ಬೆಂಗಳೂರು: ನಗರದ ರಸ್ತೆ ಗುಂಡಿ ಮುಚ್ಚುವಲ್ಲಿ ಬಿಬಿಎಂಪಿ ಸಂಪೂರ್ಣವಾಗಿ ವಿಫಲವಾಗಿರುವುದಕ್ಕೆ ತೀವ್ರ ತರಾಟೆ ತೆಗೆದುಕೊಂಡಿರುವ ಹೈಕೋರ್ಟ್, ನಗರದಲ್ಲಿ ರಸ್ತೆ ಗುಂಡಿ ಮುಚ್ಚುವ ಪ್ರಕ್ರಿಯೆ ಸೌಂದರ್ಯ ಹೆಚ್ಚಿಸಲು ಶಸ್ತ್ರ ಚಿಕಿತ್ಸೆ ಮಾಡಿದಂತಿದೆ ಎಂದು ತೀಕ್ಷ್ಣವಾಗಿ ಟೀಕಿಸಿದೆ.
ಬೆಂಗಳೂರು ನಗರದಲ್ಲಿನ ರಸ್ತೆ ಗುಂಡಿಗಳನ್ನು ಮುಚ್ಚುವುದಕ್ಕೆ ಸಂಬಂಧಿಸಿದಂತೆ ವಿಜಯನ್ ಮೆನನ್ ಸೇರಿದಂತೆ ಮತ್ತಿತರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಲೆ ಅವರಿದ್ದ ವಿಭಾಗೀಯ ಪೀಠ, ಬಿಬಿಎಂಪಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿತು.
ಕಳೆದ 6 ವರ್ಷಗಳಿಂದ ಅರ್ಜಿಯ ವಿಚಾರಣೆ ನಡೆಯುತ್ತಿದೆ. ಆದರೆ, ಈವರೆಗೂ ಶಾಶ್ವತ ಪರಿಹಾರವನ್ನು ಕಂಡುಕೊಂಡಿಲ್ಲ, ಪ್ರತಿ ವರ್ಷ ರಸ್ತೆ ಮುಚ್ಚಲಾಗುತ್ತಿದೆ, ಮತ್ತೆ ಹಾಳಾಗುತ್ತಿದೆ. ಅಲ್ಲದೇ, ಸಾಮಾನ್ಯ ಜನತೆ ರಸ್ತೆ ಗುಂಡಿ ತಪ್ಪಿಸುವುದಕ್ಕೆ ಮುಂದಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈ ಬೆಳವಣಿಗೆಯನ್ನು ಸಹಿಸಲಾಗದು ಎಂದು ಹೈಕೋರ್ಟ್ ತಿಳಿಸಿದೆ.
ಎನ್ಎಚ್ಎಐಯಿಂದ ಪರಿಶೀಲನೆಗೆ ಸೂಚನೆ: ಬಿಬಿಎಂಪಿ ಅಧಿಕಾರಿಗಳು ರಸ್ತೆ ಗುಂಡಿಗಳನ್ನು ಮುಚ್ಚುವುದಕ್ಕಾಗಿ ಇ-ಪ್ರಕ್ರೂರ್‌ಮೆಂಟ್ ಮೂಲಕ ಕೆಲ ಸಂಸ್ಥೆಗಳಿಗೆ ಗುತ್ತಿಗೆ ನೀಡುತ್ತಿದ್ದಾರೆ. ಆದರೆ, ಆ ರಸ್ತೆ ಗುಂಡಿಗಳನ್ನು ಮುಚ್ಚಿರುವ ಸಂಬಂಧ ಬಿಬಿಎಂಪಿ ಅಧಿಕಾರಿಗಳೇ ಪ್ರಮಾಣೀಕರಿಸುತ್ತಿದ್ದಾರೆ. ಆದರೆ, ಗುತ್ತಿಗೆದಾರರ ಕೆಲಸವನ್ನು ಪ್ರಮಾಣೀಕರಿಸಲು ಯಾವುದೇ ಸ್ವಾತಂತ್ರ್ಯ ಸಂಸ್ಥೆ ಇಲ್ಲವಾಗಿದೆ. ಆದ್ದರಿಂದ ಈ ರೀತಿಯಲ್ಲಿ ರಸ್ತೆ ಗುಂಡಿಗಳು ಮರುಕಳಿಸಲು ಕಾರಣವಾಗುತ್ತಿದೆ ಎಂದು ಅಭಿಪ್ರಾಯ ಪಟ್ಟಿತು.
