ಬೆಂಗಳೂರು: ಮೈಸೂರು ರಸ್ತೆಯಲ್ಲಿ ಸ್ಯಾಟಿಲೈಟ್ ಬಸ್ ನಿಲ್ದಾಣದ ಬಳಿಯಲ್ಲಿ ಪಾದಚಾರಿಗಳು ಸುಗಮವಾಗಿ ರಸ್ತೆ ದಾಟಲು ಅಳವಡಿಸುತ್ತಿರುವ ಸ್ಕೈವಾಕ್‌ನ ಕಾಮಗಾರಿಯನ್ನು (ಬಿಎಂಟಿಸಿ ಸಬ್ ವೇ ಪ್ರವೇಶ ದ್ವಾರ) ಪೂರ್ಣಗೊಳಿಸಲು ಹೈಕೋರ್ಟ್ ಅನುಮತಿ ನೀಡಿದೆ.
ಸ್ಕೈವಾಕ್ ನಿರ್ಮಾಣಕ್ಕೆ ನೀಡಿದ್ದ ಗುತ್ತಿಗೆ ರದ್ದುಪಡಿಸಿದ್ದ ಬಿಬಿಎಂಪಿಯ ಕ್ರಮ ವಜಾಗೊಳಿಸಿದ್ದ ಹೈಕೋರ್ಟ್ ಏಕ ಸದಸ್ಯ ಪೀಠ, ನಾಲ್ಕು ತಿಂಗಳಲ್ಲಿ ಸ್ಕೈವಾಕ್ ಅಳವಡಿಕೆ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರ ಕಂಪನಿ ಮೆ.ಶಕ್ತಿ ಡೆವಲಪರ್ಸ್ ಲಿಮಿಟೆಡ್ಗೆ 2022ರ ಜೂ.27ರಂದು ನಿರ್ದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಬಿಬಿಎಂಪಿ ವಿಭಾಗೀಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಿತ್ತು.
ಮೇಲ್ಮನವಿ ಅರ್ಜಿ ವಿಚಾರಣೆ ನಡಿಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಲೆ ಅವರ ನೇತೃತ್ವದ ವಿಭಾಗೀಯ ಪೀಠವು ಕಾಮಗಾರಿ ಪೂರ್ಣಗೊಳಿಸಲು ಮೆ.ಶಕ್ತಿ ಡೆವಲಪರ್ಸ್ ಲಿಮಿಟೆಡ್ಗೆ ಅನುಮತಿ ನೀಡಿದೆ. ನಿಗದಿತ ಅವಧಿಯಲ್ಲಿ ಸ್ಕೈವಾಕ್ ಅಳವಡಿಕೆ ಕಾಮಗಾರಿ ಪೂರ್ಣಗೊಳಿಸಿಲ್ಲ ಎಂದು ಹೇಳಿ ಗುತ್ತಿಗೆಯನ್ನು ಬಿಬಿಎಂಪಿ ರದ್ದುಪಡಿಸಿದೆ.
ವಾಸ್ತವವಾಗಿ ಸರ್ಕಾರಿ ಪ್ರಾಧಿಕಾರಿಗಳಿಂದಲೇ ಕಾಮಗಾರಿ ವಿಳಂಬವಾಗಿದೆ. ಈ ಕಾರಣ ಪರಿಗಣಿಸಿಯೇ ಏಕ ಸದಸ್ಯ ನ್ಯಾಯಪೀಠವು ಸ್ಕೈವಾಕ್ ಅಳವಡಿಕೆಗೆ ಅನುಮತಿ ನೀಡಿದೆ. ಹೈಕೋರ್ಟ್ ಆದೇಶದ ನಂತರ ಗುತ್ತಿಗೆದಾರ ಕಂಪನಿ ಕಾಮಗಾರಿ ಆರಂಭಿಸಿದೆ.
ಅಲ್ಲದೆ, ಈಗಾಗಲೇ ಶೇ.80ರಷ್ಟು ಕಾಮಗಾರಿ ಪೂರ್ಣಗೊಳಿಸಿದ್ದು, ಅದಕ್ಕೆ ಸಂಬಂಧಿಸಿದ ಫೋಟೋಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಲಿಫ್ಟ್ ಅಳವಡಿಕೆ ಬಾಕಿಯಿದ್ದು, ಅದರ ಪರಿಶೀಲನೆ ನಡೆಸಲು ಬಿಬಿಎಂಪಿಗೆ ಕಂಪನಿ ಪತ್ರ ಸಹ ಬರೆದಿದೆ.
