ಬೆಂಗಳೂರು: ಕೊರೊನಾ ಸೋಂಕು ವೇಗವಾಗಿ ಹರಡುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಹೈಕೋರ್ಟ್, ರಾಜ್ಯದಲ್ಲಿ ಸೋಂಕು ನಿಯಂತ್ರಿಸಲು ಹಾಗೂ ಚಿಕಿತ್ಸೆಗೆ ಲಭ್ಯವಿರುವ ಹಾಸಿಗೆ, ಔಷಧಿ, ಆ್ಯಂಬುಲೆನ್ಸ್ ಮತ್ತು ಆಕ್ಸಿಜೆನ್ ವ್ಯವಸ್ಥೆಗಳ ಬಗ್ಗೆ ಮಾಹಿತಿ ನೀಡುವಂತೆ ಸರ್ಕಾರಕ್ಕೆ ನಿರ್ದೇಶಿಸಿದೆ.
ಕೋವಿಡ್ ನಿಯಂತ್ರಣ ಮತ್ತು ನಿರ್ವಹಣೆಗೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ಸರ್ಕಾರಕ್ಕೆ ಈ ಸೂಚನೆ ನೀಡಿತು.
ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆಯಲ್ಲಿ ಕ್ಷಿಪ್ರಗತಿಯಲ್ಲಿ ಹರಡುತ್ತಿದೆ. ಜನ ಆಸ್ಪತ್ರೆಗಳ ಮುಂದೆ ಕ್ಯೂ ನಿಲ್ಲುತ್ತಿದ್ದಾರೆ. ಕೊರೊನಾ ಸೋಂಕಿತ ಹೈಕೋರ್ಟ್ ಸಿಬ್ಬಂದಿಗಳಿಗೂ ಹಾಸಿಗೆ ಸಿಗುತ್ತಿಲ್ಲ.
ಸೋಂಕಿತರಿಗೆ ಸಕಾಲಕ್ಕೆ ಸೂಕ್ತ ಚಿಕಿತ್ಸೆ ಕಲ್ಪಿಸಬೇಕಾಗುತ್ತದೆ. ಆದ್ದರಿಂದ ರಾಜ್ಯದಲ್ಲಿ ಲಭ್ಯವಿರುವ ಹಾಸಿಗೆ, ಆಕ್ಸಿಜನ್, ಔಷಧಿ ಮತ್ತು ಆ್ಯಂಬುಲೆನ್ಸ್ ವ್ಯವಸ್ಥೆಯ ಬಗ್ಗೆ ನಾಳೆಯೇ ಮಾಹಿತಿ ನೀಡಬೇಕು. ಖಾಸಗಿ ಆಸ್ಪತ್ರೆಗಳ ಶುಲ್ಕದ ಬಗ್ಗೆಯೂ ವಿವರ ಸಲ್ಲಿಸಬೇಕು ಎಂದು ಸರ್ಕಾರಕ್ಕೆ ಸೂಚಿಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರೊಬ್ಬರು, ಕೊರೊನಾ ಸೋಂಕಿನಿಂದ ಮೃತಪಟ್ಟವರ ಅಂತ್ಯಕ್ರಿಯೆಗೆ ತೀವ್ರ ಸಮಸ್ಯೆಯಾಗಿದೆ. ಕೆಲವೆಡೆ ಅಂತ್ಯಕ್ರಿಯೆ ನಡೆಸಲು ಸಾವಿರಾರು ರುಪಾಯಿ ವಸೂಲಿ ಮಾಡುತ್ತಿರುವ ಕುರಿತು ಮಾಧ್ಯಮಗಳು ವರದಿ ಮಾಡಿವೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಕೊರೊನಾ ಸೋಂಕಿನಿಂದ ಮೃತಪಟ್ಟವರ ಅಂತ್ಯಕ್ರಿಯೆಗೆ ಕಲ್ಪಿಸಲಾಗಿರುವ ವ್ಯವಸ್ಥೆ ಬಗ್ಗೆಯೂ ಮಾಹಿತಿ ನೀಡುವಂತೆ ಸರ್ಕಾರಕ್ಕೆ ಸೂಚಿಸಿತು.
ಇನ್ನು ಕೋವಿಡ್ ವಿಚಾರವಾಗಿ ಪ್ರತಿಯೊಬ್ಬರೂ ನ್ಯಾಯಾಲಯಕ್ಕೆ ಬರುವುದನ್ನು ತಪ್ಪಿಸಲು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಲು ಸಾಧ್ಯವೇ? ಎಂದು ಸರ್ಕಾರದ ಪರ ವಕೀಲರನ್ನು ಪ್ರಶ್ನಿಸಿದ ಪೀಠ, ಒಂದು ವೇಳೆ ಸಮಿತಿ ರಚನೆಯಾದರೆ ಕೋವಿಡ್ ವಿಚಾರದಲ್ಲಿ ಎದುರಿಸುವ ಸಮಸ್ಯೆಗಳ ಬಗ್ಗೆ ಜನ ಸಮಿತಿಯ ಗಮನಕ್ಕೆ ತರಬಹುದು. ಕೂಡಲೇ ಪರಿಹಾರ ಕಂಡುಕೊಳ್ಳಲು ಅನುಕೂಲವಾಗಬಹುದು ಎಂದಿತು.
ಮುಖ್ಯವಾಗಿ ನಾಗರಿಕರು ತಮ್ಮ ಕಷ್ಟ ಹೇಳಿಕೊಳ್ಳಲು ಸೂಕ್ತ ವೇದಿಕೆ ಕಲ್ಪಿಸಬೇಕು. ಹೆಲ್ಪ್ ಲೈನ್ಗಳನ್ನು ಮರು ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರ ಮತ್ತು ಬಿಬಿಎಂಪಿಗೆ ಹೈಕೋರ್ಟ್ ಸಲಹೆ ನೀಡಿತು.