ಇದನ್ನೂ ಓದಿ: ಸಂಸ್ಥೆ ವಾಹನದಿಂದ ಘಟನೆ ನಡೆದಿಲ್ಲ: ಕೆಎಸ್‌ಆರ್‌ಟಿಸಿ ವಾದ ತಳ್ಳಿ ಹಾಕಿದ ಹೈಕೋರ್ಟ್
ಅಲ್ಲದೇ, ಯಾವ ರಸ್ತೆಯಲ್ಲಿ ಎಷ್ಟು ಭಾರದ ವಾಹನಗಳು ಸಂಚರಿಸಲಿವೆ. ಬಿಬಿಎಂಪಿ ರಸ್ತೆ ಗುಂಡಿ ಮುಚ್ಚಿರುವುದು ವಾಹನದ ಭಾರ ತಡೆಯಲಿದೆಯೇ? ಎಂಬುದನ್ನು ಪರಿಶೀಲನೆ ನಡೆಸಿ ದೃಢೀಕರಿಸಲು ಯಾವುದೇ ಪ್ರತ್ಯೇಕ ಸಂಸ್ಥೆಯಿಲ್ಲ. ಹೀಗಿರುವಾಗ ನಂಬುವುದಾದರೂ ಹೇಗೆ ಎಂದು ನ್ಯಾಯಪೀಠ ಪ್ರಶ್ನಿಸಿತು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಎನ್‌ಎಚ್‌ಎಐ)ದ ಅಧಿಕಾರಿಗಳಿಂದ ರಸ್ತೆ ಗುಂಡಿ ಕಾಮಗಾರಿ ಪರಿಶೀಲನೆಗೆ ಸೂಚನೆ ನೀಡಿದೆ. ಜತೆಗೆ, ಎನ್‌ಎಚ್‌ಎಐನ ಮುಖ್ಯ ಇಂಜಿನಿಯರ್ ಅಥವಾ ಮುಖ್ಯ ಇಂಜಿನಿಯರ್ ಅವರಿಂದ ನೇಮಕಗೊಂಡ ಹಿರಿಯ ಇಂಜಿನಿಯರ್ ಬೆಂಗಳೂರು ರಸ್ತೆ ಗುಂಡಿ ಮುಚ್ಚಿರುವುದನ್ನು ಪರಿಶೀಲನೆ ನಡೆಸಬೇಕು. ಅದರ ಗುಣಮಟ್ಟದ ಬಗ್ಗೆ ವರದಿಯನ್ನು ಸಲ್ಲಿಸಬೇಕು ಎಂದು ನ್ಯಾಯಪೀಠ ಸೂಚನೆ ನೀಡಿದೆ.
ಇದನ್ನೂ ಓದಿ: ಅನಾರೋಗ್ಯದ ಬಗ್ಗೆ ತಿಳಿಸದೇ ವಿಮೆ ಮಾಡಿಸಿದಲ್ಲಿ ಮೆಡಿಕ್ಲೈಮ್ ನಿರಾಕರಿಸಬಹುದು: ಹೈಕೋರ್ಟ್
ಗುಂಡಿಗೆ ಬಿದ್ದು ಸಾವನ್ನಪ್ಪುತ್ತಿರುವ ಬಗ್ಗೆ ಕಳವಳ: ಸಾರ್ವಜನಿಕರಿಗೆ ಗುಂಡಿಮುಕ್ತ ರಸ್ತೆ ನಿರ್ಮಾಣ ಮಾಡುವುದು ಬಿಬಿಎಂಪಿ ಕೆಲಸವಾಗಿದೆ. ನ್ಯಾಯಾಲಯ ಹಲವು ಆದೇಶಗಳನ್ನು ನೀಡಿದರೂ ಪಾಲಿಕೆ ಯಾವುದೇ ಕ್ರಮ ಕೈಗೊಳ್ಳುವುದಕ್ಕೆ ಮುಂದಾಗುತ್ತಿಲ್ಲ. ರಸ್ತೆ ಗುಂಡಿ ಮುಚ್ಚದ ಪರಿಣಾಮ ಸಾಮಾನ್ಯ ಜನತೆ ಸಾವನ್ನಪ್ಪುವಂತಾಗಿದೆ ಎಂದು ನ್ಯಾಯಪೀಠ ಕಳವಳ ವ್ಯಕ್ತಪಡಿಸಿತು.
ಗುತ್ತಿಗೆದಾರ ಸಂಸ್ಥೆಗೆ ನೋಟಿಸ್ : ಗುತ್ತಿಗೆದಾರರ ಸಂಸ್ಥೆಯಾದ ಅಮೆರಿಕನ್ ಟೆಕ್ನಾಲಜಿ ಸಲ್ಯೂಷನ್ಸ್ ಸಂಸ್ಥೆ ಯಾವ ರೀತಿಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಲಾಗುತ್ತಿದೆ ಎಂಬುದರ ಕುರಿತು ಮುಂದಿನ ಎರಡು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸಬೇಕು ಎಂದು ಹೈಕೋರ್ಟ್ ಇದೇ ವೇಳೆ ನೋಟಿಸ್ ಜಾರಿ ಮಾಡಿತು.