ಬೆಂಗಳೂರು: 15 ದಿನದಲ್ಲಿ ಕೇಂದ್ರ ಪುರಾತತ್ವ ಇಲಾಖೆ ಹಾಗೂ ರಾಜ್ಯ ಪುರಾತತ್ವ ಇಲಾಖೆ ಸಂಶೋಧನಾ ವರದಿ ಕೊಟ್ಟ ಬಳಿಕ ರಾಜ್ಯ ಸರ್ಕಾರ ಅಧಿಕೃತವಾಗಿ ಅಂಜನಾದ್ರಿ ಹನುಮನ ಜನ್ಮಸ್ಥಳ ಎಂದು ಘೋಷಣೆ ಮಾಡಲಿದೆ ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ತಿಳಿಸಿದರು.
ಸಿಎಂ ನೇತೃತ್ವದಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟದ ಸಮಗ್ರ ಅಭಿವೃದ್ಧಿ ಕುರಿತು ಸಭೆ ನಡೆಸಲಾಯಿತು. ಸಭೆ ಬಳಿಕ ಮಾತನಾಡಿದ ಸಚಿವ ಆನಂದ್ ಸಿಂಗ್, ಹನುಮನ ಜನ್ಮಸ್ಥಳ ಗೊಂದಲ ವಿಚಾರವಾಗಿ ಚರ್ಚೆ ನಡೆದಿದೆ. ಕೇಂದ್ರ ಪುರಾತತ್ವ ಇಲಾಖೆ ಹಾಗೂ ರಾಜ್ಯ ಪುರಾತತ್ವ ಇಲಾಖೆಗೆ ಸಿಎಂ ಸೂಚನೆ ಕೊಟ್ಟಿದ್ದಾರೆ. ಅಂಜನಾದ್ರಿ ಬೆಟ್ಟದ ದಾಖಲೆಗಳ ಪರಿಶೀಲನೆ ಹಾಗೂ ಸಂಶೋಧನೆ ಬಳಿಕ ಒಂದು ಅಧಿಕೃತವಾಗಿ ಅಲ್ಲಿ ಬೋರ್ಡ್ ಹಾಕಲು ಸಿಎಂ ಸೂಚನೆ ನೀಡಿದ್ದಾರೆ. ಕಿಷ್ಕಿಂದೆ ಹನುಮ ಹುಟ್ಟಿದ ಸ್ಥಳ ಹೇಗಾಯ್ತು? ಇತಿಹಾಸ ಪುಟದಲ್ಲಿ ಏನಿದೆ? ಕಿಷ್ಕಿಂದೆಯಲ್ಲಿ ಇನ್ಮುಂದೆ ಯಾರು ಚಕಾರ ಎತ್ತಬಾರದು ಅನ್ನುವುದು ಸೇರಿದಂತೆ ವಿವಿಧ ವಿಚಾರಗಳಿಗೆ ಕೊನೆ ಹಾಡಬೇಕು. ಅದಕ್ಕಾಗಿ ಸಿಎಂ ಸೂಚನೆ ಕೊಟ್ಟಿದ್ದಾರೆ ಎಂದರು.
ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ ಈಗಾಗಲೇ ನೀಡಿರುವ 100 ಕೋಟಿ ಅನುದಾನ ಕೋಡಲೇ ಬಿಡುಗಡೆ ಮಾಡಲು ಸಿಎಂ ಸೂಚನೆ ಕೊಟ್ಟಿದ್ದಾರೆ. ಸಭೆಯಲ್ಲಿ ಭಾಗವಹಿಸಿದ್ದ ಆರ್ಥಿಕ ಇಲಾಖೆಯ ಅಧಿಕಾರಿಗಳಿಗೆ ಸಿಎಂ ಸೂಚಿಸಿದ್ದಾರೆ. ಅಂಜನಾದ್ರಿ ಬೆಟ್ಟದಲ್ಲಿ ಪಾರ್ಕಿಂಗ್, ರೋಪ್ ವೇ, ರಸ್ತೆ ನಿರ್ಮಾಣ ಹಾಗೂ ಫುಟಪಾಥ್ ಕಾಮಗಾರಿಗೆ ಹಣ ಬಿಡುಗಡೆ ಮಾಡುವಂತೆ ಸಿಎಂ ತಿಳಿಸಿದ್ದಾರೆ. ಜೊತೆಗೆ ಎರಡು ತಿಂಗಳೊಳಗೆ ಎಲ್ಲಾ ಕಾಮಗಾರಿಗಳಿಗೂ ಅಡಿಗಲ್ಲು ಹಾಕಲು ಹೇಳಿದ್ದಾರೆ. ಜುಲೈ 15ರೊಳಗೆ ಸಿಎಂ ಬೊಮ್ಮಾಯಿ ಸಹ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಸಚಿವ ಹಾಲಪ್ಪ ಆಚಾರ್, ಕೊಪ್ಪಳ ಸಂಸದ ಕರಡಿ ಸಂಗಣ್ಣ, ಶಾಸಕರಾದ ಬಸವರಾಜ ದಡೆಸೂಗುರ, ಪರಣ್ಣ ಮುನವಳ್ಳಿ, ಅಮರೇಗೌಡ ಬಯ್ಯಾಪೂರ, ರಾಘವೇಂದ್ರ ಹಿಟ್ನಾಳ, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ, ಆರ್ಥಿಕ ಇಲಾಖೆಯ ಕಾರ್ಯದರ್ಶಿ ಏಕ್‍ರೂಪ್ ಕೌರ್, ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಪ್ರಸಾದ್ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ: ಬಹಿರಂಗ ಚರ್ಚೆಗೆ ಡೇಟ್ ಫಿಕ್ಸ್ ಮಾಡಿದ ಲಕ್ಷ್ಮಣ್: ಜೂ. 29 ಪ್ರತಾಪಸಿಂಹ ಪಟಾಲಂ ಜೊತೆ ಬರಲಿ