ಬೆಂಗಳೂರು: ಹಾವೇರಿ ಜಿಲ್ಲೆ ರಾಣಿಬೆನ್ನೂರು ತಾಲೂಕಿನ ನೆಲವಾಗಲು ಗ್ರಾಮದ ಜನರನ್ನು ಕೋಡಿಯಾಲ ಗ್ರಾಮಕ್ಕೆ ಸ್ಥಳಾಂತರಿಸುವ ಸಂಬಂಧ ಕೈಗೊಂಡ ಕ್ರಮಗಳ ಬಗ್ಗೆ ವಸ್ತುಸ್ಥಿತಿ ವರದಿ ಸಲ್ಲಿಸಲು ವಿಫಲವಾದ ಮತ್ತು ನ್ಯಾಯಾಲಯಕ್ಕೆ ಖದ್ದು ಹಾಜರಾಗದೆ ತಮ್ಮ ಕಚೇರಿಯಿಂದಲೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾದ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್ ಅವರಿಗೆ ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿತು.
ನೆಲವಾಗಲು ಗ್ರಾಮದ ಸ್ಥಳಾಂತರ ಕುರಿತು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ನೇತೃತ್ವದ ವಿಭಾಗೀಯ ಪೀಠ ಇಂದು ವಿಚಾರಣೆ ನಡೆಸಿತು.
ಈ ವೇಳೆ ತಮ್ಮ ಕಚೇರಿಯಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾದ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್, ವಸ್ತುಸ್ಥಿತಿ ವರದಿ ಸಲ್ಲಿಸಲು ಕಾಲಾವಕಾಶ ನೀಡುವಂತೆ ಮನವಿ ಮಾಡಿದರು.ಅಧಿಕಾರಿಯ ನಡವಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಪೀಠ, ವಸ್ತುಸ್ಥಿತಿ ವರದಿ ಸಲ್ಲಿಸದೆ ಹೋದರೆ ವಿಚಾರಣೆಗೆ ಖುದ್ದಾಗಿ ಹಾಜರಿರಬೇಕು ಎಂದು ನ್ಯಾಯಾಲಯ ನಿಮಗೆ ಸೂಚನೆ ನೀಡಿತ್ತು. ನೀವು ವರದಿ ಸಲ್ಲಿಸಿಲ್ಲ. ಖುದ್ದಾಗಿ ವಿಚಾರಣೆಗೂ ಹಾಜರಾಗಿಲ್ಲ. ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಲು ನಿಮಗೆ ಅನುಮತಿ ನೀಡಿದವರು ಯಾರು? ಎಂತಹ ನಡವಳಿಕೆಯನ್ನು ನ್ಯಾಯಾಲಯ ಸಹಿಸುವುದಿಲ್ಲ. ಖುದ್ದು ಹಾಜರಾಗಲು ನ್ಯಾಯಾಲಯ ಸೂಚಿಸಿದ್ದರೂ ನೀವು ಆದೇಶ ಪಾಲಿಸಿಲ್ಲ. ನಿಮ್ಮ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಜರುಗಿಸಬೇಕೆ?. ಕೋರ್ಟ್ ಆದೇಶವನ್ನು ತುಂಬಾ ಹಗರುವಾಗಿ ಪರಿಗಣಿಸಬೇಡಿ ಎಂದು ತರಾಟೆಗೆ ತೆಗೆದುಕೊಂಡಿತು.
ಇದನ್ನೂ ಓದಿ: INS ರಣವೀರ್ನಲ್ಲಿ ಸ್ಫೋಟ: ನೌಕಾಸೇನೆಯ ಮೂವರು ಸಿಬ್ಬಂದಿ ಸಾವು, 11 ಮಂದಿಗೆ ಗಾಯ
ಸರ್ಕಾರದ ಪರ ವಕೀಲರು ವಾದಿಸಿ, ಸರ್ಕಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಂಡಿದೆ. ಈ ಸಂಬಂಧ ಅಧಿಕಾರಿಗಳು ನಿನ್ನೆ ಸಂಜೆಯಷ್ಟೇ ವರದಿ ಸಲ್ಲಿಸಿದ್ದಾರೆ. ನಾನು ಕ್ವಾರಂಟೈನ್ ನಲ್ಲಿ ಇರುವುದರಿಂದ ವರದಿ ಸಲ್ಲಿಸಲು ಸಾಧ್ಯವಾಗಿಲ್ಲ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ನೀವು ಕ್ವಾರಂಟೈನ್ ನಲ್ಲಿ ಇದ್ದರೆ ನಿಮ್ಮ ಜವಾಬ್ದಾರಿಯನ್ನು ಬೇರೆ ಸರ್ಕಾರಿ ವಕೀಲರಿಗೆ ವಹಿಸಬಹುದಲ್ಲವೇ? ನೀವು ಹಾಜರಾಗದೇ ಹೋದರೆ ಕೋರ್ಟ್ ಕಲಾಪ ನಡೆಸಲಾಗುವುದಿಲ್ಲವೇ? ನಿಮ್ಮ ವರ್ತನೆ ಇದೇ ಮೊದಲೇನಲ್ಲ. ಹಲವು ಬಾರಿ ಹೀಗೆ ನಡೆದುಕೊಂಡಿದ್ದೀರಿ. ನಿಮ್ಮನ್ನು ವಜಾಗೊಳಿಸಲು ಕಾನೂನು ಇಲಾಖೆಗೆ ಪತ್ರ ಬರೆಯಬೇಕೆ? ಎಂದು ಪ್ರಶ್ನಿಸಿತು.
