ಬೆಂಗಳೂರು : ಚುನಾವಣಾ ಅಕ್ರಮಗಳನ್ನು ನಡೆಸಿ ಹೊಳೆನರಸೀಪುರ ಶಾಸಕ ಹೆಚ್ ಡಿ ರೇವಣ್ಣ ಆಯ್ಕೆಯಾಗಿದ್ದು, ಅವರ ಶಾಸಕ ಸ್ಥಾನವನ್ನು ಅನರ್ಹಗೊಳಿಸಬೇಕು ಎಂದು ಕೋರಿ ಸಲ್ಲಿಕೆಯಾಗಿರುವ ಅರ್ಜಿಯ ಸಂಬಂಧ ಹೈಕೋರ್ಟ್ ಮತ್ತೊಂದು ಬಾರಿ ಸಮನ್ಸ್ ಜಾರಿ ಮಾಡಿ ಆದೇಶಿಸಿದೆ.
ಹೊಳೆನರಸೀಪುರದ ಪರಾಜಿತ ಅಭ್ಯರ್ಥಿ ಹಾಗೂ ವಕೀಲ ದೇವರಾಜೇಗೌಡ ಎಂಬುವರು ಸಲ್ಲಿಸಿದ್ದ ಚುನಾವಣಾ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಅವರಿದ್ದ ನ್ಯಾಯಪೀಠ ಸಮನ್ಸ್ ಜಾರಿ ಮಾಡಿದೆ. ಈ ಹಿಂದೆ ವಿಚಾರಣೆ ನಡೆಸಿದ್ದ ನ್ಯಾಯಪೀಠ ಸಮನ್ಸ್ ಜಾರಿ ಮಾಡಿತ್ತು. ಆದರೆ, ಪ್ರತಿವಾದಿ ರೇವಣ್ಣ ಸಮನ್ಸ್ ಸ್ವೀಕರಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ವಿಧಾನಸಭೆ ಕಾರ್ಯದರ್ಶಿಗಳ ಮೂಲಕ ಮತ್ತೊಂದು ಬಾರಿ ಸಮನ್ಸ್ ಜಾರಿ ಮಾಡಿ ವಿಚಾರಣೆಯನ್ನು ನವೆಂಬರ್ 29ಕ್ಕೆ ಮುಂದೂಡಿದೆ.
ವಕೀಲ ದೇವರಾಜೇಗೌಡ ಸಲ್ಲಿಕೆ ಮಾಡಿರುವ ಅರ್ಜಿಯಲ್ಲಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೆಚ್ ಡಿ ರೇವಣ್ಣ ಭಾರಿ ಅಕ್ರಮಗಳನ್ನು ಎಸಗಿ ಜಯ ಗಳಿಸಿದ್ದಾರೆ. ಜೊತೆಗೆ ಅವರು ಮತ ಗಳಿಕೆಯಲ್ಲಿ 2ನೇ ಸ್ಥಾನದಲ್ಲಿದ್ದ ಶ್ರೇಯಸ್ ಪಟೇಲ್ ಕೂಡ ಮತದಾರರಿಗೆ ಆಮಿಷವೊಡ್ಡಿದ್ದಾರೆ. ಹಾಗಾಗಿ ಇವರಿಬ್ಬರ ಮತ ಗಳಿಕೆಯನ್ನು ಅಸಿಂಧುಗೊಳಿಸಬೇಕೆಂದು ಕೋರಿದ್ದಾರೆ.
