ಬೆಂಗಳೂರು: 2021-22ರ ಶೈಕ್ಷಣಿಕ ವರ್ಷದಲ್ಲಿ ದಂತ ವೈದ್ಯಕೀಯ ಕೋರ್ಸ್‌ನಲ್ಲಿ ಖಾಲಿ ಇರುವ ಸೀಟುಗಳನ್ನು ಭರ್ತಿ ಮಾಡಲು ಕೆಲವು ವಿದ್ಯಾರ್ಥಿಗಳನ್ನು ನ್ಯಾಯಾಲಯದ ಮೊರೆ ಹೋಗಲು ಕಾರಣರಾಗುತ್ತಿದ್ದ ಎರಡು ಖಾಸಗಿ ದಂತ ಕಾಲೇಜುಗಳಿಗೆ ಹೈಕೋರ್ಟ್ ತಲಾ 1 ಲಕ್ಷ ರೂಪಾಯಿ ದಂಡ ವಿಧಿಸಿದೆ.
ಅಲ್ಲದೆ, ದಂಡದ ಮೊತ್ತ ವಕೀಲರ ಸಂಘಕ್ಕೆ ಪಾವತಿ ಮಾಡಬೇಕು ಎಂಬುದಾಗಿ ಸೂಚನೆ ನೀಡಿ ಅರ್ಜಿಯನ್ನು ವಜಾಗೊಳಿಸಿದೆ. ಬೆಂಗಳೂರಿನ ಶ್ರೀ ವೆಂಕಟೇಶ್ವರ ದಂತ ಕಾಲೇಜು ಮತ್ತು ಆಸ್ಪತ್ರೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಕೆವಿಜಿ ದಂತ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಸಲ್ಲಿಸಿದ್ದ ಅರ್ಜಿಗಳನ್ನು ವಜಾಗೊಳಿಸಿರುವ ನ್ಯಾಯಮೂರ್ತಿ ಬಿ.ವೀರಪ್ಪ ಮತ್ತು ನ್ಯಾಯಮೂರ್ತಿ ಕೆ.ಎಸ್. ಹೇಮಲೇಖಾ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ಆದೇಶ ನೀಡಿದೆ.
ಆಯಾ ಕಾಲೇಜುಗಳಲ್ಲಿ ಬಿಡಿಎಸ್ ಕೋರ್ಸ್‌ಗೆ ಪ್ರವೇಶ ಪಡೆಯದ ಆರು ಅರ್ಜಿದಾರ ವಿದ್ಯಾರ್ಥಿಗಳ ಕೇರ್ ಆಫ್ ವಿಳಾಸ ಕಾಲೇಜುಗಳದ್ದಿದೆ ಎಂದು ಆಶ್ಚರ್ಯ ವ್ಯಕ್ತಪಡಿಸಿದ ನ್ಯಾಯಪೀಠ, ಕಾಲೇಜುಗಳು 'ಶುದ್ಧ ಹಸ್ತ'ದಿಂದ ನ್ಯಾಯಾಲಯದ ಮೊರೆ ಹೋಗಿಲ್ಲ ಎಂದು ತಿಳಿಸಿದೆ.
