ಬೆಂಗಳೂರು: ಚಿಕ್ಕಬಳ್ಳಾಪುರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ (ಎಪಿಎಂಸಿ) ರೈತರು ಹೂ ಮಾರಾಟ ಮಾಡುವುದಕ್ಕೆ ಪೊಲೀಸರು ಅಡ್ಡಿಪಡಿಸುತ್ತಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಸೂಕ್ತ ವಿವರಣೆ ನೀಡುವಂತೆ ಹೈಕೋರ್ಟ್ ಚಿಕ್ಕಬಳ್ಳಾಪುರ ಎಸ್ಪಿಗೆ ತಾಕೀತು ಮಾಡಿದೆ.
ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಕೊರೊನಾ ನೆಪವೊಡ್ಡಿ ಹೂ ಮಾರಾಟ ಮಾಡಲು ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿ ಚಿಕ್ಕಬಳ್ಳಾಪುರದ ರೈತರು ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಎಸ್.ಜಿ ಪಂಡಿತ್ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಎಂ.ಶಿವಪ್ರಕಾಶ್ ವಾದ ಮಂಡಿಸಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ)ಯ 30 ಎಕರೆ ಪ್ರದೇಶದಲ್ಲಿ ಅರ್ಧದಷ್ಟು ತರಕಾರಿ ಹಾಗೂ ಉಳಿದರ್ಧ ಜಾಗವನ್ನು ಹೂವು ಮಾರಾಟಗಾರರಿಗೆ ಮೀಸಲಿಡಲಾಗಿದೆ. ಈ ಹಿಂದೆ ಕೊರೊನಾ ಕಾರಣಕ್ಕಾಗಿ ಮಾರುಕಟ್ಟೆಯಲ್ಲಿನ ಚಟುವಟಿಕೆಗಳಿಗೆ ನಿರ್ಬಂಧ ವಿಧಿಸಿರುವುದನ್ನು ಪೊಲೀಸರು ಈಗಲೂ ಮುಂದುವರೆಸಿದ್ದಾರೆ. ಅಲ್ಲದೇ, ಪೊಲೀಸರು ರೈತರ ಹೂ ಮಾರಾಟಕ್ಕೆ ಅವಕಾಶ ನೀಡದೆ ನೋಟಿಸ್ ನೀಡುವ ಮೂಲಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಪೊಲೀಸರ ವಿರುದ್ಧದ ಆರೋಪಕ್ಕೆ ಆಕ್ರೋಶ ವ್ಯಕ್ತಪಡಿಸಿದ ಪೀಠ, ಪೊಲೀಸರು ಯಾವ ಕಾನೂನು ವ್ಯಾಪ್ತಿಯಲ್ಲಿ ಇಂತಹ ಅಧಿಕಾರ ಚಲಾಯಿಸಿದ್ದಾರೆ ಎಂಬುದಕ್ಕೆ ಚಿಕ್ಕಬಳ್ಳಾಪುರ ಪೊಲೀಸ್ ವರಿಷ್ಠಾಧಿಕಾರಿ ವಿವರಣೆ ನೀಡಿ ಪ್ರಮಾಣಪತ್ರ ಸಲ್ಲಿಸಬೇಕು ಎಂದು ನಿರ್ದೇಶಿಸಿ ವಿಚಾರಣೆ ಮುಂದೂಡಿತು.
ಇದನ್ನೂ ಓದಿ: ಮೇಕೆದಾಟು ವಿಚಾರದಲ್ಲಿ ತಮಿಳುನಾಡು ವಿಧಾನಸಭೆ ನಿರ್ಣಯ ಕಾನೂನು ಬಾಹಿರ: ಸಿಎಂ