ಬೆಂಗಳೂರು : ಕೋವಿಡ್ 3ನೇ ಸಂಭಾವ್ಯ ಅಲೆ ಸಾಧ್ಯತೆ ಹಿನ್ನೆಲೆಯಲ್ಲಿ ಯಾವುದೇ ಕೋವಿಡ್ ಆರೈಕೆ ಕೇಂದ್ರಗಳನ್ನು ಮುಚ್ಚಬಾರದು ಎಂದು ಹೈಕೋರ್ಟ್ ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ನಿರ್ದೇಶಿಸಿದೆ. ಕೋವಿಡ್ ನಿರ್ವಹಣೆ ಹಾಗೂ ಚಿಕಿತ್ಸೆಗೆ ಸಂಬಂಧಿಸಿದಂತೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ಹಾಗೂ ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ.
ವಿಚಾರಣೆ ವೇಳೆ ಪಾಲಿಕೆ ಪರ ವಕೀಲರು ಪೀಠಕ್ಕೆ ಮಾಹಿತಿ ನೀಡಿ, ಸಂಭಾವ್ಯ ಮೂರನೇ ಅಲೆ ಎದುರಿಸಲು ಪಾಲಿಕೆ ಎಲ್ಲ ರೀತಿಯಲ್ಲೂ ಸಜ್ಜಾಗಿದೆ. ಯಾವುದೇ ಕೋವಿಡ್ ಆರೈಕೆ ಕೇಂದ್ರಗಳನ್ನೂ ಮುಚ್ಚಿಲ್ಲ ಎಂದರು. ಅಮಿಕಸ್ ಕ್ಯೂರಿ ವಿಕ್ರಂ ಹುಯಿಲಗೋಳ ಮಾಹಿತಿ ನೀಡಿ, ಮೊದಲನೇ ಅಲೆ ಬಳಿಕ ಬಿಳಿಯಾನೆಯಂತಾಗಿದ್ದ ಕೆಲವು ಕೋವಿಡ್ ಆರೈಕೆ ಕೇಂದ್ರಗಳನ್ನು ಮುಚ್ಚಲಾಗಿತ್ತು. ಆನಂತರ ಎದುರಾದ ಎರಡನೇ ಅಲೆ ಎದುರಿಸಲು ಮತ್ತೆ ಹೊಸ ಕೋವಿಡ್ ಕೇಂದ್ರಗಳನ್ನು ಸೃಷ್ಟಿಸಲಾಯಿತು. ಹೀಗಾಗಿ ಸಮತೋಲಿತ ನಿರ್ಧಾರಗಳನ್ನು ಕೈಗೊಳ್ಳಬೇಕಿದೆ ಎಂದು ವಿವರಿಸಿದರು.
ವಾದ ಆಲಿಸಿದ ಪೀಠ, ಕೋವಿಡ್ ಮೂರನೇ ಅಲೆ ನಿಯಂತ್ರಣಕ್ಕೆ ಸಿದ್ಧತೆಗಳನ್ನು ಕೈಗೊಳ್ಳಲು ಸರ್ಕಾರ ಕಾರ್ಯಪಡೆ ರಚಿಸಿದೆ. ಅದು ವರದಿ ನೀಡುವವರೆಗೆ ಮತ್ತು ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳುವವರೆಗೆ ಯಾವುದೇ ಕೋವಿಡ್ ಆರೈಕೆ ಕೇಂದ್ರಗಳನ್ನು ಮುಚ್ಚಬಾರದು ಅಥವಾ ರದ್ದುಗೊಳಿಸಬಾರದು ಎಂದು ನಿರ್ದೇಶಿಸಿ, ವಿಚಾರಣೆ ಮುಂದೂಡಿತು.
10 ಲಕ್ಷ ಕೊಳೆಗೇರಿ ನಿವಾಸಿಗಳಿಗೆ ಲಸಿಕೆ :
ಲಸಿಕೆ ನೀಡುವ ಕುರಿತು ಪ್ರಮಾಣಪತ್ರ ಸಲ್ಲಿಸಿರುವ ಬಿಬಿಎಂಪಿ, ಬೆಂಗಳೂರು ನಗರದ 1,311 ಕೊಳೆಗೇರಿಗಳಲ್ಲಿ ಈವರೆಗೆ ಸುಮಾರು 10,91,692 ಮಂದಿಗೆ ಲಸಿಕೆ ಹಾಕಲಾಗಿದೆ. ಲಸಿಕೆ ಹಾಕುವ ವಿಶೇಷ ಅಭಿಯಾನ ಇಂದಿಗೂ ಮುಂದುವರಿದಿದೆ. ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು ಮತ್ತು ಆದ್ಯತಾ ವಲಯಗಳಲ್ಲಿ ಕೋವಿಡ್ ನಿಯಂತ್ರಣಕ್ಕೆ ಶ್ರಮಿಸುತ್ತಿರುವವರ ಕುಟುಂಬಗಳಿಗೂ ಲಸಿಕೆ ನೀಡುವುದಕ್ಕೆ ಸಂಬಂಧಿಸಿದಂತೆ ಸರ್ಕಾರ ಆದೇಶ ಹೊರಡಿಸಿದ್ದು, ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದೆ.
ಇದನ್ನೂ ಓದಿ: ಕದ್ದುಮುಚ್ಚಿ ಅಂತ್ಯಸಂಸ್ಕಾರ: ERSS-112 ಕರೆ ಮೂಲಕ ಬಾಲಕಿ ಆತ್ಮಹತ್ಯೆ ಕೇಸ್ ಬೆಳಕಿಗೆ