ಬೆಂಗಳೂರು: ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ನಲ್ಲಿ ಸಲ್ಲಿಸಿರುವ ಅರ್ಜಿ ಡಿಸೆಂಬರ್ 15 ರಂದು ವಿಚಾರಣೆ ನಡೆಯುವುದರಿಂದ ಚುನಾವಣೆಯನ್ನು ಮೂರು ತಿಂಗಳ ಕಾಲ ಮುಂದೂಡುವಂತೆ ಕೋರಿ ಸಲ್ಲಿಸಿರುವ ಅರ್ಜಿಯನ್ನು ಹೈಕೋರ್ಟ್ ಜನವರಿ 9 ಕ್ಕೆ ಮುಂದೂಡಿದೆ.
ಪಾಲಿಕೆಯ 243 ವಾರ್ಡ್ಗಳಿಗೆ ನವೆಂಬರ್ 30ರೊಳಗೆ ಮೀಸಲಾತಿ ನಿಗದಿಪಡಿಸಬೇಕು ಹಾಗೂ ಡಿಸೆಂಬರ್ 31ರೊಳಗೆ ಚುನಾವಣೆ ನಡೆಸಬೇಕು ಎಂದು 2022ರ ಸೆಪ್ಟೆಂಬರ್ 30ರಂದು ಹೈಕೋರ್ಟ್ ಆದೇಶ ನೀಡಿತ್ತು. ಈ ಆದೇಶ ಪಾಲನೆಗೆ ಮೂರು ತಿಂಗಳ ಕಾಲ ಅವಧಿ ವಿಸ್ತರಿಸುವಂತೆ ಕೋರಿ ನಗರಾಭಿವೃದ್ಧಿ ಇಲಾಖೆ ಸಲ್ಲಿಸಿದ್ದ ಮಧ್ಯಂತರ ಅರ್ಜಿ ವಿಚಾರಣೆ ನ್ಯಾಯಮೂರ್ತಿ ಹೇಮಂತ್ ಚಂದನಗೌಡ್ರ ಅವರ ನೇತೃತ್ವದ ಏಕಸದಸ್ಯ ಪೀಠ, ವಿಚಾರಣೆ ಮುಂದೂಡಿತು.
ಚುನಾವಣಾ ಆಯೋಗ ಪರ ವಕೀಲ ಕೆ ಎನ್ ಫಣೀಂದ್ರ, ಬಿಬಿಎಂಪಿಗೆ ಚುನಾವಣೆ ನಡೆಸುವುದರ ಕುರಿತು ಈ ಹಿಂದೆ ಸರ್ವೋಚ್ಚ ನ್ಯಾಯಾಲಯವು ಆದೇಶ ಮಾಡಿರುವುದಕ್ಕೆ ಸಂಬಂಧಿಸಿದಂತೆ ಆಯೋಗದ ಪರವಾಗಿ ಮನವಿ ಮಾಡಲಾಗಿದೆ. ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್ ಆದೇಶ ಪಾಲನೆಗೆ ಸಂಬಂಧಿಸಿದಂತೆ ಅಫಿಡವಿಟ್ ಸಲ್ಲಿಸಿದೆ. ಈ ಸಂಬಂಧದ ಅರ್ಜಿ ವಿಚಾರಣೆಯು ನಾಳೆ (ಡಿ.15) ಸರ್ವೋಚ್ಚ ನ್ಯಾಯಾಲಯದಲ್ಲಿ ಬರಲಿದೆ. ಹೀಗಾಗಿ, ಅರ್ಜಿ ವಿಚಾರಣೆ ಮುಂದೂಡಬೇಕು ಎಂದು ಕೋರಿದರು. ಇದನ್ನು ಪರಿಗಣಿಸಿದ ನ್ಯಾಯಾಲಯವು ರಾಜ್ಯ ಸರ್ಕಾರದ ಅರ್ಜಿಯ ವಿಚಾರಣೆಯನ್ನು ಜನವರಿ 9ಕ್ಕೆ ಮುಂದೂಡಿತು.
ಇದನ್ನೂ ಓದಿ: ಬಿಬಿಎಂಪಿ ಚುನಾವಣೆ ನಡೆಸಿ, ಬೆಂಗಳೂರು ಉಳಿಸಿ: ನಾಳೆಯಿಂದ ಆಪ್ ಬೃಹತ್ ಸಹಿ ಸಂಗ್ರಹ ಅಭಿಯಾನ