ಬೆಂಗಳೂರು: ಮಂಗನ ಕಾಯಿಲೆ ನಿಯಂತ್ರಣಕ್ಕಾಗಿ “ಸಮಗ್ರ ಮಾಹಿತಿಯ ಪ್ರಥಮ ಕೈಪಿಡಿ” ಬಿಡುಗಡೆ ಮಾಡಲಾಯಿತು. ಕರ್ನಾಟಕದ ಮಲೆನಾಡಿನ ಪ್ರದೇಶಗಳಲ್ಲಿ ಹೆಚ್ಚಾಗಿ ಬಾಧಿಸುವ ಕ್ಯಾಸನೂರು ಕಾಡಿನ ಕಾಯಿಲೆ (ಮಂಗನ ಕಾಯಿಲೆ)ಯ ವಿವಿಧ ಅಂಶಗಳನ್ನು ಒಳಗೊಂಡ “ಕಾರ್ಯಾಚರಣೆಯ ಕೈಪಿಡಿ”( Operational Manual Kyasanur Forest Disease)ಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಬಿಡುಗಡೆ ಮಾಡಿದರು.
ಕೈಪಿಡಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಸಿದ್ಧಪಡಿಸಿದ್ದು, ಮಂಗನ ಕಾಯಿಲೆ ಕುರಿತಾಗಿ ಸಮಗ್ರ ಮಾಹಿತಿಯನ್ನು ಒಳಗೊಂಡ ದೇಶದಲ್ಲೇ ಪ್ರಥಮ ಕೈಪಿಡಿ ಇದಾಗಿದೆ. ಈ ಕೈಪಿಡಿಯು ರಾಜ್ಯದ ಮಂಗನ ಕಾಯಿಲೆ ಪೀಡಿತ ಜಿಲ್ಲೆಗಳಲ್ಲದೇ, ಕರ್ನಾಟಕ ನೆರೆಯ ರಾಜ್ಯಗಳಾದ ಮಹಾರಾಷ್ಟ್ರ, ಗೋವಾ, ಕೇರಳ ಮತ್ತು ತಮಿಳುನಾಡಿಗೂ ಸಹ ಉಪಯುಕ್ತವಾಗಲಿದೆ.
ಈ ಕೈಪಿಡಿಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಹಾಗೂ ಕ್ಷೇತ್ರ ಮಟ್ಟದ ಸಿಬ್ಬಂದಿ ಅನುಷ್ಠಾನಗೊಳಿಸುವ ಸರ್ವೇಕ್ಷಣೆ, ಚಿಕಿತ್ಸೆ ಮತ್ತು ನಿರ್ವಹಣೆ, ಮುನ್ನೆಚ್ಚರಿಕೆ ಹಾಗೂ ನಿಯಂತ್ರಣ ಕ್ರಮಗಳು (ಲಸಿಕಾ ಕಾರ್ಯಕ್ರಮವನ್ನು ಒಳಗೊಂಡಂತೆ), ಮೇಲ್ವಿಚಾರಣೆ ಹಾಗೂ ಉಸ್ತುವಾರಿ ಕುರಿತು ಮಾರ್ಗಸೂಚಿಗಳನ್ನೂ ನೀಡಲಾಗಿದೆ.
ಕಾಯಿಲೆ ನಿಯಂತ್ರಣಕ್ಕಾಗಿ ಅವಶ್ಯವಿರುವ ಸಂಶೋಧನೆಗಳ ಬಗ್ಗೆ ಬೆಳಕು ಚೆಲ್ಲಲಾಗಿದೆ. ಇದಲ್ಲದೇ ಮಂಗನ ಕಾಯಿಲೆ ನಿಯಂತ್ರಣದಲ್ಲಿ ಅಂತರ್ ಇಲಾಖಾ ಸಮನ್ವಯ ಸಾಧಿಸುವಿಕೆ, ಅನ್ಯ ಇಲಾಖೆಗಳ ಪಾತ್ರ ಹಾಗೂ ಜವಾಬ್ದಾರಿಯನ್ನೂ ಸಹ ವಿಸ್ತೃತವಾಗಿ ವಿವರಿಸಲಾಗಿದೆ.
ಮಂಗನ ಕಾಯಿಲೆ ನಿಯಂತ್ರಣದಲ್ಲಿ ಸ್ವಯಂ ರಕ್ಷಣಾ ವಿಧಾನಗಳ ಪಾಲಿಸುವಿಕೆಯ ಮೂಲಕ ಸಮುದಾಯದ ಸಹಕಾರ ಹಾಗೂ ಸಹಭಾಗಿತ್ವ ಪ್ರಮುಖವಾಗಿದ್ದು, ಇದರ ಕುರಿತಾಗಿಯೂ ಸಹ ಕೈಪಿಡಿಯಲ್ಲಿ ತಿಳಿಸಲಾಗಿದೆ. ಇಲಾಖಾ ಅಧಿಕಾರಿಗಳ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಕೈಪಿಡಿಯು ಆರೋಗ್ಯ ಇಲಾಖೆಯ ವೆಬ್‍ಸೈಟ್ karunadu.karnataka.gov.in/hfw ನಲ್ಲಿ ಲಭ್ಯವಿದೆ.
ಕೈಪಿಡಿ ಬಿಡುಗಡೆ ಸಂದರ್ಭದಲ್ಲಿ ಡಾ. ಪಾಟೀಲ್ ಓಂ ಪ್ರಕಾಶ್, ನಿರ್ದೇಶಕರು, ಆರೋಗ್ಯ ಇಲಾಖೆ, ಡಾ. ಪ್ರಕಾಶ್ ಕುಮಾರ್ ಬಿಜಿ, ಸಹ ನಿದೇಶಕರು (ಸಾಂಕ್ರಾಮಿಕ ರೋಗಗಳ ವಿಭಾಗ), ಡಾ. ಮೊಹಮದ್ ಷರೀಫ್, ಉಪ ನಿರ್ದೇಶಕರು, ರಾಜ್ಯ ಕಣ್ಗಾವಲು ಘಟಕ, ಕೀಟಶಾಸ್ತ್ರಜ್ಞರಾದ ಶ್ರೀಮತಿ ಸುನಂದ ಎಮ್, ಶ್ರೀಮತಿ ಭಾವನಾ ಆರ್ ಹಾಗೂ ಇಲಾಖೆಯ ಇತರೆ ಸಿಬ್ಬಂದಿ ಹಾಜರಿದ್ದರು.