ಈ ಹಂತದಲ್ಲಿ ಸ್ಕೈವಾಕ್ ಅಳವಡಿಕೆಯನ್ನು ನಿಲ್ಲಿಸಬಾರದು. ಸ್ಕೈವಾಕ್ ಪೂರ್ಣಗೊಳಿಸಿದರೆ ಸಾರ್ವಜನಿಕರಿಗೆ ಉಪಯೋಗವಾಗಲಿದೆ ಎಂದು ತಿಳಿಸಿದ ವಿಭಾಗೀಯ ನ್ಯಾಯಪೀಠ ಬಿಬಿಎಂಪಿಯ ಮೇಲ್ಮನವಿ ವಜಾಗೊಳಿಸಿ ಆದೇಶಿಸಿದೆ.
ಸದಾ ಸಂಚಾರ ದಟ್ಟಣೆ ಇರುವುದರಿಂದ ಪಾದಚಾರಿಗಳು ರಸ್ತೆ ದಾಟಲು ಹರಸಾಹಸ ಮಾಡಬೇಕಿದ್ದ ಕಾರಣ ಪರಿಗಣಿಸಿದ್ದ ಬಿಬಿಎಂಪಿ, ಸ್ಯಾಟಿಲೈಟ್ ಬಸ್ ನಿಲ್ದಾಣದಿಂದ ರಮಣಿ ಟಿಂಬರ್ ಮಾರ್ಕ್‌ವರೆಗೆ ಮತ್ತು ಗಾಳಿ ಆಂಜನೇಯ ದೇವಸ್ಥಾನದ ಬಳಿ ಪ್ರತ್ಯೇಕ ಎರಡು ಸ್ಕೈವಾಕ್ ನಿರ್ಮಿಸಲು 2017ರಲ್ಲಿ ಗುತ್ತಿಗೆ ನೀಡಿತ್ತು.
ಸ್ಯಾಟಿಲೈಟ್ ಬಸ್ ನಿಲ್ದಾಣ-ರಮಣಿ ಟಿಂಬರ್ ಮಾರ್ಕ್ ಸ್ಕೈವಾಕ್‌ಗೆ ಆಕ್ಷೇಪ ವ್ಯಕ್ತಪಡಿಸಿದ್ದ ಕೆಎಸ್‌ಆರ್‌ಟಿಸಿ ಮತ್ತು ಸಂಚಾರ ಪೊಲೀಸರು, ಬಿಎಂಟಿಸಿ ಸಬ್ ವೇ ಪ್ರವೇಶದ್ವಾರದ ಬಳಿ ಸ್ಕೈವಾಕ್ ಅಳವಡಿಕೆಗೆ 2018ರ ಸೆಪ್ಟೆಂಬರ್‌ನಲ್ಲಿ ಅನುಮತಿ ನೀಡಿದ್ದವು. ಅದಕ್ಕೆ ಬಿಬಿಬಿಎಂಪಿ ನಿರಾಕ್ಷೇಪಣಾ ಪತ್ರವನ್ನೂ ನೀಡಿತ್ತು.
ಆ ನಂತರ 2019ರ ಸೆಪ್ಟೆಂಬರ್‌ನಲ್ಲಿ ಗುತ್ತಿಗೆ ರದ್ದುಪಡಿಸಿದ್ದ ಬಿಬಿಎಂಪಿ, ಗಾಳಿ ಆಂಜನೇಯ ಬಳಿ ಸ್ಕೈವಾಕ್ ಇರುವುದರಿಂದ ಸ್ಯಾಟಿಲೈಟ್ ಬಸ್ ನಿಲ್ದಾಣದ ಬಳಿ ಸ್ಕೈವಾಕ್ ಅಳವಡಿಕೆ ಬೇಡ ಎಂಬುದಾಗಿ ನ್ಯಾಯಾಲಯಕ್ಕೆ ತಿಳಿಸಿತ್ತು. ಆ ಮೂಲಕ ಮೊದಲು ಕೈಗೊಂಡ ನಿರ್ಧಾರಕ್ಕೆ ಬಿಬಿಎಂಪಿಯೇ ಉಲ್ಟಾ ಹೊಡೆದಿದೆ. ಈ ಧೋರಣೆಯನ್ನು ಒಪ್ಪಲಾಗದು ಎಂದು ವಿಭಾಗೀಯ ಪೀಠ ಆದೇಶದಲ್ಲಿ ಕಠಿಣವಾಗಿ ನುಡಿದಿದೆ.
ಇದನ್ನೂ ಓದಿ: ಮುರುಘಾ ಮಠ ಪ್ರಕರಣ: ಕ್ರಮ ಕೈಗೊಂಡ ವರದಿ ನೀಡುವಂತೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ನಿರ್ದೇಶನ