ಚುನಾವಣೆಯಲ್ಲಿ ಹೆಚ್ ಡಿ ರೇವಣ್ಣ 88,103, ಎರಡನೇ ಅಭ್ಯರ್ಥಿ ಶ್ರೇಯಸ್ ಎಂ ಪಟೇಲ್ 84,951 ಹಾಗೂ ಅರ್ಜಿದಾರರು 4850 ಮತಗಳನ್ನು ಪಡೆದಿದ್ದಾರೆ. ಉಳಿದ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ. ರೇವಣ್ಣ ವ್ಯಾಪಕ ಚುನಾವಣಾ ಅಕ್ರಮಗಳನ್ನು ಎಸಗಿದ್ದಾರೆ. ಆ ರೀತಿ ಅಕ್ರಮ ಎಸಗಿ ಗಳಿಸಿದ ಮತಗಳನ್ನು ಸಿಂಧುವೆಂದು ಪರಿಗಣಿಸಲು ಪ್ರಜಾಪ್ರತಿನಿಧಿ ಕಾಯಿದೆ 1951, ನೀತಿ ಸಂಹಿತೆ ಮತ್ತು ನಿಯಮ 1961 ಹಾಗೂ 2006ರ ಮಾರ್ಗಸೂಚಿಯಲ್ಲಿ ಅವಕಾಶವಿಲ್ಲ. ಹಾಗಾಗಿ, ಅವರ ಆಯ್ಕೆಯನ್ನು ಅಸಿಂಧುಗೊಳಿಸಬೇಕು ಮತ್ತು ಅರ್ಜಿದಾರರನ್ನು ಆಯ್ಕೆಯಾಗಿದ್ದಾರೆಂದು ಘೋಷಿಸಬೇಕೆಂದು ಅರ್ಜಿಯಲ್ಲಿ ಕೋರಲಾಗಿದೆ.
ರೇವಣ್ಣ ಬೆಂಬಲಿಗರಿಂದ ಹಲ್ಲೆ ಆರೋಪ: ರೇವಣ್ಣ ಅವರ ಬೆಂಬಲಿಗರು ಅಣ್ಣೆಹಳ್ಳಿಯಲ್ಲಿ ಮತದಾರರಿಗೆ 2 ಕೋಳಿಗಳು ಮತ್ತು 2,000 ರೂ. ನಗದನ್ನು ಹಂಚಿದ್ದಾರೆ. ಶಾಂತಿಗ್ರಾಮದ ಬಳಿ ಜನರಿಗೆ ಆಮಿಷವೊಡ್ಡುತ್ತಿದ್ದುದನ್ನು ತಡೆಯಲು ಹೋದಾಗ ರೇವಣ್ಣ ಅವರ ಬೆಂಬಲಿಗರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ಮಿಥುನ್, ಮೋಹನ್, ಮಂಜು ಮತ್ತು ಶಂಕರ್ ಸೇರಿ 30 ಮಂದಿ ವಿರುದ್ಧ ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಭವಾನಿ ರೇವಣ್ಣ ಅವರ ಆಸ್ತಿಯ ವಿವರಗಳೂ ಸಹ ಸುಳ್ಳಿನಿಂದ ಕೂಡಿವೆ: ರೇವಣ್ಣ ಅವರು ಸಲ್ಲಿಸಿರುವ ನಾಮಪತ್ರವೇ ದೋಷಪೂರಿತವಾಗಿದೆ. ಅವರು ತಮ್ಮ ಆಸ್ತಿ ವಿವರಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿಲ್ಲ. ಹಲವು ಮಾಹಿತಿಯನ್ನು ಮರೆಮಾಚಿದ್ದಾರೆ. ಆದರೂ ಅವರ ನಾಮಪತ್ರವನ್ನು ಚುನಾವಣಾಧಿಕಾರಿ ಸಿಂಧು ಎಂದು ಘೋಷಿಸಿದ್ದಾರೆ. ಭವಾನಿ ರೇವಣ್ಣ ಅವರ ಆಸ್ತಿಯ ವಿವರಗಳೂ ಸಹ ಸುಳ್ಳಿನಿಂದ ಕೂಡಿವೆ ಎಂದು ಅರ್ಜಿಯಲ್ಲಿ ದೂರುದಾರರು ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಚುನಾವಣಾ ಅಕ್ರಮ ನಡೆಸಿ ಗೆದ್ದ ಆರೋಪ : ಹೆಚ್ಡಿ ರೇವಣ್ಣಗೆ ಹೈಕೋರ್ಟ್ ಸಮನ್ಸ್