ಬೆಂಗಳೂರು: ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರದ ಹಾಲಿ ಜೆಡಿಎಸ್ ಶಾಸಕ ಶ್ರೀನಿವಾಸ್ ಅವರಿಗೆ ಟಿಕೆಟ್ ನೀಡದಂತೆ ಮಂಡ್ಯದ ಹಲವಾರು ಕಾರ್ಯಕರ್ತರು ಒತ್ತಾಯಿಸಿದ್ದಾರೆ. ಪಕ್ಷದ ಕಚೇರಿ ಜೆಪಿ ಭವನಕ್ಕೆ ಇಂದು ಆಗಮಿಸಿದ 60ಕ್ಕೂ ಹೆಚ್ಚು ಕಾರ್ಯಕರ್ತರು, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಮನವಿ ಮಾಡಿದರು.
ಸುದ್ದಿಗೋಷ್ಠಿ ನಡೆಸಿದ ನಂತರ ಮಂಡ್ಯ ಕಾರ್ಯಕರ್ತರ ಜೊತೆ ಸಭೆ ನಡೆಸಿದ ಹೆಚ್ಡಿಕೆ, ಕಾರ್ಯಕರ್ತರ ಅನಿಸಿಕೆ, ಅಭಿಪ್ರಾಯಗಳನ್ನು ಆಲಿಸಿದರು. ಹಾಲಿ ಶಾಸಕ ಶ್ರೀನಿವಾಸ್ ಅವರು ಕ್ಷೇತ್ರದಲ್ಲಿ ಸಕ್ರಿಯರಾಗಿಲ್ಲ. ತಮ್ಮ ಅಳಿಯನಿಗೆ ಟಿಕೆಟ್ ಕೊಡಿಸಲು ತೆರೆಮರೆ ಪ್ರಯತ್ನ ನಡೆಸುತ್ತಿದ್ದಾರೆ. ಅವರ ಅಳಿಯ ಕ್ಷೇತ್ರದಲ್ಲಿ ಇರುವವರಲ್ಲ. ಬೆಂಗಳೂರಿನಲ್ಲಿ ಇದ್ದಾರೆ. ಮುಂದಿನ ಚುನಾವಣೆಗೆ ರಾಧಾಕೃಷ್ಣ ಅವರಿಗೆ ಟಿಕೆಟ್ ಕೊಡಿ ಎಂದು ಕುಮಾರಸ್ವಾಮಿ ಅವರ ಮುಂದೆ ಕಾರ್ಯಕರ್ತರು ಬೇಡಿಕೆಯಿಟ್ಟರು.
ಎಲ್ಲವನ್ನೂ ಆಲಿಸಿದ ಬಳಿಕ ಮಾತನಾಡಿದ ಕುಮಾರಸ್ವಾಮಿ, ರಾಜ್ಯದಲ್ಲಿ ಜನ ಇವತ್ತು ಕುಮಾರಸ್ವಾಮಿಗೆ ರಾಜಕೀಯ ಭವಿಷ್ಯ ರೂಪಿಸಬೇಕೆಂದು ತೀರ್ಮಾನ ಮಾಡುತ್ತಿದ್ದಾರೆ. ಪದಾಧಿಕಾರಿಗಳಾಗಿ ಯಾರನ್ನು ನೇಮಕ ಮಾಡಬೇಕು. ಯಾರಿಗೆ ಜವಾಬ್ದಾರಿ ಕೊಡಬೇಕೆಂದು ಲೆಕ್ಕಾಚಾರ ಮಾಡಿ ಕೆಲವೊಂದು ತೀರ್ಮಾನ ಮಾಡಿದ್ದೇನೆ ಎಂದರು.
ಇಂದು ಇಷ್ಟೊಂದು ಆತಂಕದಲ್ಲಿ ಪಕ್ಷದ ಕಚೇರಿಗೆ ನೀವು ಬಂದಿದ್ದೀರಾ. ನಿಮ್ಮ ನೋವನ್ನು ನಿವಾರಿಸುವ ಜವಾಬ್ದಾರಿಯಿದೆ. ನೀವೇ ಪಕ್ಷದ ಆಧಾರ ಸ್ತಂಭಗಳು. ನೀವು ಹೋದ ಮೇಲೆ ನಾವು ಏನು ಮಾಡುವುದಕ್ಕೆ ಆಗುವುದಿಲ್ಲ. ನಾನು ಯಾರ ಅಡಿಯಾಳು ಅಲ್ಲ. ಕಾರ್ಯಕರ್ತರ ಪರವಾಗಿ ಕೆಲಸ ಮಾಡುತ್ತೇನೆ. ನಿಮ್ಮ ಪಾಡಿಗೆ ನೀವು ಕೆಲಸ ಮಾಡಿ ಎಂದು ಕಾರ್ಯಕರ್ತರಿಗೆ ಹೆಚ್ಡಿಕೆ ಸಲಹೆ ನೀಡಿದರು.