ಬೆಂಗಳೂರು: 'ಅತ್ಯಾಚಾರಕ್ಕೆ ಒಳಗಾದ ನಂತರ ಸುಸ್ತಾಗಿ ಮಲಗಿದೆ. ಹೀಗಾಗಿ ಪೊಲೀಸರಿಗೆ ದೂರು ನೀಡುವಲ್ಲಿ ವಿಳಂಬವಾಗಿದೆ ಎಂಬ ಹೇಳಿಕೆ ಭಾರತೀಯ ನಾರಿಯ ಲಕ್ಷಣವಲ್ಲ' ಎಂದು ಉಲ್ಲೇಖಿಸಿದ್ದ ಪದಗಳನ್ನು ಹೈಕೋರ್ಟ್ ಏಕಸದಸ್ಯ ಪೀಠ ತನ್ನ ತೀರ್ಪಿನಿಂದ ತೆಗೆದು ಹಾಕಿದೆ.
ತೀರ್ಪಿನಲ್ಲಿ ಬಳಸಿದ್ದ ಪದಗಳಿಗೆ ಮಹಿಳಾ ಪರ ಸಂಘಟನೆಗಳು ರಾಷ್ಟ್ರವ್ಯಾಪಿ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ತಿದ್ದುಪಡಿ ಕೋರಿ ರಾಜ್ಯ ಪ್ರಾಸಿಕ್ಯೂಷನ್ ಅರ್ಜಿ ಸಲ್ಲಿಸಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠ ತೀರ್ಪಿನಲ್ಲಿದ್ದ ಒಂದಷ್ಟು ಪದಗಳನ್ನು ತಿದ್ದುಪಡಿ ಮಾಡಲು ಅನುಮತಿ ನೀಡಿತು. ಈ ಹಿನ್ನೆಲೆಯಲ್ಲಿ ವಿವಾದಕ್ಕೆ ಕಾರಣಾಗಿರುವ ಪದಗಳನ್ನು ತೀರ್ಪಿನಿಂದ ಕೈಬಿಡಲಾಗಿದೆ.
ಪ್ರಾಸಿಕ್ಯೂಷನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಆರೋಪಿ ಪರ ಹಿರಿಯ ವಕೀಲ ಸಿ.ಎಚ್. ಹನುಮಂತರಾಯ ಅವರು ಹಾಜರಾಗಿ, ನ್ಯಾಯದ ಹಿತದೃಷ್ಟಿಯಿಂದ ಪ್ರಾಸಿಕ್ಯೂಷನ್ ಸಲ್ಲಿಸಿರುವ ಅರ್ಜಿಗೆ ನಮ್ಮ ತಕರಾರು ಇಲ್ಲವೆಂದು ಲಿಖಿತವಾಗಿ ತಿಳಿಸಿದರು. ತಿದ್ದುಪಡಿಗೆ ಅಕ್ಷೇಪ ವ್ಯಕ್ತವಾಗದ ಹಿನ್ನೆಲೆಯಲ್ಲಿ ಪೀಠ ತೀರ್ಪಿನಲ್ಲಿದ್ದ ಪದಗಳ ಬದಲಾವಣೆ ಮಾಡಲು ಸೂಚಿಸಿ ಅರ್ಜಿ ಇತ್ಯರ್ಥಪಡಿಸಿತು.
ಪ್ರಕರಣದ ಹಿನ್ನೆಲೆ:
ಜೂನ್ 22ರಂದು ಅತ್ಯಾಚಾರ ಆರೋಪಿಗೆ ಜಾಮೀನು ನೀಡಿದ್ದ ನ್ಯಾ. ಕೃಷ್ಣ ಎಸ್. ದೀಕ್ಷಿತ್ ಅವರ ಏಕಸದಸ್ಯ ಪೀಠ ತೀರ್ಪಿನಲ್ಲಿ ಪ್ರಕರಣದ ವಿವಾದಾಂಶಗಳನ್ನು ವಿಶ್ಲೇಷಣೆ ಮಾಡಿತ್ತು. ಈ ವೇಳೆ ಅತ್ಯಾಚಾರಕ್ಕೆ ಒಳಗಾದ ಮಹಿಳೆ ದೂರು ದಾಖಲಿಸಲು ವಿಳಂಬ ಮಾಡಿ, ನಂತರ ಅತ್ಯಾಚಾರಕ್ಕೆ ಒಳಗಾಗಿದ್ದರಿಂದ ಸುಸ್ತಾಗಿ ಮಲಗಿಬಿಟ್ಟೆ ಎಂದು ಹೇಳುವುದಿಲ್ಲ. ಭಾರತೀಯ ನಾರಿ ನಡೆದುಕೊಳ್ಳುವ ಲಕ್ಷಣ ಇದಲ್ಲ ಎಂದು ವ್ಯಾಖ್ಯಾನಿಸಿತ್ತು. ಜತೆಗೆ ಮಹಿಳೆ ಅತ್ಯಾಚಾರ ಎಸಗಿದ ಆರೋಪಿಯ ವಿರುದ್ಧ ಪ್ರತಿಭಟಿಸಿದ ಕುರಿತು ಎಲ್ಲಿಯೂ ವಿವರಿಸಿಲ್ಲ ಎಂದು ತೀರ್ಪಿನಲ್ಲಿ ಸ್ಪಷ್ಟನೆ ನೀಡುವ ಪ್ರಯತ್ನ ಮಾಡಿತ್ತು.
ತೀರ್ಪು ಮತ್ತು ತೀರ್ಪಿನಲ್ಲಿನ ವಿಶ್ಲೇಷಣೆ ಜೂನ್ 25ರಂದು ಮಾಧ್ಯಮಗಳಲ್ಲಿ ಪ್ರಕಟವಾಗತ್ತಲೇ ಇತಿಹಾಸಕಾರ ರಾಮಚಂದ್ರ ಗುಹಾ ಮತ್ತು ಕೆಲ ಮಹಿಳಾ ಸಂಘಟನೆಗಳು ನ್ಯಾ. ಕೃಷ್ಣ ಎಸ್. ದೀಕ್ಷಿತ್ ಅವರಿಗೆ ನೇರವಾಗಿ ಬಹಿರಂಗ ಪತ್ರ ಬರೆದು ಆಕ್ಷೇಪ ವ್ಯಕ್ತಪಡಿಸಿದ್ದವು. ಈ ಆಕ್ಷೇಪವನ್ನು ಖಂಡಿಸಿ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಮತ್ತಿತರ ಕಾನೂನು ತಜ್ಞರು, ತೀರ್ಪಿನಿಂದ ಬಾಧಿತರಾದವರು ಮೇಲ್ಮನವಿ ಸಲ್ಲಿಸಿ ನ್ಯಾಯ ಪಡೆಯಬಹುದು. ಈ ರೀತಿ ಪತ್ರ ಬರೆಯುವುದು ಸರಿಯಲ್ಲ' ಎಂದು ಪ್ರತಿಕ್ರಿಯಿಸಿದ್ದರು. ಅಂತಿಮವಾಗಿ ಅಕ್ಷೇಪಕ್ಕೆ ಒಳಗಾಗಿದ್ದ ತೀರ್ಪಿನಲ್ಲಿನ ಪದಗಳನ್ನು ಇದೀಗ ಕೈಬಿಡಲಾಗಿದೆ.