ಬೆಂಗಳೂರು: ಚಿಕ್ಕಮಗಳೂರಿನ ತರೀಕೆರೆ ಬಳಿ ಇರುವ ಶಿವಸುಬ್ರಹ್ಮಣ್ಯ ದೇವಸ್ಥಾನ ಇರುವ ಜಾಗ ದೇವಾಲಯ ನಡೆಸುತ್ತಿರುವ ಟ್ರಸ್ಟ್ಗೆ ಸೇರಿದ್ದು ಎಂಬುದಕ್ಕೆ ದಾಖಲೆಗಳನ್ನು ನೀಡುವಂತೆ ಹೈಕೋರ್ಟ್ ನಿರ್ದೇಶಿಸಿದೆ.
ದೇವಸ್ಥಾನದ ಆದಾಯ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ಸ್ಥಳೀಯ ವೇಲುಮುರುಗನ್ ಸಲ್ಲಿಸಿದ್ದ ಪಿಐಎಲ್ ಅರ್ಜಿಯನ್ನು ಹೈಕೋರ್ಟ್ ಸ್ವಯಂಪ್ರೇರಿತ ಅರ್ಜಿಯಾಗಿ ಬದಲಿಸಿಕೊಂಡಿತ್ತು. ಈ ಅರ್ಜಿಯನ್ನು ಇಂದು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ದೇವಸ್ಥಾನದ ಟ್ರಸ್ಟಿಗಳ ಪರ ವಕೀಲರನ್ನು ಪ್ರಶ್ನಿಸಿದ ಪೀಠ, ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ಮಾಹಿತಿಯಂತೆ ದೇವಸ್ಥಾನದ ಜಾಗ ಸರ್ಕಾರಕ್ಕೆ ಸೇರಿದ್ದಾಗಿದೆ. ಹಾಗಿದ್ದೂ ಅಲ್ಲಿ ಹೇಗೆ ಕಲ್ಯಾಣ ಮಂಟಪ, ಅತಿಥಿ ಗೃಹಗಳನ್ನು ನಿರ್ಮಿಸಿದ್ದೀರಿ ಎಂದು ಪ್ರಶ್ನಿಸಿತು.
ಇದಕ್ಕೆ ಉತ್ತರಿಸಿದ ಟ್ರಸ್ಟಿಗಳ ಪರ ವಕೀಲರು, ದೇವಸ್ಥಾನ ಕಳೆದ 50 ವರ್ಷಗಳಿಂದ ಅಸ್ತಿತ್ವದಲ್ಲಿದೆ. ದೇವಸ್ಥಾನವನ್ನು ಟ್ರಸ್ಟ್ ಮೂಲಕ ನಡೆಸಲಾಗುತ್ತಿದೆ. ಇನ್ನು ವಿವಾದಿತ ಜಾಗ ಸರ್ಕಾರಕ್ಕೆ ಸೇರಿದ್ದಲ್ಲ. ಪಟ್ಟಾ ಭೂಮಿಯಾಗಿದ್ದ ಜಾಗವನ್ನು ದೇವಾಲಯದ ಭಕ್ತರು ಟ್ರಸ್ಟ್ಗೆ ದಾನ ಮಾಡಿದ್ದಾರೆ ಎಂದರು.
ಹೇಳಿಕೆ ದಾಖಲಿಸಿಕೊಂಡ ಪೀಠ, ದೇವಸ್ಥಾನದ ಜಾಗ ಯಾರಿಗೆ ಸೇರಿದೆ ಎಂಬುದನ್ನು ಸ್ಪಷ್ಟಪಡಿಸಿ. ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಿ ಎಂದು ದೇವಸ್ಥಾನದ ಟ್ರಸ್ಟಿಗಳ ಪರ ವಕೀಲರಿಗೆ ಸೂಚಿಸಿ ವಿಚಾರಣೆಯನ್ನು ಡಿಸೆಂಬರ್ 21ಕ್ಕೆ ಮುಂದೂಡಿತು.