ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಸಾಂಕ್ರಾಮಿಕ ರೋಗ ಕೋವಿಡ್ ಹರಡುವಿಕೆ ಹೆಚ್ಚಾಗುತ್ತಿರುವುದರಿಂದ ಡಿಸೆಂಬರ್ ಅಂತ್ಯದ ದಿನದಂದು ನಡೆಯುವ ಹೊಸ ವರ್ಷಾಚರಣೆ ಕಾರ್ಯಕ್ರಮಗಳನ್ನು ನಿರ್ಬಂಧಿಸಲು ಹೈಕೋರ್ಟ್ ನಿರಾಕರಿಸಿದೆ.
ಕೋವಿಡ್ ಪ್ರಯುಕ್ತ ಹೊಸ ವರ್ಷಾಚರಣೆ ನಿರ್ಬಂಧಿಸಬೇಕೆಂದು ಕೋರಿ ನ್ಯಾಯವಾದಿ ಎನ್. ಪಿ. ಅಮೃತೇಶ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಗುರುವಾರ ನ್ಯಾ. ಆರ್. ನಟರಾಜ್ ಮತ್ತು ನ್ಯಾ. ಕೆ.ವಿ. ಅರವಿಂದ್ ಅವರಿದ್ದ ರಜಾಕಾಲದ ವಿಭಾಗೀಯ ನ್ಯಾಯಪೀಠ ನಡೆಸಿತು.
ಅರ್ಜಿದಾರರ ವಾದ ಆಲಿಸಿದ ನ್ಯಾಯಪೀಠ, ಬೆಂಗಳೂರು ನಗರದಲ್ಲಿ ನಿರ್ಬಂಧಿಸಿದರೆ ಜನರು ಹೊರ ಪ್ರದೇಶಗಳಿಗೆ ತೆರಳುತ್ತಾರೆ ಎಂದು ತಿಳಿಸಿತು. ರಾಜ್ಯ ಸರ್ಕಾರ ಸದ್ಯ ಈ ಬಗ್ಗೆ ಯಾವುದೇ ನಿಯಂತ್ರಣಗಳನ್ನು ವಿಧಿಸಿಲ್ಲ. ಕೋವಿಡ್ಗೆ ಸದ್ಯಕ್ಕೆ ಹೆದರಬೇಕಾದ ಅಗತ್ಯತೆ ಕಾಣುತ್ತಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಪಿಐಎಲ್ ವಿಚಾರಣೆಯನ್ನು ಜನವರಿ ತಿಂಗಳಿಗೆ ಮುಂದೂಡಿದೆ.
ಅರ್ಜಿದಾರ ನ್ಯಾಯವಾದಿ ಅಮೃತೇಶ್ ವಾದ ಮುಂದುವರೆಸಿ, ಬೆಂಗಳೂರಿನ ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್ ಮತ್ತು ಕಮರ್ಷಿಯಲ್ ಸ್ಟ್ರೀಟ್ಗಳಲ್ಲಿ ಹೊಸ ವರ್ಷಾಚರಣೆಗೆ ಇದೇ 31 ರಂದು ಸಾವಿರಾರು ಜನ ಸೇರುತ್ತಾರೆ. ಕೋವಿಡ್ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆ ಪ್ರದೇಶಗಳಲ್ಲಿ ಹೊಸ ವರ್ಷಾಚರಣೆ ನಿರ್ಬಂಧಿಸಬೇಕು ಎಂದು ಮನವಿ ಮಾಡಿದರು. ಕೋವಿಡ್ ತಡೆಯಲು ಹೊಸ ವರ್ಷಾಚರಣೆ ನಿರ್ಬಂಧಿಸಬೇಕಾಗುತ್ತದೆ. ರಾಜ್ಯದಲ್ಲೂ ಕೋವಿಡ್ ಹರಡುವ ಭೀತಿ ಎದುರಾಗಿದೆ. ಆರೋಗ್ಯ ಇಲಾಖೆ ಮುನ್ನೆಚ್ಚರಿಕಾ ಕ್ರಮಕ್ಕೆ ಸೂಚನೆ ನೀಡಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಇದನ್ನೂ ಓದಿ: ಕಲ್ಲಡ್ಕ ಪ್ರಭಾಕರ್ ಭಟ್ಗೆ ಹೈಕೋರ್ಟ್ನಲ್ಲಿ ರಿಲೀಫ್