ಬೆಂಗಳೂರು: ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಪಿಎಸ್‌ಐ ಕಿರಣ್ ಕುಮಾರ್ ಆತ್ಮಹತ್ಯೆ ಪ್ರಕರಣವನ್ನು ಸರ್ಕಾರ ಉನ್ನತಮಟ್ಟದ ತನಿಖೆಗೆ ತಕ್ಷಣ ಆದೇಶಿಸಬೇಕೆಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಪೊಲೀಸರು ಮತ್ತು ಹಿರಿಯ ಪೊಲೀಸ್ ಸಿಬ್ಬಂದಿ ಜೀವದ ಹಂಗು ತೊರೆದು ಹೋರಾಟ ಮಾಡುವ ಸಂದರ್ಭ ಅವರ ಆತ್ಮಾಭಿಮಾನ, ಸ್ವಾಭಿಮಾನಕ್ಕೆ ಧಕ್ಕೆ ತರುವಂತೆ ಹಿರಿಯ ಅಧಿಕಾರಿಗಳು ಕಿರುಕುಳ ನೀಡಿದ್ದೇ ಪಿಎಸ್ಐ ಆತ್ಮಹತ್ಯೆಗೆ ಕಾರಣ ಎಂದು ಮೇಲ್ನೋಟಕ್ಕೆ ಗೊತ್ತಾಗಿದೆ ಎಂದಿದ್ದಾರೆ.
ಈ ಪ್ರಕರಣದ ಮುಕ್ತ ತನಿಖೆಗೆ ಆದೇಶಿಸುವ ಮೂಲಕ ಕಿರಿಯ ಹಂತದ ಪೊಲೀಸ್ ಅಧಿಕಾರಿಗಳಲ್ಲಿ ನೈತಿಕ ಸ್ಥೈರ್ಯ ತುಂಬುವ ಕೆಲಸವನ್ನು ಸರ್ಕಾರ ಮಾಡಬೇಕು. ಈ ಹಿಂದೆ ಗಣಪತಿ ಭಟ್, ಮಲ್ಲಿಕಾರ್ಜುನ ಬಂಡೆ, ಕಲ್ಲಪ್ಪ ಹಂಡಿಬಾಗ್ ಅವರ ಅಕಾಲಿಕ ಸಾವು ಮತ್ತು ಅನುಪಮಾ ಶೆಣೈ ಅವರ ರಾಜೀನಾಮೆ ವೇಳೆ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ರಾಜ್ಯದಾದ್ಯಂತ ಜಾಗಟೆ ಬಾರಿಸಿದ್ದ ಬಿಜೆಪಿ ಈಗ ಮೌನಕ್ಕೆ ಶರಣಾಗಿದೆ ಎಂದು ದೂರಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡ ಕಿರಣ್ ಕುಮಾರ್ ಅವರ ಮೊಬೈಲ್ ಫೋನನ್ನು ಹಿರಿಯ ಪೊಲೀಸ್ ಅಧಿಕಾರಿಗಳು ಜಪ್ತಿ ಮಾಡಿರುವುದು ಹಲವು ಶಂಕೆಗಳಿಗೆ ಎಡೆಮಾಡಿಕೊಟ್ಟಿದೆ. ಇವರ ಸಾವಿಗೆ ಆಯಕಟ್ಟಿನ ಜಾಗದಲ್ಲಿ ಕುಳಿತ ಹಿರಿಯ ಪೊಲೀಸ್ ಅಧಿಕಾರಿಗಳ ದೌರ್ಜನ್ಯ ಹಾಗೂ ಬೆದರಿಕೆ ತಂತ್ರ ಕಾರಣ ಎಂಬ ಮಾಹಿತಿ ನನಗಿದೆ.
ಬೇರೆ ಪಕ್ಷಗಳ ಆಡಳಿತಾವಧಿಯಲ್ಲಿ ಅಧಿಕಾರಿಗಳ ನಿಗೂಢ ಸಾವಿಗೆ ಸರ್ಕಾರವೇ ಕಾರಣ ಎಂದು ಬೊಬ್ಬೆ ಹಾಕಿದ್ದ ಬಿಜೆಪಿ ವರ್ಷದಿಂದ ಆಡಳಿತ ಚುಕ್ಕಾಣಿ ಹಿಡಿದಿದೆ. ಈಗ ಪಿಎಸ್ಐ, ಇದಕ್ಕೂ ಮುನ್ನ ಐಎಎಸ್ ಅಧಿಕಾರಿ, ಕಳೆದ ವರ್ಷ ಐಎಫ್ಎಸ್ ಅಧಿಕಾರಿ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಸರ್ಕಾರ ದಿವ್ಯ ಮೌನಕ್ಕೆ ಶರಣಾಗಿರುವುದು ಸರಿಯಲ್ಲ ಎಂದಿದ್ದಾರೆ.
ಈ ಹಿಂದೆ ಪೊಲೀಸ್ ಅಧಿಕಾರಿಗಳು ಆತ್ಮಹತ್ಯೆಗೆ ಶರಣಾದಾಗ ನ್ಯಾಯಸಮ್ಮತ ತನಿಖೆಗೆ ಒತ್ತಡ ಹೇರುತ್ತಿದ್ದ ಬಿಜೆಪಿ ಈ ಬಗ್ಗೆ ನಿಷ್ಪಕ್ಷಪಾತ ತನಿಖೆಗೆ ತಕ್ಷಣ ಆದೇಶ ನೀಡಬೇಕು. ಯಾವುದೇ ಇಲಾಖೆಯಲ್ಲಿಯೂ ಪ್ರಾಮಾಣಿಕ ಅಧಿಕಾರಿಗಳು ಕಿರುಕುಳಕ್ಕೆ ಒಳಗಾಗದಂತೆ ಎಚ್ಚರವಹಿಸಬೇಕು ಎಂದು ಒತ್ತಾಯಿಸಿದ್ದಾರೆ.