ಬೆಂಗಳೂರು: ಜಾಗೃತ ನಾಗರಿಕ ಹಾಗೂ ಬೆಂಗಳೂರು ಪೊಲೀಸರ ಕ್ಷಿಪ್ರ ಕಾರ್ಯವೈಖರಿಗೆ ಈ ಘಟನೆ ಉತ್ತಮ ನಿದರ್ಶನ. ಯುವತಿಯೊಬ್ಬಳ ಅಪಹರಣವನ್ನು ಕಣ್ಣಾರೆ ಕಂಡೆ ಎಂದು ವ್ಯಕ್ತಿಯೊಬ್ಬ 112ಗೆ ಮಾಡಿದ ಕರೆ ಆಧರಿಸಿ ತ್ವರಿತ ಕಾರ್ಯಾಚರಣೆ ಕೈಗೊಂಡ ಪೊಲೀಸರು ಅಂತಿಮವಾಗಿ ನೆಮ್ಮದಿಯ ನಿಟ್ಟುಸಿರು ಬಿಟ್ಟ ಘಟನೆ ಬಾಣಸವಾಡಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಏನಿದು ಘಟನೆ?: ಶುಕ್ರವಾರ ಬೆಳಗ್ಗಿನ ಜಾವ 4 ಗಂಟೆ ಸುಮಾರಿಗೆ ಪೊಲೀಸ್ ಸಹಾಯವಾಣಿ 112ಗೆ ಕರೆ ಮಾಡಿದ್ದ ಶೇಖರ್ ಎಂಬಾತ 'ಯಾರೋ ಒಬ್ಬ ಬಾಣಸವಾಡಿಯ ಸುಬ್ಬಯ್ಯನಪಾಳ್ಯ ರಸ್ತೆಯಲ್ಲಿ ಯುವತಿಯೊಬ್ಬಳನ್ನು ಬಲವಂತವಾಗಿ ಕಾರಿನಲ್ಲಿ ಕರೆದೊಯ್ಯುತ್ತಿದ್ದಾನೆ' ಎಂದಿದ್ದ. ಆದರೆ ಆ ಯುವತಿ ಯಾರು, ಆಕೆಯ ಹಿನ್ನೆಲೆ ಏನು? ಎಂಬ ಮಾಹಿತಿಯೇ ಇರಲಿಲ್ಲ.
ಯಾವುದೇ ಹೆಚ್ಚಿನ ಮಾಹಿತಿ ಇಲ್ಲದಿದ್ದರೂ ಸಹ ನಿರ್ಲಕ್ಷ್ಯಿಸದೇ ಕೂಡಲೇ ಕಾರ್ಯಪ್ರವೃತ್ತರಾದ ಬಾಣಸವಾಡಿ ಇನ್ಸ್ಪೆಕ್ಟರ್ ಸಂತೋಷ್ ನೇತೃತ್ವದಲ್ಲಿ ನಾಲ್ಕು ವಿಶೇಷ ಪೊಲೀಸ್ ತಂಡಗಳು ಕಾರ್ಯಾಚರಣೆಗೆ ಇಳಿದಿದ್ದವು. ಘಟನೆ ನಡೆದ ಸ್ಥಳದ ಸುತ್ತಮುತ್ತಲಿನ ಏರಿಯಾಗಳ ನೂರಕ್ಕೂ ಅಧಿಕ ಸಿಸಿಟಿವಿಗಳ ಪರಿಶೀಲನೆ ನಡೆಸಿದ ಪೊಲೀಸರು ಸ್ಥಳದಲ್ಲಿದ್ದ ಸ್ಕೂಟರ್ ನಂಬರ್ ಆಧರಿಸಿ ಕೊನೆಗೂ ಯುವತಿ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಯುವತಿಯ ಹೆಸರು ಅಮೃತ, ದೆಹಲಿ ಮೂಲದ ಮಾಡೆಲ್ ಎಂಬುದು ಬೆಳಕಿಗೆ ಬಂದಿದೆ. ಅಸಲಿಗೆ ನಿನ್ನೆ ಬೆಳಗ್ಗೆ ಕ್ಯಾಬ್ ಬುಕ್ ಮಾಡಿಕೊಂಡು ಸ್ನೇಹಿತನ ಮನೆಯಿಂದ ಹೊರಟಿದ್ದ ಅಮೃತಾ ಲೋ ಶುಗರ್ನಿಂದ ಬಳಲಿ ಕುಸಿದು ಬಿದ್ದಿದ್ದಾರೆ. ತಕ್ಷಣ ಆಕೆಯ ಸ್ನೇಹಿತ ಎತ್ತಿಕೊಂಡು ಕಾರಲ್ಲಿ ಕರೆದೊಯ್ದು ಮನೆಗೆ ಕರೆತಂದು ಬಿಟ್ಟು ಬಂದಿದ್ದಾನೆ. ಇದನ್ನು ಗಮನಿಸಿದ್ದ ಶೇಖರ್ 112ಗೆ ಕರೆ ಮಾಡಿ ಅಪಹರಣ ಅಂತ ದೂರು ಕೊಟ್ಟಿದ್ದ. ಏನೇ ಇದ್ದರೂ ನಿರ್ಲಕ್ಷ್ಯಿಸದೆ ತ್ವರಿತ ಕಾರ್ಯಾಚರಣೆ ಕೈಗೊಂಡ ಬಾಣಸವಾಡಿ ಠಾಣೆ ಪೊಲೀಸರು ಅಂತಿಮವಾಗಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಇದನ್ನೂ ಓದಿ: ಕಳೆದುಕೊಂಡಿದ್ದ ಬ್ಯಾಗ್ ಮರಳಿಸಿ ಪ್ರಾಮಾಣಿಕತೆ ಮೆರೆದ ಹುಬ್ಬಳ್ಳಿಯ ಟ್ರಾಫಿಕ್ ಪೊಲೀಸ್