ಬೆಂಗಳೂರು : ಬಾಲಕಿಯನ್ನು ಅಪಹರಣ ಮಾಡಿ ಸತತ ಅತ್ಯಾಚಾರವೆಸಗಿದ್ದ ಆರೋಪಿಗೆ ಜಾಮೀನು ನೀಡಲು ಹೈಕೋರ್ಟ್ ನಿರಾಕರಿಸಿದೆ. ಜಾಮೀನು ಕೋರಿ ದಾವಣಗೆರೆ ತಾಲೂಕಿನ ಹೊಸಕುಂಡುವಾಡ ಗ್ರಾಮದ ಆರೋಪಿ ಎನ್. ಶ್ರೀನಿವಾಸ್ ಎಂಬಾತ ಅರ್ಜಿ ಸಲ್ಲಿಸಿದ್ದ. ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜಿ.ಉಮಾ ಅವರಿದ್ದ ನ್ಯಾಯಪೀಠ ಅರ್ಜಿ ವಜಾಗೊಳಿಸಿತು.
ಸಂತ್ರಸ್ತ ಬಾಲಕಿ ಪರೀಕ್ಷೆಗೊಳಪಡಿಸಿದ್ದ ವೈದ್ಯಾಧಿಕಾರಿಗಳ ಮುಂದೆ ಆರೋಪಿಯ ವಿರುದ್ಧ ಹೇಳಿಕೆ ನೀಡಿದ್ದಾರೆ. ಮ್ಯಾಜಿಸ್ಟ್ರೇಟ್ ಮುಂದೆ ಸಿಆರ್‌ಪಿಸಿ 164 ಅಡಿಯಲ್ಲಿ ಹೇಳಿಕೆ ನೀಡುವ ಸಂಬಂಧ ಈ ಹೇಳಿಕೆಯನ್ನು ಹಿಂಪಡೆದುಕೊಂಡಿದ್ದಾರೆ. ಆದರೆ ಪ್ರಕರಣ ಅತ್ಯಂತ ಗಂಭೀರ ಸ್ವರೂಪದ್ದು. ಹೀಗಾಗಿ ಅರ್ಜಿ ವಜಾಗೊಳಿಸುತ್ತಿರುವುದಾಗಿ ಅವರು ತಿಳಿಸಿದರು.
ಪ್ರಕರಣ ಸಂಬಂಧ ವಿಚಾರಣೆಯಲ್ಲಿ ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, "ಪ್ರಕರಣದಲ್ಲಿ ಅರ್ಜಿದಾರರ ವಿರುದ್ಧದ ಆರೋಪಗಳು ನಿರಾಧಾರ. ತಪ್ಪಾಗಿ ಅವರನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಸಂತ್ರಸ್ತೆ ಮ್ಯಾಜಿಸ್ಟ್ರೇಟ್ ಮುಂದೆ ನೀಡಿರುವ ಹೇಳಿಕೆಯಲ್ಲಿ ಅರ್ಜಿದಾರರ ಹೆಸರು ಹೇಳಿಲ್ಲ. ಪ್ರಕರಣ ತನಿಖೆ ಪೂರ್ಣಗೊಂಡಿದ್ದು, 2022ರ ಜೂನ್ ತಿಂಗಳಿನಿಂದ ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಹೀಗಾಗಿ ಜಾಮೀನು ಮಂಜೂರು ಮಾಡಬೇಕು" ಎಂದು ಮನವಿ ಮಾಡಿದರು.
ಇದೇ ವೇಳೆ ಸರ್ಕಾರದ ಪರ ವಕೀಲರು ವಾದ ಮಂಡಿಸಿ, "ಅಪ್ರಾಪ್ತೆಯನ್ನು ಅಪಹರಣ ಮಾಡಿ ಸತತ ಅತ್ಯಾಚಾರವೆಸಗಿರುವ ಕುರಿತು ವೈದ್ಯಕೀಯ ಸಾಕ್ಷ್ಯಾಧಾರಗಳಿವೆ. ಆರೋಪಿಯ ವಿರುದ್ಧ ಗಂಭೀರ ಆರೋಪವಿದೆ. ಹೀಗಾಗಿ ಅರ್ಜಿ ರದ್ದುಗೊಳಿಸಬೇಕು" ಎಂದರು.
ಪ್ರಕರಣದ ವಿವರ: ದಾವಣಗೆರೆ ತಾಲೂಕಿನ ಹೊಸಕುಂಡುವಾಡ ಗ್ರಾಮದ ಮಹಿಳೆಯೊಬ್ಬರು ತಮ್ಮ ಮಗಳು ನಾಪತ್ತೆಯಾಗಿದ್ದಾರೆ ಎಂದು 2022ರ ಫೆ.3 ರಂದು ದಾವಣಗೆರೆಯ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ದೂರು ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸಿ ಸಂತ್ರಸ್ತೆಯನ್ನು ರಕ್ಷಣೆ ಮಾಡಿದ್ದರು. ಬಳಿಕ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.
ಗಾಂಜಾ ಆರೋಪಿಗೆ ಜಾಮೀನು ಇಲ್ಲ: ಕಾರಿನಲ್ಲಿ 277 ಕೆಜಿ ಗಾಂಜಾ ಸಾಗಣೆ ಮಾಡಿದ್ದ ಆರೋಪದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಸೈಯ್ಯದ್ ಮೊಹಮ್ಮದ್ ಎಂಬಾತನಿಗೆ ಜಾಮೀನು ನೀಡಲು ಹೈಕೋರ್ಟ್ ನಿರಾಕರಿಸಿದೆ. ಕೊಡಗು ಜಿಲ್ಲೆ ಕುಶಾಲನಗರದ ನಿವಾಸಿಯಾದ ಈತ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದ. ಈ ಕುರಿತು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್.ಪಿ.ಸಂದೇಶ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಜಾಮೀನು ನೀಡಲು ನಿರಾಕರಿಸಿತು.
ಮೊಹಮ್ಮದ್ ತೆರಳುತ್ತಿದ್ದ ಕಾರಿನಲ್ಲಿ 60 ಕೆಜಿ ಮತ್ತು ಆ ಕಾರನ್ನು ಹಿಂಬಾಲಿಸಿಕೊಂಡು ಹೋಗುತ್ತಿದ್ದ ಲಾರಿಯೊಳಗಿದ್ದಗಾಂಜಾವನ್ನು ಮಂಗಳೂರು ನಗರದ ಆರ್ಥಿಕ ಅಪರಾಧಗಳ ತನಿಖೆ ಮತ್ತು ಮಾದಕ ವಸ್ತು ಸಾಗಣೆ ನಿಗ್ರಹ ದಳದ ಪೊಲೀಸರು ವಶಪಡಿಸಿಕೊಂಡಿದ್ದರು. ಆರೋಪಿ ವಿರುದ್ಧ ಮಾದಕ ವಸ್ತು ಸಾಗಣೆ ಕಾಯ್ದೆ-1985 (ಎನ್‌ಡಿಪಿಎಸ್), ಶಸ್ತ್ರಾಸ್ತ್ರ ಕಾಯ್ದೆ-1959 ಹಾಗೂ ಭಾರತೀಯ ದಂಡ ಸಂಹಿತೆಯ ವಿವಿಧ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಿದ್ದರು.
ಇದನ್ನೂ ಓದಿ: ಪಿಎಸ್ಐ ಹಗರಣದ ಆರೋಪಿ ಹರೀಶ್ಗೆ ಜಾಮೀನು ನಿರಾಕರಿಸಿದ ಹೈಕೋರ್ಟ್