ಬೆಂಗಳೂರು: ಬಂಗಾಳ ಉಪಸಾಗರದ ಒಡಿಶಾ ಹಾಗೂ ಆಂಧ್ರಪ್ರದೇಶದ ಕರಾವಳಿಯಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ಕರ್ನಾಟಕ ಹಾಗೂ ಕೇರಳ ಕರಾವಳಿಯಲ್ಲಿ ಕಡಿಮೆ ಒತ್ತಡವಿರುವ ವಿಸ್ತರಿಸಿದ ಪ್ರದೇಶವಿದೆ. ಈ ಪ್ರಭಾವದಿಂದ ರಾಜ್ಯಾದ್ಯಂತ ವ್ಯಾಪಕ ಮಳೆಯಾಗುವ ಮುನ್ಸೂಚನೆ ಇದ್ದು, ಕರಾವಳಿ ಹಾಗೂ ಒಳನಾಡು ಸೇರಿದಂತೆ 12 ಜಿಲ್ಲೆಗಳಲ್ಲಿ ಹೈ-ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆಯ ಪ್ರಾದೇಶಿಕ ನಿರ್ದೇಶಕ ಸಿ.ಎಸ್. ಪಾಟೀಲ್ ತಿಳಿಸಿದರು.
ಆಗಸ್ಟ್ 29ರಿಂದ ಸೆಪ್ಟೆಂಬರ್ 1ರವರೆಗೆ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ವ್ಯಾಪಕ ಮಳೆಯಾಗುವ ಹೆಚ್ಚಿನ ಸಾಧ್ಯತೆಯಿದೆ. ಉತ್ತರ ಒಳನಾಡಿನಲ್ಲಿ ಬಹುತೇಕ ಎಲ್ಲಾ ಕಡೆ ಮಳೆಯಾಗುವ ಸಾಧ್ಯತೆಯಿದೆ ಎಂದು ಪಾಟೀಲ್ ಮಾಹಿತಿ ನೀಡಿದ್ದಾರೆ.
ಆರೆಂಜ್, ಯೆಲ್ಲೋ ಅಲರ್ಟ್:
ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಭಾರಿ ಹಾಗೂ ಅತಿ ಹೆಚ್ಚು ಮಳೆ ನಿರೀಕ್ಷಿಸಲಾಗಿದೆ. ಆಗಸ್ಟ್ 29ರಂದು ಆರೆಂಜ್ ಅಲರ್ಟ್ ಹಾಗೂ ಆಗಸ್ಟ್ 30ರಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಕಲಬುರಗಿ, ಯಾದಗಿರಿ ಹಾಗೂ ಬೀದರ್ ಜಿಲ್ಲೆಗಳಲ್ಲಿ ಭಾರಿ ಮಳೆ ನಿರೀಕ್ಷಿಸಲಾಗಿದ್ದು, ಆಗಸ್ಟ್ 29 ಹಾಗೂ 30ರಂದು ಯೆಲ್ಲೋ ಅಲರ್ಟ್ ಕೊಡಲಾಗಿದೆ ಎಂದು ಹೇಳಿದರು.
ರಾಜ್ಯಾದ್ಯಂತ ಶನಿವಾರ ನೈರುತ್ಯ ಮುಂಗಾರು ಚುರುಕಾಗಿತ್ತು. ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ವ್ಯಾಪಕ ಮಳೆಯಾಗಿದ್ದು, ಉತ್ತರ ಒಳನಾಡಿನಲ್ಲಿ ಬುಹುತೇಕ ಎಲ್ಲ ಸ್ಥಳಗಳಲ್ಲಿ ಮಳೆಯಾಗಿದೆ. ಉಡುಪಿಯ ಬ್ರಹ್ಮಾವರದಲ್ಲಿ 13 ಸೆಂ.ಮೀ, ದಕ್ಷಿಣ ಕನ್ನಡದ ಸುಬ್ರಹ್ಮಣ್ಯಯಲ್ಲಿ 10 ಸೆಂ.ಮೀ, ಶಿವಮೊಗ್ಗದ ಆಗುಂಬೆಯಲ್ಲಿ 8 ಸೆಂ.ಮೀ., ಉಡುಪಿಯ ಕಾರ್ಕಳ, ಕೊಡಗಿನ ಭಾಗಮಂಡಲದಲ್ಲಿ ತಲಾ 7 ಸೆಂ.ಮೀ, ದಕ್ಷಿಣ ಕನ್ನಡದ ಮಣಿ, ಉತ್ತರ ಕನ್ನಡದ ಶಿರಾಲಿ, ಚಿಕ್ಕಮಗಳೂರಿನ ಕೊಟ್ಟಿಗೆಹಾರದಲ್ಲಿ ತಲಾ 6 ಸೆಂ.ಮೀ, ಮಂಗಳೂರು, ದಕ್ಷಿಣ ಕನ್ನಡದ ಸುಳ್ಯ, ಉತ್ತರ ಕನ್ನಡದ ಭಟ್ಕಳ, ಮಂಕಿ ಹಾಗೂ ಕದ್ರಾ, ಉಡುಪಿಯ ಕುಂದಾಪುರದಲ್ಲಿ ತಲಾ 5 ಸೆಂ.ಮೀ ಮಳೆಯಾಗಿದೆ ಎಂದು ಸಿ.ಎಸ್. ಪಾಟೀಲ್ ಮಾಹಿತಿ ನೀಡಿದ್ದಾರೆ.
ರಾಜಧಾನಿಯಲ್ಲಿ ಮುಂದಿನ ಎರಡು ದಿನ ಮಳೆ:
ಬೆಂಗಳೂರಿನಲ್ಲಿ ಮುಂದಿನ ಎರಡು ದಿನ ಮಳೆಯಾಗುವ ನಿರೀಕ್ಷೆಯಿದೆ. ಗರಿಷ್ಠ ಉಷ್ಣಾಂಶ 27 ಹಾಗೂ ಕನಿಷ್ಠ ಉಷ್ಣಾಾಂಶ 20 ಡಿ.ಸೆ. ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇದನ್ನೂ ಓದಿ: ಆರೋಪಿಗಳು ಮೈಸೂರಿಗೆ ಬಂದಿದ್ದೇಕೆ? ರೇಪ್ ಎಸಗಿದ್ದು ಯಾಕೆ? ಚಾಮುಂಡಿ ಬೆಟ್ಟದ ಬಳಿ ನಡೆದ ಆ ಘೋರ ಕೃತ್ಯದ ಕಂಪ್ಲೀಟ್ ಡಿಟೇಲ್ಸ್