ಬೆಂಗಳೂರು :ಮಾಮುಲಿ ಕೊಟ್ಟಿಲ್ಲ ಎಂದು ಕೋಪಗೊಂಡು ವ್ಯಕ್ತಿಯೊಬ್ಬರ ಮೇಲೆ ಚಾಕುವಿನಿಂದ ಹಲ್ಲೆ ಮಾಡಿರುವ ಘಟನೆ ನಡೆದಿದೆ. ಪಾರ್ಕಿಂಗ್ ಟೆಂಡರ್ ಕೊಡಿಸಿದ ವಿಚಾರಕ್ಕಾಗಿ ಮಾಮುಲಿ ಹಣ ಕೊಟ್ಟಿಲ್ಲ ಎಂದು ಅಸಮಾಧಾನಗೊಂಡು ಹಲ್ಲೆ ನಡೆಸಿದ್ದು ಈ ಸಂಬಂಧ ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಲ್ಲಂಗಡಿ ಹಣ್ಣು ವ್ಯಾಪಾರಿ ಉಸ್ಮಾನ್ ಖಾನ್ ಹಲ್ಲೆಗೊಳಗಾಗಿರುವ ವ್ಯಕ್ತಿ.
ವಿಜಿನಾಪುರದಲ್ಲಿ ವಾಸವಾಗಿರುವ ಉಸ್ಮಾನ್ ಕೆ.ಆರ್.ಪುರ ಬಸ್ ಡಿಪೊ ಬಳಿ ಕಲ್ಲಂಗಡಿ ಹಣ್ಣು ವ್ಯಾಪಾರಿಯಾಗಿದ್ದ. ಕೆ.ಆರ್.ಪುರಂ ರೈಲ್ವೇ ನಿಲ್ದಾಣದ ಪಾರ್ಕಿಂಗ್ ಗುತ್ತಿಗೆಯನ್ನು ಉಸ್ಮಾನ್ ಸ್ನೇಹಿತ ಅಫೀಜ್ ಎಂಬಾತ ವಹಿಸಿಕೊಂಡಿದ್ದ. ಇದೇ ವಿಚಾರಕ್ಕಾಗಿ ಪರಿಚಯಸ್ಥನಾಗಿದ್ದ ಆರೋಪಿ ಸಮ್ಮು ಅಂಗಡಿ ಬಳಿ ಹೋಗಿ ಹಣಕ್ಕಾಗಿ ಪೀಡಿಸುತ್ತಿದ್ದ.
ಆರೋಪಿಯಿಂದ ಕೊಲೆ ಬೆದರಿಕೆ :ನಂತರ ಹಣ ನೀಡಲು ನಿರಾಕರಿಸಿದಾಗ ಕಳೆದ ತಿಂಗಳು 25 ರಂದು ಉಸ್ಮಾನ್ ನನ್ನು ಕರೆಯಿಸಿಕೊಂಡು ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಇನ್ನೂ ತೀವ್ರವಾಗಿ ಗಾಯಗೊಂಡಿದ್ದು ಘಟನೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು ದೂರು ನೀಡಿದ್ದಾರೆ. ಇಷ್ಟಾದರೂ ಸುಮ್ಮನಿರದೆ ಆರೋಪಿ ಸಮ್ಮ ಕರೆ ಮಾಡಿ ಬ್ಲ್ಯಾಕ್ ಮೇಲ್ ಮಾಡಿದನಂತೆ. ನನ್ನ ವಿರುದ್ದ ಕೊಟ್ಟಿರುವ ದೂರನ್ನು ವಾಪಸ್ ಪಡೆಯದಿದ್ದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಉಸ್ಮಾನ್ ದೂರಿನಲ್ಲಿ ಆರೋಪಿಸಿದ್ದಾರೆ.
ಡಿವೈಡರ್ ಡಿಕ್ಕಿ ಹೊಡೆದು ಕಾರು ಜಖಂ : ಮತ್ತೊಂದು ಪ್ರಕರಣದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಕಾರು ಡಿಕ್ಕಿ ಹೊಡೆದು ಅಫಘಾತವ ಸಂಭವಿಸಿರುವ ಘಟನೆ ಹೆಬ್ಬಾಳ- ನಾಗವಾರ ಮುಖ್ಯ ರಸ್ತೆಯಲ್ಲಿ ನಡೆದಿದೆ. ಅಪಘಾತ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಈ ವೇಳೆ ಮುಂದೆ ಹೋಗುತ್ತಿದ್ದ ಬೈಕ್ ಸವಾರ ಸ್ಕಿಡ್ ಆಗಿ ಬಿದ್ದು ಗಾಯಗೊಂಡಿದ್ದಾನೆ. ನಿನ್ನೆ ರಾತ್ರಿ 11 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಇಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಸಂಬಂಧ ಹೆಬ್ಬಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಒಂದೇ ರಾತ್ರಿ ಮೂರು ದೇವಾಲಯಗಳಲ್ಲಿ ಕಳ್ಳತನ : ದೊಡ್ಡಬಳ್ಳಾಪುರ ತಾಲೂಕಿನ ಚಿಕ್ಕಹೆಜ್ಜಾಜಿ ಗ್ರಾಮದಲ್ಲಿ ತಡ ರಾತ್ರಿ ಒಂದೇ ದಿನ ಕೆಂಪಾಜಮ್ಮ, ಬಸವಣ್ಣ, ಮಾರಮ್ಮ ದೇವಾಲಯಗಳಲ್ಲಿ ಹುಂಡಿ ಕಳವು ಮಾಡಿ ಕಳ್ಳರು ಪರಾರಿಯಾಗಿದ್ದಾರೆ. ದೇವಾಲಯಗಳ ಬಾಗಿಲುಗಳನ್ನು ಮೀಟಿ ಒಳ ನುಗ್ಗಿರುವ ಕಳ್ಳರು ಹುಂಡಿಗಳನ್ನು ಒಡೆದು ಹಣ ದೋಚಿದ್ದಾರೆ.
ಬಸವಣ್ಣ ದೇವರ ಹುಂಡಿಯಲ್ಲಿ ಒಂದು ಲಕ್ಷ 20ಸಾವಿರ, ಕೆಂಪಾಜಮ್ಮ ದೇವರ ಹುಂಡಿಯಲ್ಲಿ ಒಂದು ಲಕ್ಷ ಎಗರಿಸಿದ ಕಳ್ಳರು. ಕೆಂಪಾಜಮ್ಮ ಮತ್ತು ಬಸವಣ್ಣ ದೇವಾಲಯದಲ್ಲಿ ಇದ್ದ ಸಿಸಿಟಿವಿ ಕೇಬಲ್ ಕಟ್ ಮಾಡಿ ಕಳ್ಳತನ ಮಾಡಿದ್ದಾರೆ. ಇಂದು ಬೆಳಗ್ಗೆ 7ಗಂಟೆ ಸಮಯದಲ್ಲಿ ದೇವಾಲಯದ ಬಳಿ ಹೋದ ಗ್ರಾಮಸ್ಥರಿಗೆ ಕಳ್ಳತನ ಕೃತ್ಯ ಕಂಡಿದೆ. ಈ ಸಂಬಂಧ ದೊಡ್ಡಬೆಳವಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ :ದೇವಸ್ಥಾನದಲ್ಲಿ ಹಣ ಕದಿಯಲು ಮುಂದಾದ ಕಳ್ಳ.. ಗ್ರಾಮಸ್ಥರಿಂದ ಗೂಸಾ