ಬೆಂಗಳೂರು : ಶ್ರೀ ಮಲ್ಲಿಕಾರ್ಜುನನ ಪುಣ್ಯಕ್ಷೇತ್ರ ಹಾಗೂ ಜ್ಯೋತಿರ್ಲಿಂಗ ಕ್ಷೇತ್ರಗಳಲ್ಲಿ ಒಂದು ಶ್ರೀಶೈಲ. ನಮ್ಮೆಲ್ಲರ ಪಾಲಿನ ಶ್ರದ್ಧಾಕೇಂದ್ರ ಅದು. ಅಲ್ಲಿ ನಡೆದ ಸಣ್ಣ ಅಹಿತಕರ ಘಟನೆಯಿಂದ ಭಗವಂತನ ದರ್ಶನಕ್ಕೆ ಭಕ್ತರಿಗೆ ಅಡ್ಡಿಯಾಗುವುದು ಬೇಡ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಆಂಧ್ರ, ತೆಲಂಗಾಣ, ಕರ್ನಾಟಕ ಅಷ್ಟೇ ಅಲ್ಲ ಇಡೀ ದೇಶದ ಪ್ರತಿ ಭಕ್ತನೂ ಶ್ರೀ ಮಲ್ಲಿಕಾರ್ಜುನನ ದರ್ಶನಕ್ಕೆ ತವಕಿಸುತ್ತಾನೆ. ಅಂತಹ ಪಾವನ ಕ್ಷೇತ್ರದಲ್ಲಿ ಹಿಂಸೆ ಬೇಡ. ಭಗವಂತನ ಸನ್ನಿಧಾನದಲ್ಲಿ ಭಕ್ತಿ ಬಿಟ್ಟರೆ ಬೇರೇನೂ ಅಗತ್ಯವಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ಸ್ಥಳೀಯರೊಂದಿಗೆ ಫುಟ್ಬಾಲ್ ಆಡುತ್ತಿರುವ ಆನೆ ಮರಿ: ವಿಡಿಯೋ ನೋಡಿ
ನಾಳೆ ಬೆಳಗ್ಗೆ ಯುಗಾದಿ ಹಬ್ಬ. ತಲೆ ತಲಾಂತರಗಳಿಂದ ಅಣ್ಣ ತಮ್ಮಂದಿರಂತೆ ಬಳಿ ಬದುಕುತ್ತಿರುವ ಕನ್ನಡಿಗರು, ತೆಲುಗರು ಅಷ್ಟೇ ಅಲ್ಲ, ಎಲ್ಲ ಭಕ್ತರು ಶ್ರೀಶೈಲ ಮಲ್ಲಿಕಾರ್ಜುನನ ದರ್ಶನ ಮಾಡಬೇಕು ಎನ್ನುವುದು ನನ್ನ ಕಾಳಜಿ. ನಾನು ಈಗಾಗಲೇ ಕರ್ನೂಲು ಪೋಲಿಸ್ ಜಿಲ್ಲಾ ವರಿಷ್ಠಾಧಿಕಾರಿ ಅವರೊಂದಿಗೆ ಮಾತನಾಡಿದ್ದೇನೆ. ಅವರು ಸುರಕ್ಷತೆಯ ಎಲ್ಲ ಕ್ರಮ ವಹಿಸುವುದಾಗಿ ಭರವಸೆ ನೀಡಿದ್ದಾರೆ. ಕನ್ನಡಿಗ ಭಕ್ತರೆಲ್ಲರೂ ದೇವರ ದರ್ಶನ ಮಾಡಿಕೊಳ್ಳಬಹುದು ಎಂದು ಹೇಳಿದ್ದಾರೆ.
ಆಂಧ್ರ ಪ್ರದೇಶದ ಸಿಎಂ ವೈ.ಎಸ್. ಜಗನ್ ಅವರ ಸರ್ಕಾರ ಕನ್ನಡಿಗರಿಗೆ ಭದ್ರತೆ ನೀಡುತ್ತದೆ ಎಂಬ ವಿಶ್ವಾಸವಿದೆ. ಒಂದು ವೇಳೆ ಏನಾದರೂ ಸಮಸ್ಯೆಯಾದರೆ ನನ್ನ ಗಮನಕ್ಕೆ ತನ್ನಿ ಎಂದು ನನ್ನ ಭಕ್ತ ಬಂಧುಗಳಲ್ಲಿ ವಿನಂತಿಸುತ್ತೇನೆ ಎಂದು ಹೆಚ್ಡಿಕೆ ಟ್ವೀಟ್ ಮಾಡಿದ್ದಾರೆ.