ಬೆಂಗಳೂರು : ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ವಿಚಾರಣಾಧೀನ ಕೈದಿಗಳಿಗೆ ಮಧ್ಯಂತರ ಜಾಮೀನು ಮತ್ತು ಶಿಕ್ಷೆಗೆ ಗುರಿಯಾಗಿರುವ ಕೈದಿಗಳಿಗೆ ಪೆರೋಲ್ ಮಂಜೂರು ಮಾಡಲು ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರ ಮುಖ್ಯಸ್ಥ ಹಾಗೂ ಹೈಕೋರ್ಟ್ ಹಿರಿಯ ನ್ಯಾಯಮೂರ್ತಿ ಅರವಿಂದ ಕುಮಾರ್ ನೇತೃತ್ವದ ಉನ್ನತಾಧಿಕಾರ ಸಮಿತಿ ಮಾರ್ಗಸೂಚಿ ರೂಪಿಸಿದೆ.
ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ ಸಮಿತಿ ಹಲವು ಮಾರ್ಗಸೂಚಿಗಳನ್ನು ರಚಿಸಿದೆ. ಮುಂದಿನ ಎರಡು ತಿಂಗಳು ಅಥವಾ ಸರ್ಕಾರ ಲಾಕ್‌ಡೌನ್ ಆದೇಶ ಹಿಂಪಡೆಯುವವರೆಗೆ ಜಾಮೀನು ಮತ್ತು ಪೆರೋಲ್ ನೀಡಬೇಕು. ಗರಿಷ್ಠ ಏಳು ವರ್ಷ ಶಿಕ್ಷಾರ್ಹ ಅಪರಾಧ ಪ್ರಕರಣಗಳಲ್ಲಿ ಜೈಲು ಸೇರಿರುವ ವಿಚಾರಣಾಧೀನ ಕೈದಿಗಳು ತಾತ್ಕಾಲಿಕ ಜಾಮೀನು ಮಂಜೂರು ಕೋರಿ ಅರ್ಜಿ ಸಲ್ಲಿಸಬಹುದು. ಈ ಅರ್ಜಿಗಳನ್ನು ಜಿಲ್ಲಾ ಅಥವಾ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರು ಗೃಹ ಕಚೇರಿಯಿಂದ ವಿಚಾರಣೆ ನಡೆಸಬೇಕು. ಜಾಮೀನು ಮಂಜೂರು ವೇಳೆ ಆಯಾ ಪ್ರಕರಣಕ್ಕೆ ಅನುಗುಣವಾಗಿ ಷರತ್ತುಗಳನ್ನು ವಿಧಿಸಬಹುದು. ಭದ್ರತಾ ಖಾತರಿ ಒದಗಿಸದವರನ್ನು ಬಿಡುಗಡೆಗೊಳಿಸುವಂತಿಲ್ಲ.
ಕೌಟುಂಬಿಕ ವ್ಯಾಜ್ಯ, ನ್ಯಾಯಾಂಗ ನಿಂದನೆ ಪ್ರಕರಣಗಳ ಕೈದಿಗಳನ್ನೂ ಬಿಡುಗಡೆ ಮಾಡಬೇಕು. ಈಗಾಗಲೇ ಪೆರೋಲ್ ಮೇಲಿರುವ ಕೈದಿಗಳ ಅವಧಿ ವಿಸ್ತರಿಸಲು ಜೈಲು ಪ್ರಾಧಿಕಾರಗಳು ಸೂಕ್ತ ಆದೇಶ ಹೊರಡಿಸಬಹುದು. ತಾತ್ಕಾಲಿಕ ಜಾಮೀನು ಮೇಲೆ ಬಿಡುಗಡೆಯಾದವರು ತಾವು ವಾಸಿಸುತ್ತಿರುವ ಪ್ರದೇಶದ ಬಗ್ಗೆ ತಿಂಗಳಿಗೊಮ್ಮೆ ಆಯಾ ವ್ಯಾಪ್ತಿಯ ಪೊಲೀಸ್ ಠಾಣೆಗೆ ವರದಿ ಸಲ್ಲಿಸಬೇಕು. ಇವೆಲ್ಲಕ್ಕಿಂತ ಮುನ್ನ ಪೆರೋಲ್ ಅಥವಾ ಮಧ್ಯಂತರ ಜಾಮೀನು ಮೇಲೆ ಬಿಡುಗಡೆಗೊಂಡ ಕೈದಿಗಳು ಸುರಕ್ಷಿತವಾಗಿ ಮನೆ ಸೇರುವಂತೆ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಮಾರ್ಗಸೂಚಿಯಲ್ಲಿ ವಿವರಿಸಲಾಗಿದೆ.
ಯಾರಿಗಿಲ್ಲ ಜಾಮೀನು-ಪೆರೋಲ್?: ಏಳಕ್ಕಿಂತ ಅಧಿಕ ವರ್ಷ ಶಿಕ್ಷೆ ವಿಧಿಸಬಹುದಾದ, ಭಯೋತ್ಪಾದನೆ, ಡ್ರಗ್ ಮಾರಾಟ, ಹಣ ಅಕ್ರಮ ವರ್ಗಾವಣೆ, ಮಹಿಳಾ ಮತ್ತು ಮಕ್ಕಳ ಮೇಲಿನ ಅಪರಾಧ ಪ್ರಕರಣ, ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣ ಹಾಗೂ ಕೋಕಾ ಕಾಯ್ದೆಯಡಿ ಬಂಧಿತ ಆರೋಪಿಗಳು, ರಾಷ್ಟ್ರೀಯ ಭದ್ರತೆ, ಎನ್‌ಐಎ ತನಿಖೆ ನಡೆಸುತ್ತಿರುವ ಪ್ರಕರಣಗಳು, ಆರ್ಥಿಕ ಅಪರಾಧಗಳು, ಬ್ಯಾಂಕುಗಳಿಗೆ ವಂಚಿಸಿದ ಪ್ರಕರಣಗಳ ಕೈದಿಗಳಿಗೆ ಪೆರೋಲ್ ಹಾಗೂ ತಾತ್ಕಾಲಿಕ ಜಾಮೀನು ನೀಡಬಾರದು ಎಂದು ಉನ್ನತಾಧಿಕಾರ ಸಮಿತಿ ಸ್ಪಷ್ಟಪಡಿಸಿದೆ.