ಬೆಂಗಳೂರು: ತಮಿಳುನಾಡು ಮೂಲದ ‘ವಿಶ್ವಪ್ರಿಯ ಫೈನಾನ್ಸಿಯಲ್ ಸರ್ವಿಸಸ್ ಸೆಕ್ಯೂರಿಟೀಸ್’ ಸಂಸ್ಥೆ ಹೂಡಿಕೆದಾರರಿಗೆ ವಂಚನೆ ಎಸಗಿರುವ ಆರೋಪ ಪ್ರಕರಣದ ತನಿಖೆಯನ್ನು ಒಂದು ಕೇಂದ್ರೀಕೃತ ತನಿಖಾ ಸಂಸ್ಥೆಗೆ ವಹಿಸುವತಂತೆ ತಾಕೀತು ಮಾಡಿರುವ ಹೈಕೋರ್ಟ್ ಈ ಸಂಬಂಧ ನಿರ್ಧಾರ ಕೈಗೊಳ್ಳಲು ಸರ್ಕಾರಕ್ಕೆ ಕೊನೆಯ ಅವಕಾಶ ನೀಡಿದೆ.
ಈ ಕುರಿತು ‘ವಿಶ್ವಪ್ರಿಯ ಇನ್ವೆಸ್ಟರ್ಸ್ ಅಂಡ್ ಡೆಪಾಸಿಟರ್ಸ್ ವೆಲ್ಫೇರ್ ಅಸೋಸಿಯೇಷನ್’ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಸರ್ಕಾರದ ಪರ ವಕೀಲರ ಮನವಿ ಏನು?
ಈ ವೇಳೆ, ಸರ್ಕಾರದ ಪರ ವಕೀಲರು ಮನವಿ ಮಾಡಿ, ನ್ಯಾಯಾಲಯದ ನಿರ್ದೇಶನದಂತೆ ಪ್ರಕರಣದ ತನಿಖೆಯನ್ನು ಒಂದೇ ಕೇಂದ್ರಿಕೃತ ತನಿಖಾ ಸಂಸ್ಥೆಗೆ ವರ್ಗಾವಣೆ ಮಾಡುವ ಬಗ್ಗೆ ತೀರ್ಮಾನ ಕೈಗೊಳ್ಳಲು ಇನ್ನಷ್ಟು ಕಾಲಾವಕಾಶ ನೀಡಬೇಕು ಎಂದು ಕೋರಿದರು.
ಇದಕ್ಕೆ ಆಕ್ಷೇಪಿಸಿದ ಅರ್ಜಿದಾರ ಪರ ಹಿರಿಯ ವಕೀಲ ಎ.ಎಸ್.ಪೊನ್ನಣ್ಣ, ಈಗಾಗಲೇ ಸರ್ಕಾರಕ್ಕೆ ಸಾಕಷ್ಟು ಕಾಲಾವಕಾಶ ನೀಡಲಾಗಿದೆ. ಒಂದೇ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧೆಡೆ 10 ಪ್ರಕರಣ ದಾಖಲಾದರೆ ತನಿಖೆ ನಡೆಸಲು ಕಷ್ಟವಾಗುತ್ತದೆ. ಇದರಿಂದಲೇ ತನಿಖೆಯನ್ನು ಒಂದೇ ಕೇಂದ್ರಿಕೃತ ತನಿಖಾ ಸಂಸ್ಥೆಗೆ ವಹಿಸಲು ಕೋರಲಾಗುತ್ತಿದೆ ಎಂದು ವಿವರಿಸಿದರು.
ವಾದ ಪರಿಗಣಿಸಿದ ಪೀಠ, ಪ್ರಕರಣದ ತನಿಖೆಯನ್ನು ಒಂದು ಕೇಂದ್ರೀಕೃತ ತನಿಖಾ ಸಂಸ್ಥೆಗೆ ವಹಿಸುವ ಕುರಿತು ನಿರ್ಧಾರ ಕೈಗೊಳ್ಳಲು ಸರ್ಕಾರಕ್ಕೆ ಕೊನೆಯ ಅವಕಾಶ ನೀಡಲಾಗುತ್ತಿದೆ. ಒಂದೊಮ್ಮೆ ಆ.27ರೊಳಗೆ ಸರ್ಕಾರ ನಿರ್ಧಾರ ಕೈಗೊಳ್ಳದಿದ್ದರೆ, ಸೂಕ್ತ ಆದೇಶ ಹೊರಡಿಸುವ ಬಗ್ಗೆ ನ್ಯಾಯಾಲಯ ಪರಿಶೀಲಿಸಲಿದೆ ಎಂದು ತಿಳಿಸಿ ವಿಚಾರಣೆ ಮುಂದೂಡಿತು.
ಅರ್ಜಿದಾರರ ವಾದ ಏನಾಗಿತ್ತು?
ವಿಶ್ವಪ್ರಿಯ ಫೈನಾನ್ಸಿಯಲ್ ಸರ್ವಿಸಸ್ ಸೆಕ್ಯೂರಿಟೀಸ್ ಏಜೆನ್ಸಿ ಹೆಸರಲ್ಲಿ ಸಾವಿರಾರು ಜನರಿಂದ ಕೋಟ್ಯಂತರ ರೂಪಾಯಿ ಹಣ ಪಡೆದು ಹಿಂದಿರುಗಿಸಿಲ್ಲ ಎಂದು ಆರೋಪಿಸಿರುವ ಅರ್ಜಿದಾರರು, ವಂಚನೆ ಆರೋಪದಡಿ ಕಳೆದ ಡಿಸೆಂಬರ್‌ನಲ್ಲಿ ನಗರದ ಗಿರಿನಗರ, ಸಿದ್ದಾಪುರ, ಜಯನಗರ, ವೈಟ್ ಫೀಲ್ಡ್, ಮಲ್ಲೇಶ್ವರಂ, ಅಲಸೂರು, ಮಾರತ್ತಹಳ್ಳಿ ಪೊಲೀಸ್ ಠಾಣೆಗಳಲ್ಲಿ ಸಂಸ್ಥೆ ವಿರುದ್ಧ ಎಫ್‌ಐಆರ್ ದಾಖಸಿದ್ದೇವೆ.
ಆದರೆ, ತನಿಖೆ ಸರಿಯಾಗಿ ನಡೆಯುತ್ತಿಲ್ಲ ಎಂದು ಆರೋಪಿಸಿದ್ದು, ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಕೋರಿದ್ದಾರೆ. ಪ್ರಕರಣದ ತನಿಖೆಯನ್ನು ಒಂದು ಕೇಂದ್ರೀಕೃತ ತನಿಖಾ ಸಂಸ್ಥೆಗೆ ವಹಿಸುವಂತೆ ಮೇ 25ರಂದು ಹೈಕೋರ್ಟ್ ಸರ್ಕಾರಕ್ಕೆ ಸೂಚಿಸಿದೆ.
ಓದಿ: ಹೈಕೋರ್ಟ್ನಲ್ಲಿ ಸಿಇಎನ್ ಪೊಲೀಸ್ ಠಾಣೆಗಳಿಗೆ ಅಗತ್ಯ ಹುದ್ದೆಗಳ ನೇಮಕಾತಿ ಅರ್ಜಿ ವಿಚಾರಣೆ