಗರಣದಷ್ಟೇ ದೊಡ್ಡದಾಗಿದೆ. ಈ ಪ್ರಕರಣದಲ್ಲಿ ಶಾಮೀಲಾದ ಆರೋಪ ಎದುರಿಸುತ್ತಿರುವ ಹಿರಿಯ ಐಪಿಎಸ್ ಅಧಿಕಾರಿ ಅಮೃತ್ ಪೌಲ್ ಅವರಿಗೆ ಜಾಮೀನು ನೀಡಬಾರದೆಂದು ಸಿಐಡಿ ಬಲವಾದ ವಾದ ಮಂಡಿಸಿದೆ.
ಪೊಲೀಸ್ ನೇಮಕಾತಿ ವಿಭಾಗದ ಮುಖ್ಯಸ್ಥರಾಗಿದ್ದ ಎಡಿಜಿಪಿ ಅಮೃತ್ ಪೌಲ್ ಅವರು ಪ್ರಕರಣದಲ್ಲಿ ಸಹ ಆರೋಪಿಗಳಿಗೆ ಬೆದರಿಕೆ ಒಡ್ಡಿದ್ದು, ತಮ್ಮ ಹೆಸರು ಬಹಿರಂಗ ಪಡಿಸಬಾರದೆಂದು ಹೆದರಿಸಿದ್ದಾರೆ. ಒಂದೊಮ್ಮೆ ಹೆಸರು ಹೊರಬಂದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಇಡೀ ಹಗರಣವನ್ನು ಗಮನಿಸಿದರೆ, ಮೇಲ್ನೋಟಕ್ಕೆ ಇದು ಮಧ್ಯಪ್ರದೇಶದಲ್ಲಿ ನಡೆದಿದ್ದ ವ್ಯಾಪಂ ಹಗರಣದಂತೆಯೇ ಕಂಡುಬರುತ್ತಿದೆ. ಆ ಪ್ರಕರಣದಲ್ಲೂ ಓಎಂಆರ್ ಶೀಟ್‌ಗಳನ್ನು ತಿದ್ದಲಾಗಿತ್ತು. ಈ ಪ್ರಕರಣದಲ್ಲಿ ಓಎಂಆರ್ ಶೀಟ್‌ಗಳನ್ನು ಇರಿಸಲಾಗಿದ್ದ ಸ್ಟ್ರಾಂಗ್ ರೂಂನ ಕೀಗಳನ್ನು ಆರೋಪಿಗಳಿಗೆ ನೀಡುವ ಮೂಲಕ ಪೌಲ್ ಹಗರಣದಲ್ಲಿ ನೇರ ಭಾಗಿದಾರರಾಗಿದ್ದಾರೆ ಎಂದು ಸಿಐಡಿ ವಾದಿಸಿದೆ.
ಇದನ್ನೂ ಓದಿ: ಪಿಎಸ್ಐ ಹಗರಣ: ಜಾಮೀನು ಅರ್ಜಿ ವಿಚಾರಣೆ ಅಂತ್ಯ, ತೀರ್ಪು ಕಾಯ್ದಿರಿಸಿದ ಹೈಕೋರ್ಟ್
ತನಿಖೆಯ ಸಂದರ್ಭದಲ್ಲಿ ಸಂಗ್ರಹಿಸಿರುವ ದಾಖಲೆಗಳನ್ನು ಆಧರಿಸಿ ಪೊಲೀಸರು ಹಾಲಿ ಪ್ರಕರಣದಲ್ಲಿ ಐಪಿಸಿ ಸೆಕ್ಷನ್ 409 ಸೇರಿಸಿದ್ದಾರೆ. ಇದರಲ್ಲಿ ಪೌಲ್ ಅವರ ಪಾತ್ರ ಸ್ಪಷ್ಟವಾಗಿದ್ದು, ಅವರಿಗೆ ಜಾಮೀನು ನಿರಾಕರಿಸಬೇಕು. ಗಂಭೀರ ಅಪರಾಧದಲ್ಲಿ ಭಾಗಿಯಾಗಿರುವ ಅವರಿಗೆ ಜಾಮೀನು ನೀಡಿದರೆ, ಸಾಕ್ಷಿಯನ್ನು ತಿರುಚುವ ಸಾಧ್ಯತೆ ಇರುತ್ತದೆ ಎಂದು ಆಕ್ಷೇಪಣೆಯಲ್ಲಿ ಸಿಐಡಿ ಉಲ್ಲೇಖಿಸಿದೆ.
ಜಾಮೀನು ವಿಚಾರಣೆ ಪೂರ್ಣ: ಅಮೃತ್ ಪೌಲ್ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಪೂರ್ಣಗೊಳಿಸಿದೆ. ಎರಡೂ ಕಡೆಯ ವಾದ, ಪ್ರತಿವಾದ ಆಲಿಸಿದ ನ್ಯಾಯಾಲಯವು ಜಾಮೀನು ಅರ್ಜಿಯ ತೀರ್ಪು ಕಾಯ್ದಿಟ್ಟಿದೆ.
ಇದನ್ನೂ ಓದಿ: ಶಿರೂರು ಟೋಲ್ ಕಂಬಕ್ಕೆ ಡಿಕ್ಕಿಯಾದ ಆ್ಯಂಬುಲೆನ್ಸ್; ನಾಲ್ವರು ದಾರುಣ ಸಾವು...ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