ಜೊತೆಗೆ, ಸದ್ಯದ ಈ ಅರ್ಜಿಯನ್ನು ಬಳಸಿಕೊಂಡು ಪರೋಕ್ಷವಾಗಿ ಕೆಲವು ಭರ್ತಿಯಾಗದ ಸೀಟುಗಳನ್ನು ತುಂಬಲು ಮಾತ್ರ ಅವರು ಈ ವಿದ್ಯಾರ್ಥಿಗಳನ್ನು ಬಳಸಿಕೊಂಡಿದ್ದಾರೆ. ಕಾಲೇಜುಗಳು ನ್ಯಾಯಾಲಯದ ಮತ್ತು ಅರ್ಜಿದಾರ ವಿದ್ಯಾರ್ಥಿಗಳ ಅಮೂಲ್ಯ ಸಮಯವನ್ನು ವ್ಯರ್ಥ ಮಾಡುವುದಲ್ಲದೇ, ಅನಗತ್ಯವಾಗಿ ಕೆಇಎ ಮತ್ತು ಇತರ ಶಾಸನಬದ್ಧ ಅಕಾರಿಗಳನ್ನು ನ್ಯಾಯಾಲಯಗಳಿಗೆ ಕರೆಯಿಸಿ ಅನಗತ್ಯ ದಾವೆಗಳ ಮೇಲೆ ವೆಚ್ಚ ಮಾಡುವಂತೆ ಮಾಡಿರುವುದು ಸರಿಯಾದ ಕ್ರಮವಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಅರ್ಜಿದಾರರ ವಾದವೇನು?: ಒಂದೇ ಮ್ಯಾನೇಜ್‌ಮೆಂಟ್‌ನಿಂದ ನಿರ್ವಹಿಸಲ್ಪಡುವ ಎರಡೂ ಕಾಲೇಜುಗಳು ಹಾಗೂ ಆರು ವಿದ್ಯಾರ್ಥಿಗಳೊಂದಿಗೆ ಹೈಕೋರ್ಟ್‌ನಲ್ಲಿ ಅರ್ಜಿಗಳನ್ನು ಸಲ್ಲಿಸಿ ಮಾಪ್-ಅಪ್ ಸುತ್ತಿನ ಪ್ರವೇಶಕ್ಕಾಗಿ ನೋಂದಾಯಿಸಲು ಪೋರ್ಟಲ್ ತೆರೆಯಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (ಕೆಇಎ) ನಿರ್ದೇಶನ ನೀಡಲು ಕೋರಿದ್ದರು.
ಅಲ್ಲದೆ, ಬಿಡಿಎಸ್ ಕೋರ್ಸ್‌ಗೆ ವಿದ್ಯಾರ್ಥಿಗಳು ಕಾಲೇಜುಗಳಿಗೆ ಪ್ರವೇಶ ಪಡೆಯದಿದ್ದರೂ ಕಾಲೇಜುಗಳು, ಕೋರ್ಟ್ ಮೊರೆ ಹೋದ ವಿದ್ಯಾರ್ಥಿಗಳನ್ನು ಕೇರಾಫ್ ಕಾಲೇಜು ಎಂದು ತೋರಿಸಿದ್ದವು. ಮಾಪ್-ಅಪ್ ಸುತ್ತಿನ ಎಂಟ್ರಿ ಕ್ಲೋಸ್ ಆದ ಒಂದು ತಿಂಗಳ ನಂತರ ಕೆಇಎ ಪೋರ್ಟಲ್ ನೋಂದಣಿಗಾಗಿ ತೆರೆಯದ ಕಾರಣ ಅರ್ಜಿದಾರರು-ವಿದ್ಯಾರ್ಥಿಗಳು ಮೇ 2022ರಲ್ಲಿ ನಡೆದ ಮಾಪ್-ಅಪ್ ರೌಂಡ್‌ಗೆ ನೋಂದಾಯಿಸಲು ಸಾಧ್ಯವಿಲ್ಲ. ಹಾಗಾಗಿ ಆ ವಿದ್ಯಾರ್ಥಿಗಳನ್ನು ಕಾಲೇಜುಗಳಿಗೆ ಪ್ರವೇಶಿಸಲು ಮತ್ತು ಗುರುತಿಸಲು ನೋಂದಾಯಿಸಲು ಅವಕಾಶ ನೀಡುವಂತೆ ಕೆಇಎಗೆ ನಿರ್ದೇಶಿಸುವಂತೆ ಅರ್ಜಿದಾರರು ಕೋರಿದ್ದರು.
ಇದನ್ನೂ ಓದಿ: ತೀರ್ಪು ಕಕ್ಷಿದಾರರ ಪರ ಬಂದಿಲ್ಲ ಎಂದರೆ ವಂಚನೆ ಆಗುವುದಿಲ್ಲ.. ಹೈಕೋರ್ಟ್