ಬೆಂಗಳೂರು: ಕಾರ್ಮಿಕರ ತುಟ್ಟಿಭತ್ಯೆ (ಡಿಎ) ತಡೆಹಿಡಿದಿದ್ದ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ಹಾಗೂ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್(ಎಚ್ಎಎಲ್) ನ ಆದೇಶಗಳಿಗೆ ಹೈಕೋರ್ಟ್ ತಡೆ ನೀಡಿ ಆದೇಶಿಸಿದೆ.
ಬಿಇಎಲ್ ಹಾಗೂ ಎಚ್ಎಎಲ್ ಕಾರ್ಮಿಕರ ಸಂಘ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಆರ್. ದೇವದಾಸ್ ಅವರಿದ್ದ ಏಕ ಸದಸ್ಯ ಪೀಠ ಈ ತಡೆ ನೀಡಿದೆ. ಅಲ್ಲದೇ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆ ಇಲಾಖೆ, ಎಚ್ಎಎಲ್ ಮತ್ತು ಬಿಇಎಲ್ ಆಡಳಿತ ಮಂಡಳಿಗಳಿಗೆ ನೋಟಿಸ್ ಜಾರಿ ಮಾಡಿದೆ.
ಓದಿ:ಅಕ್ರಮ ವಿದ್ಯುತ್ ಸಂಪರ್ಕ ಪ್ರಶ್ನಿಸಿದ ಸೆಸ್ಕ್ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನ
2020 ರ ಜನವರಿ 1ರಿಂದ ಈವರೆಗಿನ ತುಟ್ಟಿಭತ್ಯೆಯನ್ನು 2021ರ ಜನವರಿಯಿಂದ ಮಾರ್ಚ್ ಒಳಗೆ ಉದ್ಯೋಗಿಗಳಿಗೆ ನೀಡಬೇಕಿತ್ತು. ಆದರೆ, ಈ ಮೊತ್ತವನ್ನು ತಡೆ ಹಿಡಿದಿರುವುದಾಗಿ ಆಡಳಿತ ಮಂಡಳಿಗಳು ತಿಳಿಸಿದ್ದವು. ಈ ಹಿನ್ನೆಲೆ ಕಾರ್ಮಿಕರ ಸಂಘಗಳು ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿವೆ.
ವಿಚಾರಣೆ ವೇಳೆ, ಸರ್ಕಾರದ ಪರ ವಕೀಲರು ಪೀಠಕ್ಕೆ ಮಾಹಿತಿ ನೀಡಿ, ಈ ನಿಯಮವು ಕಾರ್ಯನಿರ್ವಾಹಕ ಹುದ್ದೆಯಲ್ಲಿರುವ ಅಧಿಕಾರಿಗಳು ಹಾಗೂ ಅಸಂಘಟಿತ ಸೂಪರ್ವೈಸರ್ ಗಳಿಗೆ ಮಾತ್ರ ಅನ್ವಯಿಸುತ್ತಿದೆ. ಕಾರ್ಮಿಕರಿಗೆ ಅನ್ವಯಿಸುವುದಿಲ್ಲ ಎಂದು ಸರ್ಕಾರ ಈಗಾಗಲೇ ಸ್ಪಷ್ಟಪಡಿಸಿದೆ ಎಂದರು.