ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಗುಡುಗು ಸಹಿತ ಜೋರು ಮಳೆಯಾಗಲಿದೆ. ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಿಗೆ ಇಂದಿನಿಂದ ಮೂರು ದಿನಗಳ ಕಾಲ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆಯ ತಜ್ಞ ಎ. ಪ್ರಕಾಶ್ ಮಾಹಿತಿ ನೀಡಿದ್ದಾರೆ.
ಎಲ್ಲೆಲ್ಲಿ ಮಳೆ?: ರಾಜ್ಯದ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಚಿಕ್ಕಮಗಳೂರು, ಹಾಸನ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ಚಿತ್ರದುರ್ಗ, ಚಾಮರಾಜನಗರ, ಕೊಡುಗು, ಮೈಸೂರು ಹಾಗೂ ತುಮಕೂರು ಜಿಲ್ಲೆಗಳಲ್ಲಿ ಮೇ 3ರ ವರೆಗೆ ಭಾರಿ ಮಳೆ ಸುರಿಯಲಿದೆ ಎಂದು ಅವರು ತಿಳಿಸಿದ್ದಾರೆ.
ಭಾರಿ ಮಳೆ ಹಿನ್ನೆಲೆಯಲ್ಲಿ ದಕ್ಷಿಣ ಒಳನಾಡಿನ ಕೆಲವೆಡೆ ಹಾಗೂ ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಉಷ್ಣಾಂಶ ಗಣನೀಯವಾಗಿ ಇಳಿಕೆಯಾಗಿದೆ. ಬೆಂಗಳೂರಿನಲ್ಲಿಂದು ಸಂಜೆಯ ವೇಳೆ ಗುಡುಗು ಸಹಿತ ಮಳೆಯಾಗಲಿದೆ. ಗಾಳಿಯ ವೇಗವು 30 ರಿಂದ 40 ಕಿ.ಮೀ ಇರಲಿದೆ. ಮೂರು ದಿನ ಇದೇ ರೀತಿಯ ವಾತಾವರಣ ಮುಂದುವರೆಯಲಿದೆ ಎಂದು ಅವರು ವಿವರಿಸಿದ್ದಾರೆ.
ಭಾನುವಾರದ ಮಳೆ ವಿವರ: ದಕ್ಷಿಣ ಒಳನಾಡು, ಉತ್ತರ ಒಳನಾಡು ಹಾಗೂ ಕರಾವಳಿಯ ಕೆಲವೆಡೆ ನಿನ್ನೆ ಜೋರು ಮಳೆಯಾಗಿತ್ತು. ಹಾಸನದ ಕೊನೂರಿನಲ್ಲಿ 8 ಸೆಂ.ಮೀ, ಯಾದಗಿರಿಯ ಕಕೇರಿಯಲ್ಲಿ 7, ಚಿಕ್ಕಮಗಳೂರಿನ ಶಿವಾನಿಯಲ್ಲಿ 6, ವಿಜಯಪುರದ ಆಲಮಟ್ಟಿ, ಚಿತ್ರದುರ್ಗದ ಹೊಸದುರ್ಗ, ತುಮಕೂರಿನ ಗುಬ್ಬಿ, ಮಂಡ್ಯದ ಶ್ರೀರಂಗಪಟ್ಟಣದಲ್ಲಿ ತಲಾ 5 ಸೆಂ.ಮೀ ಮಳೆಯಾಗಿದೆ.
ತಾವರಗೇರಾ, ಸಿಂಧನೂರು, ಮುದಗಲ್, ಶೋರಾಪುರ, ಕುಡತಿನಿ, ಶ್ರವಣಬೆಳಗೊಳದಲ್ಲಿ ತಲಾ 4, ಸುಳ್ಯ, ನಾರಾಯಣಪುರ, ಕವಡಿಮಟ್ಟಿ, ಹುಣಸಗಿ, ಇಳಕಲ್, ಬಾದಾಮಿ, ರಾಯಚೂರಿನ ಜಾಲಹಳ್ಳಿ, ಪೊನ್ನಂಪೇಟೆ, ಭಾಗಮಂಡಲ, ಹುಣಸೂರು, ಕಮ್ಮರಡಿ, ಅರಕಲಗೂಡು, ಕೃಷ್ಣರಾಜಸಾಗರ, ಬೆಳ್ಳೂರು, ಬರಗೂರು, ಕುಣಿಗಲ್‌ನಲ್ಲಿ ತಲಾ 3, ಗುತ್ತಲ್, ಬಿಳಗಿ, ಮಸ್ಕಿ, ಮಾನ್ವಿ, ಯಲಬುರ್ಗಾ, ಗಂಗಾವತಿ, ಭಾಲ್ಕಿ, ಬೆಂಗಳೂರು ಓಲ್ಡ್ ಏರ್ಪೋರ್ಟ್, ಚನ್ನರಾಯಪಟ್ಟಣ, ಬೆಂಗಳೂರು ನಗರ, ಬುಕ್ಕಪಟ್ಟಣ, ಶಿವಮೊಗ್ಗ, ಸೋಮವಾರಪೇಟೆ, ಕೊಟ್ಟಿಗೆಹಾರ, ಸರಗೂರಿನಲ್ಲಿ ತಲಾ 2 ಸೆಂಟಿ ಮೀಟರ್ ಮಳೆಯಾಗಿದೆ ಎಂದು ಹವಾಮಾನ ಇಲಾಖೆಯ ತಜ್ಞರು ವಿವರಿಸಿದ್ದಾರೆ.
ಇದನ್ನೂ ಓದಿ: ಬೀದರ್: ಹಳ್ಳ ದಾಟುತ್ತಿದ್ದ ಒಂದೇ ಕುಟುಂಬದ ಮೂವರು ನೀರುಪಾಲು