ಬೆಂಗಳೂರು: ಪತ್ನಿಯ ನಡೆತೆಯ ಕುರಿತು ಸಂಶಯಪಟ್ಟು ತನ್ನ ಮಗುವಿಗೆ ಎರಡನೇ ಬಾರಿ ಡಿಎನ್‌ಎ ಪರೀಕ್ಷೆ ನಡೆಸಲು ಅನುಮತಿ ಕೋರಿ ವ್ಯಕ್ತಿಯೊಬ್ಬರು ಸಲ್ಲಿಸಿರುವ ಅರ್ಜಿ ವಜಾಗೊಳಿಸಿರುವ ಹೈಕೋರ್ಟ್, ಇದು ಹೆಂಡತಿ ಮತ್ತು ಮಕ್ಕಳ ನೋಡಿಕೊಳ್ಳುವ ಜವಾಬ್ದಾರಿಯಿಂದ ನುಣುಚಿಕೊಳ್ಳುವ ತಂತ್ರವಾಗಿದೆ ಎಂದು ಅಭಿಪ್ರಾಯಪಟ್ಟಿದೆ.
ಡಿಎನ್‌ಎ ಮಾದರಿಗಳನ್ನು ಎರಡನೇ ಬಾರಿಗೆ ಎಫ್‌ಎಸ್‌ಎಲ್ ಪರೀಕ್ಷೆಗಾಗಿ ಹೈದರಾಬಾದ್‌ಗೆ ರವಾನಿಸುವುದಕ್ಕಾಗಿ ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ, ಮನವಿಯನ್ನು ತಿರಸ್ಕರಿಸಿ ಅರ್ಜಿ ವಜಾಗೊಳಿಸಿದೆ. ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಅರ್ಹ ವೈದ್ಯರಿಂದ ಪರೀಕ್ಷೆಗೊಳಪಡಿಸಿ, ಅದರ ನಿರ್ದೇಶಕರು ಅನುಮೋದಿಸಿರುತ್ತಾರೆ. ಹೀಗಾಗಿ ಎರಡನೇ ಬಾರಿಗೆ ಡಿಎನ್‌ಎ ಪರೀಕ್ಷೆಗೆ ಒಳಪಡಿಸಬೇಕಾದ ಅಗತ ಉದ್ಭವಿಸುವುದಿಲ್ಲ ಎಂದು ತಿಳಿಸಿದೆ.
ಅಲ್ಲದೆ, ಸರ್ಕಾರಿ ಆಸ್ಪತ್ರೆ ಅಥವಾ ಪ್ರಯೋಗಾಲಯದಿಂದ ಬರುವ ವರದಿಗಳ ಫಲಿತಾಂಶವನ್ನು ಅನುಮಾನದಿಂದ ನೋಡುವುದಕ್ಕೆ ಸಾಧ್ಯವಿಲ್ಲ. ಜೊತೆಗೆ, ಫಲಿತಾಂಶ ಅರ್ಜಿದಾರರ ವಿರುದ್ಧವಿದೆ ಎಂಬ ಕಾರಣಕ್ಕೆ ಅವರ ಆರೋಪಗಳನ್ನು ಪರಿಗಣಿಸಲು ಅವಕಾಶವಿಲ್ಲ ಎಂದು ನ್ಯಾಯಪೀಠ ತಿಳಿಸಿದೆ. ಈ ಅರ್ಜಿಯನ್ನು ಪುರಸ್ಕರಿಸಿದಲ್ಲಿ, ತಮ್ಮ ಪರವಾಗಿ ಫಲಿತಾಂಶ ಬರುವವರೆಗೂ ಮತ್ತೆ ಮತ್ತೆ ಅರ್ಜಿ ಸಲ್ಲಿಸುವ ಸಾಧ್ಯತೆಯಿರಲಿದೆ. ಹೇಗಾದರೂ ಪತ್ನಿಯ ವಿರುದ್ಧ ಸಂಶಯವನ್ನು ಸಾಬೀತುಪಡಿಸಲು, ಹೆಂಡತಿ ಮತ್ತು ಮಗುವನ್ನು ನೋಡಿಕೊಳ್ಳುವ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವುದಕ್ಕೆ ಬಯಸುತ್ತಿದ್ದು, ಅರ್ಜಿಯನ್ನು ಪರಿಗಣಿಸಲು ಅವಕಾಶವಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.