ಅಂತಿಮವಾಗಿ ಸರ್ಕಾರಿ ವಕೀಲರು ಹಾಗೂ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಕ್ಷಮೆ ಕೋರಿದ ಬಳಿಕ ವಸ್ತುಸ್ಥಿತಿ ವರದಿ ಸಲ್ಲಿಸಲು ಕಾಲಾವಕಾಶ ನೀಡಿದ ಪೀಠ, ವಿಚಾರಣೆಯನ್ನು ಜನವರಿ 20ಕ್ಕೆ ಮುಂದೂಡಿತು.
ಪ್ರಕರಣದ ಹಿನ್ನೆಲೆ:
ನೆಲವಾಗಲು ಗ್ರಾಮವನ್ನು ಕೋಡಿಯಾಲ ಬಳಿ ಗುರುತಿಸಿರುವ ಜಮೀನಿಗೆ ಸ್ಥಳಾಂತರಿಸಲು 1993ರ ಜೂನ್ 9ರಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇದಲ್ಲದೆ 2018ರ ಡಿಸೆಂಬರ್ 18ರಂದು ಹೈಕೋರ್ಟ್ ಸಹ ಆದೇಶ ನೀಡಿದೆ. ಸರ್ಕಾರ ಆದೇಶ ಹೊರಡಿಸಿ 27 ವರ್ಷ ಕಳೆದಿವೆ. ಹೈಕೋರ್ಟ್ ಆದೇಶ ನೀಡಿ 22 ತಿಂಗಳು ಕಳೆದಿದೆ. ಆದರೆ, 432 ಮನೆಗಳ ಪೈಕಿ ಈವರೆಗೆ ಒಂದೇ ಒಂದು ಮನೆ ನಿರ್ಮಿಸಿಲ್ಲ ಎಂದು ಆರೋಪಿಸಿರುವ ಅರ್ಜಿದಾರರು, ನೆಲವಾಗಲು ಗ್ರಾಮವನ್ನು ಕೋಡಿಯಾಲಕ್ಕೆ ಸ್ಥಳಾಂತರಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿದ್ದಾರೆ.
ಈ ಸಂಬಂಧ ವಿಚಾರಣೆ ನಡೆಸಿದ್ದ ಹೈಕೋರ್ಟ್, ನೆಲವಾಗಿಲು ಗ್ರಾಮದ ಜನರನ್aನು ಕೋಡಿಯಾಲ ಗ್ರಾಮಕ್ಕೆ ಸ್ಥಳಾಂತರಿಸುವ ಸಂಬಂಧ ಕೈಗೊಂಡ ಕ್ರಮಗಳ ಬಗ್ಗೆ ವಸ್ತುಸ್ಥಿತಿ ವರದಿಯನ್ನು 2022ರ ಜನವರಿ 18ರೊಳಗೆ ಸಲ್ಲಿಸಬೇಕು. ತಪ್ಪಿದರೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮುಂದಿನ ವಿಚಾರಣೆಗೆ ಖುದ್ದಾಗಿ ಹಾಜರಾಗಬೇಕು ಎಂದು ಹೈಕೋರ್ಟ್ ನಿರ್ದೇಶಿಸಿತ್ತು. ಆದರೆ, ಅಧಿಕಾರಿಗಳು ವರದಿಯನ್ನೂ ಸಲ್ಲಿಸದೇ, ಖುದ್ದು ವಿಚಾರಣೆಗೂ ಹಾಜರಾಗದೇ ಇದ್ದುದು ಹೈಕೋರ್ಟ್ ಆಕ್ರೋಶಕ್ಕೆ ಕಾರಣವಾಯಿತು.