ಬೆಂಗಳೂರು: ನ್ಯಾಯಾಲಯದ ತಡೆಯಾಜ್ಞೆ ನಡುವೆಯೂ ಬೇಗೂರು ಕೆರೆಯಲ್ಲಿ ಶಿವನ ಪ್ರತಿಮೆ ಸ್ಥಾಪಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ನಡೆಸುತ್ತಿರುವ ತನಿಖಾ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವಂತೆ ಹೈಕೋರ್ಟ್ ಆಗ್ನೇಯ ವಿಭಾಗದ ಡಿಸಿಪಿಗೆ ನಿರ್ದೇಶಿಸಿದೆ.
ಕೆರೆಗಳ ಒತ್ತುವರಿ ತೆರವು ಕೋರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ಅವರಿದ್ದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ. ವಿಚಾರಣೆ ವೇಳೆ ಸರ್ಕಾರದ ಪರ ವಕೀಲರನ್ನು ಪ್ರಶ್ನಿಸಿದ ಪೀಠ, ಹಿಂದಿನ ಆದೇಶದಂತೆ ನಗರ ಪೊಲೀಸ್ ಆಯುಕ್ತರು ವರದಿ ಸಲ್ಲಿಸಿದ್ದಾರೆಯೇ ಎಂದು ಕೇಳಿತು. ಸರ್ಕಾರಿ ವಕೀಲ ವಿಜಯಕುಮಾರ್ ಪಾಟೀಲ್ ಉತ್ತರಿಸಿ, ಆಯುಕ್ತರು ವರದಿ ಸಲ್ಲಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಆ.16ರಂದು ಎಫ್‌ಐಆರ್ ದಾಖಲಿಸಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಪೊಲೀಸರು ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಲು ಸಮಯಬೇಕಾಗುತ್ತದೆ ಎಂದಿತು. ಅಲ್ಲದೆ, ಈ ಸಂಬಂಧ ಆಗ್ನೇಯ ವಲಯ ಡಿಸಿಪಿ ತನಿಖೆಯ ಮೇಲ್ವಿಚಾರಣೆ ನಡೆಸಿ, ಆ.31ರವರೆಗೆ ನಡೆದ ತನಿಖೆಯ ವಿವರಗಳನ್ನು ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಸಿ ಎಂದು ನಿರ್ದೇಶಿಸಿ ವಿಚಾರಣೆಯನ್ನು ಸೆಪ್ಟೆಂಬರ್ 2ಕ್ಕೆ ಮುಂದೂಡಿತು.
ಇದಕ್ಕೂ ಮುನ್ನ ಅರ್ಜಿದಾರರೊಬ್ಬರ ಪರ ವಕೀಲರು ವಾದಿಸಿ, ಕಳೆದ ವಾರ ಆ.11ರಂದು ಬೆಳಗ್ಗೆ ಬಿಬಿಎಂಪಿ ಅನಾವರಣಗೊಂಡಿದ್ದ ಪ್ರತಿಮೆಗೆ ಮತ್ತೆ ಹೊದಿಕೆ ಹೊದಿಸಿತ್ತು. ಆದರೆ, ಅಂದು ಸಂಜೆಯೇ ಕೆಲ ಸಂಘಟನೆಗಳು ಪ್ರತಿಮೆ ಅನಾವರಣಗೊಳಿಸಿದ್ದಾರೆ, ಪ್ರತಿಮೆಗೆ ಹೊದಿಸಿದ್ದ ಹೊದಿಕೆ ತೆಗೆದಿದ್ದಾರೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ನ್ಯಾಯಾಲಯದ ಆದೇಶದ ಹೊರತಾಗಿಯೂ ಈ ರೀತಿ ನಡೆದುಕೊಂಡಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿತು.
ಇದನ್ನೂ ಓದಿ: Video: ಬೆಂಗಳೂರಿನಲ್ಲಿ ಟೋಯಿಂಗ್ ಸಿಬ್ಬಂದಿಗೆ ಹಿಗ್ಗಾಮುಗ್ಗಾ ಹೊಡೆದ ಸಾರ್ವಜನಿಕರು..