ಬೆಂಗಳೂರು : ಖಾಸಗಿ ಕಂಪನಿಯಲ್ಲಿ ಗನ್‌ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೋರ್ವ ಅನುಮಾನಾಸ್ಪದ ರೀತಿ ಸಾವನ್ನಪ್ಪಿರುವ ಘಟನೆ ಬೊಮ್ಮನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಿ.ಬಿ.ಜಗನ್ ಮೃತಪಟ್ಟ ಭದ್ರತಾ ಸಿಬ್ಬಂದಿ ಎಂದು ತಿಳಿದು ಬಂದಿದೆ. ಮಡಿಕೇರಿ ಮೂಲದ ಜಗನ್ ಕಳೆದೆರಡು ವರ್ಷಗಳಿಂದ ಸ್ಟಾರ್ ಸೆಕ್ಯೂರಿಟಿ ಏಜೆನ್ಸಿಯ ಮೂಲಕ ಸಾಫ್ಟ್ವೇರ್ ಕಂಪನಿಯೊಂದರಲ್ಲಿ ಭದ್ರತಾ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ.
ಇಂದು ಬೆಳಗ್ಗಿನ ಜಾವ 3:30ರ ಸುಮಾರಿಗೆ ಅವರ ಬಂದೂಕಿನಿಂದ ಗುಂಡು ಹಾರಿರುವ ಶಬ್ದ ಕೇಳಿ ಬಂದಿದೆ. ಸಹೋದ್ಯೋಗಿಗಳು ಆತನಿಗಾಗಿ ಹುಡುಕಾಟ ನಡೆಸಿದ್ದಾರೆ. ಆದರೆ, ಆತನ ಸುಳಿವು ಪತ್ತೆಯಾಗಿರಲಿಲ್ಲ. ಬಳಿಕ ಬೆಳಗ್ಗೆ ಹುಡುಕಾಟ ನಡೆಸಿದಾಗ ಜಗನ್ ಮೃತಪಟ್ಟಿರುವುದು ಕಂಡು ಬಂದಿದೆ.
ಸಾವಿನ ನಡುವೆ ಅನುಮಾನ
ಜಗನ್ ಕೆಲಸ ಮಾಡುತ್ತಿದ್ದ 100 ಮೀಟರ್ ದೂರದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಜೊತೆಗೆ ಕಾಲಿನಲ್ಲಿದ್ದ ಶೂಗಳು ಎಲ್ಲೆಂದರಲ್ಲಿ ಬಿದ್ದಿದ್ದವು, ಅವರ ಬಂದೂಕಿನಿಂದಲೇ ಗುಂಡು ಹಾರಿದ್ದು, ಬಂದೂಕು ಅವರ ಎದೆಯ ಮೇಲೆ ಬಿದ್ದಿತ್ತು. ಘಟನೆ ತಿಳಿದು ಬರುತ್ತಿದ್ದಂತೆ ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಮಹದೇವ್ ಜೋಶಿ ಸ್ಥಳಕ್ಕಾಗಮಿಸಿ ಪರಿಶೀಲಿಸಿದ್ದಾರೆ. ಎಫ್ಎಸ್ಎಲ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತಪಾಸಣೆ ನಡೆಸಿ, ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.