ಬೆಂಗಳೂರು: ನಿನ್ನೆ ಪ್ರಕಟಿಸಿದ ನಾಲ್ವರನ್ನು ಹೊರತುಪಡಿಸಿದರೆ, ಬೇರೆ ಯಾವುದೇ ಕೊರೊನಾ ಪ್ರಕರಣ ರಾಜ್ಯದಲ್ಲಿ ಪತ್ತೆಯಾಗಿಲ್ಲ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಲಬುರಗಿಯಲ್ಲಿ ನಿಧನರಾಗಿರುವ 76 ವರ್ಷದ ವೃದ್ದನ ಸಾವಿಗೆ ಕೊರೋನಾ ಕಾರಣ ಎಂದು ಹೇಳಲಾಗದು. ತಪಾಸಣೆ ವರದಿ ಬಂದ ನಂತರ ನಿಖರ ಕಾರಣ ತಿಳಿಸುತ್ತೇವೆ. ಸದ್ಯದ ಪ್ರಕಾರ ಮೃತ ರೋಗಿ ಕೊರೋನಾ ಪೀಡಿತ ಆಗಿದ್ದ ಎನ್ನುವುದಕ್ಕೆ ನಿಖರತೆ ಇಲ್ಲ ಎಂದರು.
ಕಲಬುರಗಿ ವಿವರ...
ಕಲಬುರಗಿ ಪ್ರಕರಣ ವಿವರಿಸಿದ ಸಚಿವರು, ಜನವರಿ ಕೊನೆಯಲ್ಲಿ ಆ ವ್ಯಕ್ತಿ ಸೌದಿ ಅರೇಬಿಯಾಗೆ ತೆರಳಿದ್ದ. ವಾಪಸ್ ಫೆ.29 ಕ್ಕೆ ಬಂದಿದ್ದ. 76 ವರ್ಷದ ವ್ಯಕ್ತಿಗೆ ಜ್ವರ ಇತ್ತು. ಮಾ.5 ರಂದು ಹೈದ್ರಾಬಾದ್ ನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ. ಆತನನ್ನ ಐಸೋಲೇಟೆಡ್ ವಾರ್ಡ್ನಲ್ಲಿ ಇರಿಸಲಾಗಿತ್ತು. ಆತನನ್ನು ಕಲಬುರಗಿಯಿಂದ ಹೈದ್ರಾಬಾದ್ ಗೆ ಕಳಿಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರೋಗಿಗೆ ಕೊರೋನಾ ಇತ್ತೆಂದು ಭಾವಿಸಲಾಗಿತ್ತು. ಆತ ಕೊರೋನಾದಿಂದ ಸಾವನ್ನಪ್ಪಿದ್ದಾನೆ ಎಂಬ ನಿಖರತೆ ಇಲ್ಲ. ವರದಿ ಬಂದ ಮೇಲೆ ಸ್ಪಷ್ಟಪಡಿಸುತ್ತೇವೆ ಎಂದರು.
ಆತಂಕ ಬೇಡ...
ಇದುವರೆಗೂ ರಾಜ್ಯದಲ್ಲಿ 1 ಲಕ್ಷ ಮಂದಿಯನ್ನ ತಪಾಸಣೆ ಮಾಡಿದ್ದೇವೆ. ಕೆಲ ಶಂಕಿತ ವ್ಯಕ್ತಿಗಳು ಇದ್ದರು. 7 ಮಂದಿ ಶಂಕಿತರೆಂದು ಗುರುತಿಸಿದ್ದೆವು. ತಪಾಸಣೆ ನಂತರ ಐವರು ಸಮಸ್ಯೆ ಇಲ್ಲದೇ ಬಿಡುಗಡೆ ಆಗಿದ್ದಾರೆ. ಅನುಮಾನಾಸ್ಪದ ಇಬ್ಬರು ವ್ಯಕ್ತಿಗಳನ್ನು ಐಸೋಲೇಟೆಡ್ ಮಾಡಿ ಇಟ್ಟಿದ್ದೇವೆ. ವರದಿ ಇನ್ನೂ ಬಂದಿಲ್ಲ ಹಾಗಾಗಿ ಯಾವುದೇ ಆತಂಕ ಬೇಡ ಎಂದರು.