ಬೆಂಗಳೂರು : ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರ ಇಡಿಗಂಟು ಯೋಜನೆ ಸಂಬಂಧ ಸಲ್ಲಿಕೆಯಾಗಿರುವ ಮನವಿಯನ್ನು ಪರಿಗಣಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಸಂಘ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್. ಎಸ್ಸಂಜಯ್ ಗೌಡ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ಅಷ್ಟೇ ಅಲ್ಲದೆ, ಮುಂದಿನ ಎರಡು ತಿಂಗಳಲ್ಲಿ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ವಿವರಿಸಿದೆ.
ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಸಮಾಜದ ಅತ್ಯಂತ ಕೆಳ ಸ್ಥರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೂ ಉತ್ತಮ ಸೌಲಭ್ಯಗಳು ನೀಡುತ್ತಿಲ್ಲ. ಈ ನಿಟ್ಟಿನಲ್ಲಿ ಈ ಅವರ ಸೇವೆಯನ್ನು ಪರಿಗಣಿಸಿ ಇಡಿಗಂಟು ಹೆಚ್ಚಳ ಮಾಡುವಂತೆ ನಿರ್ದೇಶನ ನೀಡಲಾಗುತ್ತಿದೆ ಎಂದು ಪೀಠ, ತನ್ನ ಆದೇಶದಲ್ಲಿ ತಿಳಿಸಿದೆ.
ಅಂಗನವಾಡಿ ಕಾರ್ಯಕರ್ತೆಯರಿಗೆ ಇಡಿಗಂಟು (ಗೌರವಧನ) ಪಾವತಿ ಯೋಜನೆಯನ್ನು 2011ರ ಮಾರ್ಚ್ 18ರಂದು ಪ್ರಾರಂಭಿಸಿದ್ದ ಸರ್ಕಾರ ಕಾರ್ಯಕರ್ತೆಯರಿಗೆ 30 ಸಾವಿರ ಮತ್ತು ಸಹಾಯಕಿಯರಿಗೆ 50 ಸಾವಿರ ರು.ಗಳನ್ನು ನೀಡುತ್ತಿದೆ. ಈ ಮೊತ್ತವನ್ನು ಕ್ರಮವಾಗಿ 50 ಸಾವಿರ ಹಾಗೂ 1 ಲಕ್ಷಕ್ಕೆ ಹೆಚ್ಚಳ ಮಾಡಬೇಕು ಎಂದು ಅರ್ಜಿಯಲ್ಲಿ ಕೋರಿದ್ದರು.
ವಿಚಾರಣೆ ವೇಳೆ, ಸುದೀರ್ಘ ಸೇವೆ ಸಲ್ಲಿಸಿದ ನಂತರ ಮನೆಗೆ ಹಿಂದಿರುಗುವ ಸಂದರ್ಭದಲ್ಲಿ ಪ್ರಸ್ತುತ ಸರ್ಕಾರ ನಿಗದಿ ಪಡಿಸಿರುವ ಮೊತ್ತ ಅತ್ಯಂತ ಕಡಿಮೆಯಿದೆ. ಆದ್ದರಿಂದ ಇಡಿಗಂಟು ಮೊತ್ತವನ್ನು ಹೆಚ್ಚಳ ಮಾಡಬೇಕು ಎಂದು ಅರ್ಜಿದಾರರ ಪರ ವಕೀಲರು ಮನವಿ ಮಾಡಿದ್ದರು.
ಇದನ್ನೂ ಓದಿ : ಶಾಲಾ - ಕಾಲೇಜು ಸಮಯ ಬದಲಾವಣೆ ಮಾಡಲಾಗದು: ಹೈಕೋರ್ಟ್‌ಗೆ ಸರ್ಕಾರದ ವರದಿ