ಬೆಂಗಳೂರು: ನಗರದಲ್ಲಿ ಹಾಡಹಗಲೇ ಬೆಚ್ಚಿ ಬೀಳಿಸುವಂತಹ ಘಟನೆಯೊಂದು ನಡೆದಿದೆ. ರಸ್ತೆಯಲ್ಲಿ ಹೋಗುತ್ತಿದ್ದ ವ್ಯಕ್ತಿಯನ್ನು ಬೈಕ್‌ಯಿಂದ ಬೀಳಿಸಿ ಆತನ ಮೇಲೆ ದುಷ್ಕರ್ಮಿಗಳು ಮನಸೋಇಚ್ಛೆ ಹಲ್ಲೆ ನಡೆಸಿರುವ ಘಟನೆ ಸಂಜಯನಗರದಲ್ಲಿ ನಡೆದಿದೆ.
ರಾಮಮೂರ್ತಿನಗರದ ನಿವಾಸಿ ಮುನಿರಾಜು (35) ಎಂಬಾತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ತನ್ನ ತಾಯಿಯ ಜೊತೆ ರಸ್ತೆಯಲ್ಲಿ ಹೋಗುತ್ತಿದ್ದಾಗ ತಲೆಗೆ ಹೆಲ್ಮೆಟ್ ಧರಿಸಿಕೊಂಡು ಬೈಕ್‌ನಲ್ಲಿ ಬಂದ ಮೂವರು ಅಪರಿಚಿತ ವ್ಯಕ್ತಿಗಳು ಏಕಾಏಕಿ ಮುನಿರಾಜುನನ್ನು ಕೆಳಗೆ ಬೀಳಿಸಿ ಹಲ್ಲೆ ಮಾಡಿ, ಸಾಯಿಸಿ ಬಿಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ.
ಹಲ್ಲೆ ವೇಳೆ ಆತನ ತಾಯಿ ಕಿರುಚಾಡಿದರೂ ಸಹ ಬಿಡದ ಪುಂಡರು ಹಿಗ್ಗಾಮಗ್ಗಾ ಥಳಿಸಿದ್ದಾರೆ. ದುಷ್ಕರ್ಮಿಗಳು ಹಲ್ಲೆ ಮಾಡುತ್ತಿದ್ದ ವಿಡಿಯೋ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುನಿರಾಜು ಯುವತಿಗೆ ಕಿರುಕುಳ ನೀಡುತ್ತಿದ್ದ ಎನ್ನುವ ಆರೋಪ ಕೇಳಿ ಬಂದಿದೆ. ಈ ಕುರಿತು ಯುವತಿ ತನ್ನ ಸ್ನೇಹಿತರಿಗೆ ಮಾಹಿತಿ ನೀಡಿದ್ದಾಳೆ. ಹೀಗಾಗಿ ಯುವತಿಯ ಸ್ನೇಹಿತರು ಮುನಿರಾಜು ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗ್ತಿದೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ದುಷ್ಕರ್ಮಿಗಳ ಬಂಧನಕ್ಕೆ ಶೋಧ ಕಾರ್ಯ ಮುಂದುವರೆಸಿದ್ದಾರೆ.