ಬೆಂಗಳೂರು: ಹೌಸಿಂಗ್ ಸೊಸೈಟಿ ವಿವಾದಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ನಡೆಸಿದ್ದ ಸಹಕಾರ ಇಲಾಖೆ ಜಂಟಿ ನಿಬಂಧಕ ಪಾಂಡುರಂಗ ಗರ್ಗ್, ಎಸಿಬಿ ದಾಳಿ ಪರಿಣಾಮ ಅಮಾನತುಗೊಂಡ ನಂತರವೂ ಹಿಂದಿನ ದಿನಾಂಕ ನಮೂದಿಸಿ ಆದೇಶ ಹೊರಡಿಸಿದ್ಧಕ್ಕೆ ಹೈಕೋರ್ಟ್ 5 ಲಕ್ಷ ರೂಪಾಯಿ ದಂಡ ವಿಧಿಸಿ ಆದೇಶಿಸಿದೆ.
ಈ ಕುರಿತು ಶ್ರೀಮಯ ಬಿಲ್ಡರ್ಸ್ ಮತ್ತು ಡೆವಲಪರ್ಸ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ. ಭ್ರಷ್ಟಚಾರ ಆರೋಪದಡಿ ಎಬಿಸಿ ದಾಳಿ ನಡೆದು, ಅಮಾನತುಗೊಂಡ ಮೇಲೂ ಪಾಂಡುರಂಗ ಗರ್ಗ್ ಹಿಂದಿನ ದಿನಾಂಕ ನಮೂದಿಸಿ ಆದೇಶಕ್ಕೆ ಸಹಿ ಹಾಕಿರುವ ಕ್ರಮಕ್ಕೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಅದಕ್ಕಾಗಿ 5 ಲಕ್ಷ ರೂ. ದಂಡ ವಿಧಿಸಿದ್ದು, ದಂಡವನ್ನು ಗರ್ಗ್ ವೈಯಕ್ತಿಕವಾಗಿ ಭರಿಸಬೇಕು. ಅಲ್ಲಿಯವರೆಗೆ ಪಿಂಚಣಿ ಭತ್ಯೆಗಳನ್ನು ನೀಡಬಾರದು ಎಂದು ಆದೇಶಿಸಿದೆ. ಅಲ್ಲದೆ, ಗರ್ಗ್ ಕಾನೂನು ಬಾಹಿರವಾಗಿ ಜೂ.21ರಂದು ಮಾಡಿದ್ದ ಆದೇಶ ರದ್ದುಪಡಿಸಿ ಸಹಕಾರ ಸಂಘಗಳ ಜಂಟಿ ನಿಬಂಧಕರಿಗೆ ಪ್ರಕರಣದ ಮರು ವಿಚಾರಣೆ ನಡೆಸಲು ಸೂಚಿಸಿದೆ.ಇದಕ್ಕೂ ಮುನ್ನ ನಡೆದ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದಿಸಿ, ಅರ್ಜಿದಾರರು ಬಿಇಎಲ್ ಹೌಸಿಂಗ್ ಸೊಸೈಟಿ ವಿರುದ್ಧದ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿದ್ದರು. ಪ್ರತಿ ಬಾರಿ ಪ್ರಕರಣದ ವಿಚಾರಣೆ ಮುಂದೂಡಲ್ಪಡುತ್ತಿತ್ತು. ಆದರೆ ನಿಬಂಧಕರಾಗಿದ್ದ ಪಾಂಡುರಂಗ ಗರ್ಗ್ ಅಮಾನತಾಗಿದ್ದರೂ ಜು.6ಕ್ಕೆ ಮುಂದೂಡಲಾಗಿದ್ದ ಪ್ರಕರಣದಲ್ಲಿ ತಮ್ಮ ವಾದ ಆಲಿಸದೆ ಜೂ.21ರಂದೇ ಪ್ರತಿವಾದಿಗಳ ಪರವಾಗಿ ಆದೇಶ ಹೊರಡಿಸಿದ್ದಾರೆ.
ಈ ಕಾನೂನು ಬಾಹಿರ ಆದೇಶವನ್ನು ರದ್ದುಗೊಳಿಸಬೇಕು ಮತ್ತು ಅಮಾನತಾಗಿದ್ದರೂ ಹಿಂದಿನ ದಿನಾಂಕ ನಮೂದಿಸಿ ಆದೇಶ ಮಾಡಿರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಆದೇಶ ನೀಡಬೇಕು ಎಂದು ಕೋರಿದರು.ಅರ್ಜಿದಾರರರು ಮೂಲತಃ ಕಟ್ಟಡ ನಿರ್ಮಾಣ ಸಂಸ್ಥೆಯಾಗಿದ್ದು, ಬಿಇಎಲ್ ಹೌಸಿಂಗ್ ಸೊಸೈಟಿ ಕಟ್ಟಡ ನಿರ್ಮಿಸಲು ಗುತ್ತಿಗೆ ನೀಡಿತ್ತು. ಆ ಗುತ್ತಿಗೆ ಅವಧಿ ಬಾಕಿ ಇದ್ದಾಗಲೇ ಕಾಮಗಾರಿ ಪೂರ್ಣಗೊಂಡಿಲ್ಲ ಎಂದು ಆರೋಪಿಸಿ ಬೇರೊಂದು ಕಂಪನಿ ಜೊತೆ ಒಪ್ಪಂದ ಮಾಡಿಕೊಂಡಿತ್ತು. ಇದನ್ನು ಅರ್ಜಿದಾರರು ಪ್ರಶ್ನಿಸಿದ್ದರು.