ಪ್ರಕರಣದ ಹಿನ್ನೆಲೆ ಏನು? ಬೆಂಗಳೂರು ನಗರದ ಕೆಂಗೇರಿ ಹೋಬಳಿಯ ಅಗರ ಗ್ರಾಮದ ನಿವಾಸಿಯಾಗಿರುವ ಅರ್ಜಿದಾರರು 2010ರ ಮೇ ತಿಂಗಳಲ್ಲಿ ವಿವಾಹವಾಗಿದ್ದು, 2011ರ ಸೆಪ್ಟಂಬರ್ ತಿಂಗಳಲ್ಲಿ ದಂಪತಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈ ನಡುವೆ ಉಂಟಾದ ಕೌಟುಂಬಿಕ ಕಾರಣದಿಂದ ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ಸಂದರ್ಭದಲ್ಲಿ ಮಗುವಿನ ಪಿತೃತ್ವ ಸಾಬೀತು ಪಡಿಸಲು ಡಿಎನ್‌ಎ ಪರೀಕ್ಷೆ ನಡೆಸುವುದಕ್ಕಾಗಿ ಮಧ್ಯಂತರ ಅರ್ಜಿ ಸಲ್ಲಿಸಿದ್ದರು. ಅದರಂತೆ ಪತ್ನಿಯ ಒಪ್ಪಿಗೆಯ ಮೇರೆಗೆ ಅರ್ಜಿಯನ್ನು ಅಂಗೀಕರಿಸಿದ್ದ ನ್ಯಾಯಾಲಯ ರಕ್ತದ ಮಾದರಿಗಳನ್ನು ಬೆಂಗಳೂರಿನ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಿದ್ದರು. ಈ ಪರೀಕ್ಷೆಯಲ್ಲಿ ಅರ್ಜಿದಾರರು ಮಗುವಿನ ತಂದೆ ಎಂಬುದು ಸಾಬೀತಾಗಿತ್ತು.
ಇದರಿಂದ ಅಸಮಾಧಾನಗೊಂಡಿದ್ದ ಅರ್ಜಿದಾರರು, ಕೋರ್ಟ್ ನಿರ್ದೇಶನದ ಮೇರೆಗೆ ವಿಧಿ ವಿಜ್ಞಾನ ಪ್ರಯೋಗಾಲಯದ ನಿರ್ದೇಶಕರು ಡಿಎನ್‌ಎ ಮಾದರಿ ಪರೀಕ್ಷೆಗೊಳಪಡಿಸಬೇಕಾಗಿತ್ತು. ಆದರೆ, ಅವರ ಅಧೀನದ ವೈದ್ಯರು ಪರೀಕ್ಷೆಗೊಳಪಡಿಸಿದ್ದಾರೆ. ಹೀಗಾಗಿ ಮತ್ತೊಂದು ಬಾರಿ ಡಿಎನ್‌ಎ ಪರೀಕ್ಷೆಗೊಳಪಡಿಸಬೇಕು ಎಂದು ಮತ್ತೊಂದು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಕೌಟುಂಬಿಕ ನ್ಯಾಯಾಲಯ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರ ಹೈಕೋರ್ಟ್ ಮೆಟ್ಟಿಲೇರಿದ್ದರು.
(ಓದಿ: ಲೈಂಗಿಕ ಅಶ್ಲೀಲ ಜಾಹೀರಾತಿನಿಂದ ಅಧ್ಯಯನಕ್ಕೆ ತೊಂದರೆ: ಪರಿಹಾರ ಕೋರಿ ಸುಪ್ರೀಂಗೆ ಅರ್ಜಿ)