ಬೆಂಗಳೂರು: ನಗರದ ವ್ಯಾಪ್ತಿಯಲ್ಲಿ ಇರುವ ಉದ್ಯಾನ, ಆಟದ ಮೈದಾನ, ಬಯಲು ಜಾಗಗಳ ಕುರಿತು ಸಮೀಕ್ಷೆ ನಡೆಸಿ ಅವುಗಳನ್ನು ಸಂರಕ್ಷಿಸುವ ಕುರಿತು ತನ್ನ ನಿಲುವು ತಿಳಿಸುವಂತೆ ಹೈಕೋರ್ಟ್ ಬಿಬಿಎಂಪಿಗೆ ನಿರ್ದೇಶಿಸಿದೆ.
ನಗರದ ಉದ್ಯಾನಗಳ ರಕ್ಷಣೆ ಸಂಬಂಧ ಹೈಕೋರ್ಟ್ ಕಾನೂನು ಸೇವಾ ಪ್ರಾಧಿಕಾರ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯಪೀಠ ವಿಚಾರಣೆ ನಡೆಸಿತು.
ಈ ವೇಳೆ ಅರ್ಜಿದಾರರ ಪರ ವಕೀಲ ವೆಂಕಟೇಶ್ ದಳವಾಯಿ ವಾದಿಸಿ, ಬಿಬಿಎಂಪಿ ಸಲ್ಲಿಸಿರುವ ವರದಿಯ ಪ್ರಕಾರ ನಗರದಲ್ಲಿ ಇರುವ ಉದ್ಯಾನಗಳ ಸ್ಥಿತಿ ಸುಮಾರಾಗಿದೆ. ಹಾಗೆಂದರೆ ಏನರ್ಥ, ಪಾಲಿಕೆಯೇ ಉದ್ಯಾನವನಗಳ ಸ್ಥಿತಿ ಕಳಪೆ ಎಂದು ಒಪ್ಪಿಕೊಂಡಂತೆ. ಹೀಗಾಗಿ ಉದ್ಯಾನಗಳ ಸಮರ್ಪಕ ನಿರ್ವಹಣೆಗೆ ಪಾಲಿಕೆ ಏನು ಕ್ರಮ ಕೈಗೊಳ್ಳಲಿದೆ ಎಂದು ಕೇಳಬೇಕಾಗುತ್ತದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಬೆಂಗಳೂರು ನಗರದಲ್ಲಿನ ಬಹುತೇಕ ಪಾರ್ಕ್ ಮತ್ತು ಆಟದ ಮೈದಾನಗಳು ಬಿಬಿಎಂಪಿ ವ್ಯಾಪ್ತಿಗೆ ಬರುವುದರಿಂದ ಅದೇ ಸಮೀಕ್ಷೆ ನಡೆಸಬೇಕು. ಸಮೀಕ್ಷೆಯನ್ನು ಭೌತಿಕವಾಗಿ ನಡೆಸುವ ಬದಲು ಆಧುನಿಕ ತಂತ್ರಜ್ಞಾನ ಮತ್ತು ಡ್ರೋಣ್ ಬಳಸಿ ನಡೆಸಿದರೆ ಒಳ್ಳೆಯದು, ಆಗ ಕಾಣೆಯಾಗಿರುವ ಪಾರ್ಕ್‌ಗಳನ್ನು ಮತ್ತೆ ಸ್ಥಾಪಿಸಬಹುದು. ಯಾವ ಪಾರ್ಕ್‌ಗಳ ನಿರ್ವಹಣೆ ಸರಿಯಿಲ್ಲವೂ ಅವುಗಳನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಲು ಸಾಧ್ಯವಾಗುತ್ತದೆ ಎಂದಿತು.
ಅಲ್ಲದೆ, ಸಮೀಕ್ಷೆ ನಡೆಸುವ ಬಗ್ಗೆ ಪಾಲಿಕೆ ಮುಂದಿನ ವಿಚಾರಣೆ ವೇಳೆಗೆ ತಮ್ಮ ನಿಲುವು ತಿಳಿಸಬೇಕು ಎಂದು ಸೂಚನೆ ನೀಡಿದ ಪೀಠ, ಪಾರ್ಕ್‌ಗಳ ಸ್ಥಿತಿಗತಿ ಸುಧಾರಣೆಗೆ ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂಬ ಬಗ್ಗೆಯೂ ಏ.21ರೊಳಗೆ ಪ್ರಮಾಣಪತ್ರ ಸಲ್ಲಿಸಬೇಕು ಎಂದು ನಿರ್ದೇಶಿಸಿ ವಿಚಾರಣೆ ಮುಂದೂಡಿತು.
ಬಿಡಿಎ ಸಲ್ಲಿಸಿದ್ದ ಪ್ರಮಾಣಪತ್ರದಲ್ಲಿ ತಪ್ಪುಗಳಿದ್ದ ಹಿನ್ನೆಲೆಯಲ್ಲಿ ಅದನ್ನು ಹಿಂಪಡೆದು ಹೊಸದಾಗಿ ಪ್ರಮಾಣಪತ್ರ ಸಲ್ಲಿಸುವಂತೆ ಸೂಚಿಸಿತು.