ಬೆಂಗಳೂರು: ಜೆಡಿಎಸ್ ಅತೃಪ್ತ ಶಾಸಕ, ರಾಜೀನಾಮೆ ನೀಡಿರುವ ಹೆಚ್.ವಿಶ್ವನಾಥ್ ಪುತ್ರ ಅಮಿತ್ ಇಂದು ಮಧ್ಯಾಹ್ನ ಬಿ.ಎಸ್ ಯಡಿಯೂರಪ್ಪ ನಿವಾಸದಲ್ಲಿ ಭೇಟಿಯಾಗಿದ್ದು, ರಾಜ್ಯ ರಾಜಕೀಯದಲ್ಲಿ ಕುತೂಹಲ ಕೆರಳಿಸಿದೆ.
ಬಿಎಸ್‌ವೈ ಅವರನ್ನು ಭೇಟಿಯಾದ ವಿಶ್ವನಾಥ್ ಪುತ್ರ ಅಮಿತ್ ದೇವರಹಟ್ಟಿ ಸುಮಾರು ಮೂರು ಗಂಟೆಗಳ ಕಾಲ ಚರ್ಚೆ ನಡೆಸಿದರು. ಮುಂಬೈನಲ್ಲಿರುವ ಹೆಚ್ ವಿಶ್ವನಾಥ್ ಅವರ ಸಂದೇಶದ ಬಗ್ಗೆ ಬಿಎಸ್‌ವೈ ಜೊತೆ ಚರ್ಚಿಸಿರುವ ಸಾಧ್ಯತೆ ಇದೆ. ಸರ್ಕಾರ ರಚನೆಯಾದಲ್ಲಿ ಹೆಚ್.ವಿಶ್ವನಾಥ್‌ಗೆ ಯಾವುದೇ ಸ್ಥಾನಮಾನ ತಪ್ಪಿಸುವುದಿಲ್ಲ, ಕೊಟ್ಟ ಭರವಸೆಯಂತೆ ನಡೆದುಕೊಳ್ಳುತ್ತೇವೆ ಎಂದು ಬಿಎಸ್‌ವೈ ಹೇಳಿದ್ದಾರೆ ಎನ್ನಲಾಗ್ತಿದೆ.
ಮೈಸೂರು ಜಿಲ್ಲಾ ಪಂಚಾಯ್ತಿ ಕಾಂಗ್ರೆಸ್ ಸದಸ್ಯರಾಗಿರೋ ಅಮಿತ್ ದೇವರಹಟ್ಟಿ, ಬಿಎಸ್‌ವೈ ಭೇಟಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಬಳಿಕ ಮಾಧ್ಯಮಗಳ ಕಣ್ತಪ್ಪಿಸಿ ಬಿಎಸ್‌ವೈ ಮನೆಯಿಂದ ಅಮಿತ್ ಹೊರನಡೆದರು. ಇದೇ ವೇಳೆ ಯಡಿಯೂರಪ್ಪರನ್ನು ಭೇಟಿ ಮಾಡಿದ, ಜ್ಯೋತಿಷಿ ರೇಣುಕಾರಾಧ್ಯ ಗುರೂಜಿ, ಸರ್ಕಾರ ರಚನೆ, ಪ್ರಮಾಣ ವಚನ ಸ್ವೀಕಾರ ಸಂಬಂಧ ಸಲಹೆ ಕೊಟ್ಟಿದ್ದಾರೆ ಎನ್ನಲಾಗಿದೆ.
ಯಡಿಯೂರಪ್ಪನವರಿಗೆ ಎರಡು ಮೂರು ಮುಹೂರ್ತ ಸಲಹೆ ಮಾಡಲಾಗಿದೆ. ಅಮವಾಸ್ಯೆ ಕಳೆದ ಬಳಿಕ ಯಡಿಯೂರಪ್ಪನವ್ರಿಗೆ ಎಲ್ಲ ಅಡೆತಡೆ ನಿವಾರಣೆ ಆಗುತ್ತವೆ. ಆಷಾಢ ದೋಷ ನಿವಾರಣೆಗೂ ಪರಿಹಾರ ಸೂಚಿಸಲಾಗಿದೆ ಎನ್ನಲಾಗುತ್ತಿದೆ. ಹೈಕಮಾಂಡ್ ಗ್ರೀನ್ ಸಿಗ್ನಲ್ ಸೂಚಿಸಿದ್ದೇ ಆದಲ್ಲಿ, ಶುಕ್ರವಾರ ಹಾಗೂ ಸೋಮವಾರ ಪ್ರಶಸ್ತ ದಿನವಾಗಿದ್ದು ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ.